ಲಕ್ಷ್ಮೀಕಾಂತಂ ಪ್ರಕರಣ: ಆಗಿನ ಕಾಲದ ಮೈ ನವಿರೇಳಿಸಿದ ನಿಗೂಢ ಕೊಲೆ ಕೇಸು

ದುರಾತ್ಮನಾದರೂ ಹುತಾತ್ಮನಾದ ಪತ್ರಕರ್ತ

 ಇದು 66 ವರ್ಷಗಳ ಹಿಂದಿನ ಒಂದು ರೋಚಕ ಕಥಾನಕ. ಅಂದಿನ ಮದ್ರಾಸ್ ರಾಜ್ಯದಲ್ಲಿನ 1944-47ರ ನಡುವಿನ ಕಥೆ.  ಅವನ ಹೆಸರು ಸಿ.ಎನ್.ಲಕ್ಷ್ಮೀಕಾಂತನ್ ಅಥವಾ ಲಕ್ಷ್ಮೀಕಾಂತಂ. ‘ಹಿಂದೂ ನೇಶನ್’ ಎಂಬ ಪ್ರಸಿದ್ಧ ಪತ್ರಿಕೆಯ ಜನಪ್ರಿಯ ಸಂಪಾದಕನಾಗಿದ್ದ. ಅಗ್ಗದ ಕಾಗದದಲ್ಲಿ ಅವನ ಈ ಪತ್ರಿಕೆ ಮುದ್ರಣವಾಗುತ್ತಿದ್ದರೂ ಜನ ಮುಗಿಬಿದ್ದು ಅದನ್ನೋದುತ್ತಿದ್ದರು. ಈ ಪತ್ರಿಕೆಯ ಪ್ರತಿಗಳು ‘ಬ್ಲ್ಯಾಕ್’ನಲ್ಲಿ ಸಹಾ ಮಾರಾಟ ಆಗುವಷ್ಟು ಜನಪ್ರಿಯವಾಗಿತ್ತು ‘ಹಿಂದೂ ನೇಶನ್’. ಮರ್ಯಾದಸ್ಥರೂ ಸಹಾ ಈ ಪತ್ರಿಕೆ ಕೊಂಡುಕೊಂಡೊಯ್ದು ಗುಟ್ಟಾಗಿ ಶೌಚಾಲಯದಲ್ಲೋ, ಶಯ್ಯಾಗೃಹದಲ್ಲೋ ಕುಳಿತು ಕದ್ದು ಓದುತ್ತಿದ್ದರು. ಅಷ್ಟು ರೋಚಕವಾಗಿತ್ತು ಲಕ್ಷ್ಮೀಕಾಂತಂನ ಪತ್ರಿಕೆ - ಅವನ ಬರವಣಿಗೆ - ಭಾಷಾಶೈಲಿ. ಅದರಲ್ಲೇನಿತ್ತು ಅಷ್ಟು ಕುತೂಹಲದಿಂದ ಓದಲಿಕ್ಕೆ? ಎಂತ ಕೇಳಿದರೆ, ಅದರಲ್ಲಿ ಓದಬಾರದ್ದು ಎಲ್ಲವೂ ಇರುತ್ತಿತ್ತು. ಮೊದಮೊದಲಿಗೆ ಸಿನಿಮಾ ನಟನಟಿಯರ ರಹಸ್ಯ ಸಂಬಂಧಗಳ ಸ್ವಾರಸ್ಯಕರ ಸಂಗತಿಗಳು ಬರಲಾರಂಭಿಸಿದ್ದರೆ, ಕ್ರಮೇಣ ಸಂಗೀತಗಾರರ, ಕಲಾವಿದರ ಪ್ರಣಯ ಪ್ರಸಂಗಗಳು, ವಿವಾಹೇತರ ಸಂಬಂಧಗಳು, ರಸಿಕತನದ ಘಟನೆಗಳು ಎಲ್ಲವನ್ನೂ ಸ್ವತಹಾ ತಾನೇ ಕಂಡಂತೆ ಬಣ್ಣ ಬಣ್ಣದ ಶಬ್ದಗಳಿಂದ, ರುಚಿಕಟ್ಟಾಗಿ, ರಸವತ್ತಾಗಿ ಬಣ್ಣಿಸುತ್ತಿದ್ದ ಲಕ್ಷ್ಮೀಕಾಂತಂ. ಪತ್ರಿಕೆ ಪ್ರಬಲವಾದಂತೆ, ಜನಪ್ರಿಯವಾದಂತೆ, ಅವನ ವ್ಯಾಪ್ತಿ ವಿಸ್ತಾರವಾಗುತ್ತಾ, ಭಾರೀ ಉದ್ಯಮಿಗಳ ರಾಸಕ್ರೀಡೆಗಳು, ಕಾಮೋತ್ತೇಜಕ ಕಥೆಗಳು, ಭಾರೀ ಭೂಮಾಲಿಕರ ಹೆಣ್ಣುಮರಳುತನ, ದೊಡ್ಡ ದೊಡ್ಡ ವಕೀಲರುಗಳು, ಡಾಕ್ಟರುಗಳು, ಪತ್ರಿಕೋದ್ಯಮಿಗಳು, ಶ್ರೀಮಂತರು, ಸ್ವಾಮಿಗಳು, ಸಂತರು, ಗುರುಗಳು - ಸಣ್ಣ, ದೊಡ್ಡವರೆನ್ನದೇ ಸಮಾಜದ ಎಲ್ಲ ಸ್ತರಗಳ ಜನಗಳ ಗುಟ್ಟುಗಳನ್ನೆಲ್ಲಾ ರಟ್ಟು ಮಾಡುವ ಪತ್ರಿಕೆಯಾಗಿ ‘ಹಿಂದೂ ನೇಶನ್’ ಮೆರೆದಿತ್ತು. ಅದರ ಸಂಪಾದಕ ಲಕ್ಷ್ಮೀಕಾಂತಂಗೆ ಸಂಪತ್ತು ಹರಿದುಬಂದಿತ್ತು. ಅವನ ಪತ್ರಿಕೆಯ ಬಾಯಿ ಮುಚ್ಚಿಸಲೆಂದೇ ಭ್ರಷ್ಟರು, ನೀತಿಗೆಟ್ಟವರೆಲ್ಲಾ ಹಣದ ಹೊಳೆ ಹರಿಯಿಸುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಲಕ್ಷ್ಮೀಕಾಂತಂ ಎಂಬ ಕುಖ್ಯಾತ ಪೀತ ಪತ್ರಕರ್ತ ಮದ್ರಾಸಿನ ದೊಡ್ಡ ಕುಳವಾಗಿಬಿಟ್ಟದ್ದ. ಆತ ಮುದ್ರಣಾಲಯ ಖರೀದಿಸಿದ. ಆಸ್ತಿ ಕೊಂಡುಕೊಂಡ. ಮನೆಗಳನ್ನು ಕಟ್ಟಿಕೊಂಡ. ಚಿನ್ನ ತೆಗೆದುಕೊಂಡ. ಅವನೇ ಭಾರೀ ಜನವಾಗಿಬಿಟ್ಟ !

ತೂಗುತ್ತಿತ್ತು ಕತ್ತಿ........ ತಲೆಯಮೇಲೆ
      ಆದರೆ ಲಕ್ಷ್ಮೀಕಾಂತಂಗೆ ಶತ್ರುಗಳು ಕಡಿಮೆ ಇರಲಿಲ್ಲ. ಅವನಿಗೂ ತನ್ನ ಶತ್ರುಗಳಾರು ಎಂಬುದು ಚೆನ್ನಾಗಿ ಗೊತ್ತಿತ್ತು. ಅವನನ್ನು ಮುಗಿಸಲು ಬಾಡಿಗೆ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದರು. ಆದರೂ ಆತ ಅದನ್ನೆದುರಿಸಿ ಬದುಕಿ ಬಂದಿದ್ದ. ಒಬ್ಬ ಬಾಡಿಗೆ ಗೂಂಡಾ ನಾಗಲಿಂಗಂ. ಲಕ್ಷ್ಮೀಕಾಂತಂ ಮನೆಗೆ ವರ್ಷಗಟ್ಟಲೆಯಿಂದ ಹಾಲು ಕೊಡುವವ. ಲಕ್ಷ್ಮೀಕಾಂತಂಗೆ ತೀರಾ ಪರಿಚಿತ ಈ ರೌಡಿ. ಆದರೂ ಹಲ್ಲೆ ಮಾಡಲು ಬಂದಿದ್ದವ ! ಲಕ್ಷ್ಮೀಕಾಂತಂ ದಿನಾ ಭೇಟಿಯಾಗುವ ಒಬ್ಬ ವ್ಯಕ್ತಿ ಎಂದರೆ ಅವನ ಆಪ್ತ ವಕೀಲ ಹಾಗೂ ಸ್ನೇಹಿತ ನರ್ಗುಣನ್ ಎಂಬಾತ. ಪ್ರತಿದಿನ ಸಂಜೆ ಕೋರ್ಟು ಮುಗಿದ ನಂತರ ನರ್ಗುಣನ್ ಭೇಟಿ ಮಾಮೂಲಾಗಿತ್ತು. ನರ್ಗುಣನ್ ಕಛೇರಿ ಇದ್ದುದು ಮದ್ರಾಸ್ ನಗರದ ವೆಪೇರಿಯ ಮಾಡ್ಡೊಸ್ ರಸ್ತೆಯಲ್ಲಿ. ಅಲ್ಲಿಂದ ಲಕ್ಷ್ಮೀಕಾಂತಂನ ಪುರಸವಾಕಂನ ಮನೆ ಇದ್ದ ಓಣಿಗೆ ಹೆಚ್ಚು ದೂರವಿರಲಿಲ್ಲ. ಆದರೂ ಲಕ್ಷ್ಮೀಕಾಂತಂಗೆ ಹೆದರಿಕೆ. ಅಂಗರಕ್ಷಕನನ್ನು ಇಟ್ಟುಕೊಂಡೇ ತಿರುಗಾಡುತ್ತಿದ್ದ. ಶ್ರೀನಿವಾಸುಲು ನಾಯ್ಡು ಅರ್ಥಾತ್ ಆರ್ಯವೀರ ಸೀನನ್ ಇವನ ಅಂಗರಕ್ಷಕ. ಆತ ಕುಸ್ತಿಪಟು. ಭಾರೀ ಮಲ್ಲ. ಭಾರ ಎತ್ತುವವ. ವ್ಯಾಯಾಮ ಶಾಲೆ ನಡೆಸುತ್ತಿದ್ದವ. ಹಿಂದೂ ಮತಾಂಧ ಕೂಡಾ. ಹಿಂದೂ ಮುಸ್ಲಿಂ ಗಲಭೆಯಲ್ಲಿದ್ದವ. ಚಲನಚಿತ್ರಗಳಲ್ಲಿ ಸ್ಟಂಟ್‍ಮ್ಯಾನ್ ಪಾತ್ರ ವಹಿಸುತ್ತಿದ್ದ. ಆತ ಇಲ್ಲದಿದ್ದಾಗ ರಾತ್ರಿವೇಳೆ ಈ ವಕೀಲ ನರ್ಗುಣನ್‍ನೇ ಲಕ್ಷ್ಮೀಕಾಂತಂನನ್ನು ಸೈಕಲ್‍ರಿಕ್ಷಾದಲ್ಲಿ  ಜತೆಗೂಡಿ ಮನೆಗೆಬಿಟ್ಟುಬರುತ್ತಿದ್ದ. ತನಗೇನಾದರೂ ಆದರೆ ತನ್ನ ವೃದ್ಧೆ ತಾಯಿ ಮತ್ತು ಅಂಧ ಅಣ್ಣನನ್ನು ಕಾಪಾಡಿ ಎಂದಿದ್ದ ಲಕ್ಷ್ಮೀಕಾಂತಂ. ಅವನ ಹೆಂಡತಿಗೂ, ಅವನಮ್ಮನಿಗೂ ಎಣ್ಣೆಸೀಗೆ. ಆತ ನಿಜಕ್ಕೂ ಆಕೆಯನ್ನು ಮದುವೆಯಾಗಿದ್ದನೇ ಎಂಬುದೂ ಅನುಮಾನವಿತ್ತು. ಕೆಲವೊಮ್ಮೆ ಲಕ್ಷ್ಮೀಕಾಂತಂ ಜತೆ ಧೈರ್ಯಕ್ಕೆ ಸಂಗೀತಗಾರ ಗೋಪಾಲಸ್ವಾಮಿ ಚೆಟ್ಟಿ ಇರುತ್ತಿದ್ದ.

ವಡಿವೇಲು ವಿರುದ್ಧ ಕಿಡಿ
      ಲಕ್ಷ್ಮೀಕಾಂತಂಗೆ ಒಬ್ಬ ಬಾಡಿಗೆ ಒಕ್ಕಲು ಇದ್ದ. ಅವನ ಹೆಸರು ವಡಿವೇಲು. ಮದ್ರಾಸ್‍ನ ಖ್ಯಾತ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಈತ ಇಂಗ್ಲೀಷ್‍ನ ಅಚ್ಚಿನ ಮೊಳೆ ಜೋಡಿಸುವ ದಿನಗೂಲಿ ಕೆಲಸ ಮಾಡುತ್ತಿದ್ದ. ಈ ವಡಿವೇಲುವನ್ನು ಕಂಡರೆ ಲಕ್ಷ್ಮೀಕಾಂತಂಗೆ ತಿರಸ್ಕಾರವಿತ್ತು. ಕೆಳವರ್ಗದವನೆಂಬ ತಾತ್ಸಾರವಿತ್ತು. ‘ನನ್ನ ಮನೆಬಿಟ್ಟು ಹೋಗು’ ಎಂದ ಲಕ್ಷ್ಮೀಕಾಂತಂ ಈ ವಡಿವೇಲುವಿಗೆ. ‘ನಾನೆಲ್ಲಿಗೆ ಹೋಗುವುದು - ಬಿಡುವುದಿಲ್ಲ’ ಎಂದ ವಡಿವೇಲು. ಅಷ್ಟು ಅಗ್ಗದ ಬಾಡಿಗೆಗೆ ಅವನಿಗೆ ಬೇರೆ ಮನೆ ಸಿಗಲಾರದು. ಬಡವ. ಮನೆಯಲ್ಲಿ ಅವನ ಸಹೋದರನ ವಿಧವೆ ಇದ್ದಳು. ಆಕೆಯೇ ಅವನಿಗೆ ಅಡುಗೆ ಮಾಡಿ ಹಾಕುತ್ತಿದ್ದವಳು. ಮನೆ ನಿಭಾಯಿಸಿಕೊಂಡು ಹೋಗುತ್ತಿದ್ದಳು. ಲಕ್ಷ್ಮೀಕಾಂತಂ ಅವರಿಬ್ಬರ ಮೇಲೂ ತನ್ನ ಪತ್ರಿಕೆಯಲ್ಲಿ ಬರೆದ. ಅವರಿಗೆ ಅಕ್ರಮ ಸಂಬಂಧ ಇದೆ ಎಂದು ಕಥೆ ಕಟ್ಟಿದ. ಅಸಹ್ಯ ಸಂಗತಿಗಳನ್ನೆಲ್ಲಾ ಹೌದೆಂಬಷ್ಟು ನೈಜವಾಗಿ ಆತ ಬರೆಯುತ್ತಿದ್ದ. ಇದರಿಂದ ಕುಪಿತನಾಗಿ ವಡಿವೇಲು ಮನೆಬಿಡಬಹುದು ಎಂಬುದು ಅವನ ಎಣಿಕೆ. ಆದರೆ ಅದು ಸುಳ್ಳಾಯಿತು. ವಡಿವೇಲು ಬೀದಿಯಲ್ಲೇ ಈ ಸಂಪಾದಕನೊಂದಿಗೆ ಜಗಳಾಡಿದ. ಉರುಡಾಟದಲ್ಲಿ ಲಕ್ಷ್ಮೀಕಾಂತಂಗೆ ಚೂರಿಗಾಯವೂ ಆಯಿತು. ಸಿಟ್ಟಾದ ಲಕ್ಷ್ಮೀಕಾಂತಂ ಅವನ ಮನೆ ಹೊಗ್ಗಿ ದಾಂಧಲೆ ಮಾಡಿದ. ಕನ್ನಡಿ, ಗಾಜು, ಪೀಠೋಪಕರಣ ಹುಡಿಹುಡಿ ಮಾಡಿದ. ವಡಿವೇಲು ವಿರುದ್ಧ ತಾನೇ ಪೋಲೀಸರಿಗೆ ದೂರು ನೀಡಿದ. ಆದರೆ ಪೋಲೀಸರು ದಿವ್ಯ ನಿರ್ಲಕ್ಷ್ಯ ತೋರಿದ್ದರು. ಹಾಗಾಗಿ ವಡಿವೇಲು ವಿರುದ್ಧ ಖಾಸಗಿ ದೂರು ಸಲ್ಲಿಸಲು ತನ್ನ ವಕೀಲ ನರ್ಗುಣನ್ ಕಛೇರಿಗೆ ಹೋಗಿದ್ದ ಲಕ್ಷ್ಮೀಕಾಂತಂ. ಅದು 1944ರ ನವೆಂಬರ್  8 ರಂದು.


       ಈ ಮಧ್ಯೆ ಮದ್ರಾಸಿನಲ್ಲೊಂದು ಭಯಂಕರ ಕೊಲೆ ನಡೆಯಿತು. ಅದು ‘ಬೋಟ್‍ಮೈಲ್ ಮರ್ಡರ್’ ಎಂದೇ ಹೆಸರಾಯಿತು. ರೈಲಿನಲ್ಲಿ ನಡೆದ ಕೊಲೆ ಅದು. ಮದ್ರಾಸು - ಧನುಷ್ಕೋಟಿ ನಡುವೆ ಆಗ ಒಂದು ಎಕ್ಸ್‍ಪ್ರೆಸ್ ರೈಲು ಓಡುತ್ತಿತ್ತು. ಶ್ರೀಲಂಕಾಕ್ಕೆ ಹೋಗುವ ಹಡಗುಗಳಿಗೆ ಈ ರೈಲು ಸಂಪರ್ಕ ಕೊಂಡಿಯಂತಿತ್ತು. ಹಾಗಾಗಿ ಅದಕ್ಕೆ ‘ಬೋಟ್‍ಮೈಲ್’ ಎಂಬ ಹೆಸರು ಬಂತು. ಲಕ್ಷ್ಮಣನ್ ಚೆಟ್ಟಿಯಾರ್ ಎಂಬ ಭಾರೀ ಬ್ಯಾಂಕರ್, ಶ್ರೀಮಂತ ಒಂದು ದಿನ ಈ ರೈಲಿನಲ್ಲಿ ಪಯಣಿಸುತ್ತಿದ್ದ. ರೈಲು ಮದ್ರಾಸಿನತ್ತ ವೇಗವಾಗಿ ಓಡುತ್ತಿರುವಾಗಲೇ, ದಟ್ಟರಾತ್ರಿಯ ಕಾರ್ಗತ್ತಲಲ್ಲಿ ಲಕ್ಷ್ಮಣನ್ ಚೆಟ್ಟಿಯಾರ್‍ನನ್ನು ಯಾರೋ ದಾರುಣವಾಗಿ  ಕೊಲೆ ಮಾಡಿಬಿಟ್ಟಿದ್ದರು. ದೊಡ್ಡ ದೊಡ್ಡವರೆಲ್ಲಾ ಈ ಕೊಲೆಯ ಹಿಂದೆ ಇದ್ದರು ಎಂಬ ಗುಮಾನಿ ಇದ್ದಿತು. ಓರ್ವ ಸಂಗೀತಗಾರ್ತಿ ನಟಿ ಈ ಚೆಟ್ಟಿಯಾರ್ ಜತೆಗೆ ಆಗ ಇದ್ದಿದ್ದಳು, ಅವಳೇ ಕೊಲೆಗೆ ಪ್ರತ್ಯಕ್ಷದರ್ಶಿ ಎಂತಲೂ ಸುದ್ದಿ ಇತ್ತು. ಆದರೆ ಕೊಲೆ ಪ್ರಕರಣ ನಿಗೂಢವಾಗಿ ಉಳಿದು ಹೋಯಿತು. ಪೋಲೀಸರಿಗೆ ಕೊಲೆಗಾರ ಯಾರು ಎಂಬುದೇ ಗೊತ್ತಾಗಲಿಲ್ಲ. ಇಷ್ಟೆಲ್ಲಾ ಆಗಿರುವಾಗ, ಆಗಿನ ಇಡೀ ಮದ್ರಾಸ್ ರಾಜ್ಯದ ಜನ ಕೊಲೆಗಾರರು ಯಾರು ಎಂದು ತಿಳಿಯುವ ಕುತೂಹಲದಲ್ಲಿರುವಾಗ, ಲಕ್ಷ್ಮೀಕಾಂತಂ ತನ್ನ ಪತ್ರಿಕೆಯಲ್ಲಿ ಬರೆದುಬಿಟ್ಟಿದ್ದ. ‘ಮುಂದಿನ ಸಂಚಿಕೆಯಲ್ಲಿ ‘ಬೋಟ್‍ಮೈಲ್ ಕೊಲೆ’ಯ ಕೊಲೆಗಾರರ ಹೆಸರು ಬಯಲುಮಾಡುತ್ತೇನೆ, ಕಾದುನೋಡಿ’ ಎಂದು ಪ್ರಕಟಿಸಿಬಿಟ್ಟಿದ್ದ. ಇಡೀ ರಾಜ್ಯವೇ ಇವನ ಪತ್ರಿಕೆಯ ಮುಂದಿನ ಸಂಚಿಕೆಗಾಗಿ ಕಾದುಕೊಂಡೇ ಇತ್ತು.

ಹಾಡ ಹಗಲಲ್ಲೇ ಹಲ್ಲೆ !
      ಹೀಗಿರುವಾಗ ಅಂದು, ಅಂದರೆ 1944ರ ನವಂಬರ್ 8ರಂದು, ಲಕ್ಷ್ಮೀಕಾಂತಂ ತನ್ನ ವಕೀಲ ನರ್ಗುಣನ್ ಕಛೇರಿಗೆ ಹೋದ. ವಡಿವೇಲು ವಿರುದ್ಧ ಖಾಸಗಿ ದೂರು ದಾಖಲಿಸಲು ಹೇಳಿದ. ‘ಈಗ ಮನೆಗೆ ಹೋಗು, ಆಮೇಲೆ ಕೋರ್ಟಿಗೆ ಬಾ’ ಎಂದ ನರ್ಗುಣನ್. ಸೈಕಲ್‍ರಿಕ್ಷಾ ಹತ್ತಿ ಮನೆಗೆ ಹೊರಟ ಲಕ್ಷ್ಮೀಕಾಂತಂ. ಗೋಪಾಲ್ ಎಂಬಾತ ಸೈಕಲ್‍ರಿಕ್ಷಾ ತುಳಿಯುತ್ತಿದ್ದ. ಲಕ್ಷ್ಮೀಕಾಂತಂ ಕೈಯಲ್ಲಿ ವಡೀವೇಲು ವಿರುದ್ಧದ ದಾಖಲೆಗಳು ಇದ್ದುವು. ಮಾಡ್ಡೋಸ್ ರಸ್ತೆಯಿಂದ ಜನರಲ್ ಕಾಲಿನ್ಸ್ ರಸ್ತೆಯ ಮೂಲಕ ಪುರಸವಾಕಂನಲ್ಲಿನ ತನ್ನ ಮನೆಗೆ ಬರುವ ತಿರುವಿಗೆ ಬಂದಿದ್ದ ಲಕ್ಷ್ಮೀಕಾಂತಂ ನಿರ್ಜನ ಪ್ರದೇಶ ಅದು. ಸ್ವಲ್ಪ ಮುಂದೆ ಬಂದರೆ ಒಂದು ಬದಿಯಲ್ಲಿ ಮನೆಗಳು, ಇನ್ನೊಂದು ಬದಿಯಲ್ಲಿ ಆಟದ ಮೈದಾನ. ಹಠಾತ್ ಅಪರಿಚಿತ ದುಷ್ಕರ್ಮಿಗಳಾರೋ ಲಕ್ಷ್ಮೀಕಾಂತಂ ಕುಳಿತ ಸೈಕಲ್‍ರಿಕ್ಷಾದ ಮೇಲೆ ಎರಗಿದ್ದರು. ಚಾಲಕ ಗೋಪಾಲ್ ಹೆದರಿ ಓಡಿಬಿಟ್ಟ. ರಿಕ್ಷಾ ಬುಡಮೇಲಾಗಿ ಮಗುಚಿಬಿತ್ತು. ಲಕ್ಷ್ಮೀಕಾಂತಂ ಮೇಲೆ ಈ ಜನ ಹಲ್ಲೆ ಮಾಡಿದರು. ಒಬ್ಬನಂತೂ ಒಂದು ಚೂರಿ ಹೊರತೆಗೆದು ಅವನ ಕಿಬ್ಬೊಟ್ಟೆಗೆ ಇರಿದುಬಿಟ್ಟ ! ಇಷ್ಟಾಗುತ್ತಲೇ ಕ್ಷಣಮಾತ್ರದಲ್ಲಿ ಹಲ್ಲೆಕೋರರೆಲ್ಲಾ ದಿಕ್ಕುದಿಕ್ಕಿಗೆ ಚಲ್ಲಾಪಿಲ್ಲಿ, ಪರಾರಿ, ಕಣ್ಮರೆ ! ಹಾಡ ಹಗಲಲ್ಲೇ ಈ ಹಲ್ಲೆ ನಡೆದಿತ್ತು.

ಹಲ್ಲೆ ಮಾಡಿದ್ದು ‘ಅವನೋ ?’ - ‘ಯಾವನೋ?’
     ಲಕ್ಷ್ಮೀಕಾಂತಂಗೆ ಗಾಯದಿಂದ ರಕ್ತ ಪ್ರವಹಿಸುತ್ತಿತ್ತು. ಆದರೆ ಲಕ್ಷ್ಮೀಕಾಂತಂ ಎದೆಗುಂದುವ ಆಸಾಮಿಯೇ ಅಲ್ಲ. ಸುರಿಯುತ್ತಿದ್ದ ರಕ್ತವನ್ನೂ ಲೆಕ್ಕಿಸದೇ, ಗಾಯವನ್ನು ಕೈಯಲ್ಲಿ ಒತ್ತಿ ಹಿಡಿದೇ ಲಕ್ಷ್ಮೀಕಾಂತಂ ನೇರ ನಡೆದದ್ದು ಆಸ್ಪತ್ರೆಗಲ್ಲ - ವಕೀಲ ನರ್ಗುಣನ್ ಬಂಗಲೆಗೆ. ಅಷ್ಟೊತ್ತಿಗಾಗಲೇ ಯಾರೋ ದಾರಿಹೋಕರಿಂದ ಹಲ್ಲೆ ಸಂಗತಿ ತಿಳಿದ ನರ್ಗುಣನ್ ಬಂಗಲೆಯಲ್ಲಿನ ತನ್ನ ಕಛೇರಿಯಿಂದ ಕೆಳಗಿಳಿದು ಬೀದಿ ಬದಿಗೆ ಬಂದು ನಿಂತಿದ್ದ. ಲಕ್ಷ್ಮೀಕಾಂತಂ ಬಣ್ಣಿಸಿದ ಹಲ್ಲೆಯ ವಿವರಗಳನ್ನೆಲ್ಲಾ ಆಲಿಸಿದ. ಲಕ್ಷ್ಮೀಕಾಂತಂ ಹಲ್ಲೆ ಮಾಡಿದ್ದು ‘ಅವನೇ’ ಎಂತಲೋ, ‘ಯಾವನೋ’ ಎಂತಲೋ ಅಸ್ಪಸ್ಟವಾಗಿ ಹೇಳಿದ್ದ. ಆದರೆ ಆತ ಹಲ್ಲೆಕೋರನ ಹೆಸರು ಹೇಳಿರಲಿಲ್ಲ. ಸುರಿಯುತ್ತಿದ್ದ ರಕ್ತ ಕಂಡು, ದಾರಿಯಲ್ಲಿ ಬರುತ್ತಿದ್ದ ತನ್ನ ಕಕ್ಷಿಗಾರ ಮಿ.ಬ್ರೂ ಎಂಬ ಆಂಗ್ಲೋ ಇಂಡಿಯನ್‍ನನ್ನು ಜತೆ ಮಾಡಿ ಇನ್ನೊಂದು ಸೈಕಲ್‍ರಿಕ್ಷಾದಲ್ಲಿ ಲಕ್ಷ್ಮೀಕಾಂತಂನನ್ನು ಒಂದು ಮೈಲಿ ದೂರದಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಕಛೇರಿಗೆ ನಡೆದ ನರ್ಗುಣನ್. ಮಿ.ಬ್ರೂ ಇನ್ನೊಂದು ರಿಕ್ಷಾದಲ್ಲಿ ಹಿಂಬಾಲಿಸಿದ. 

ಕೃಷ್ಣನ್ ನಂಬಿಯಾರ್ ಕಿತಾಪತಿ !
      ಲಕ್ಷ್ಮೀಕಾಂತಂಗೆ ಹುಂಬ ಧೈರ್ಯ. ನೇರ ಆಸ್ಪತ್ರೆಗೆ ಹೋಗುವ ಬದಲು, ದಾರಿಯಲ್ಲಿ ವೆಪೇರಿ ಪೋಲೀಸ್ ಠಾಣೆ ಎದುರು ರಿಕ್ಷಾ ನಿಲ್ಲಿಸಿಕೊಂಡ. ಮಿ.ಬ್ರೂ ಹೋಗಿ ಠಾಣೆಗೆ ಸುದ್ದಿ ಮುಟ್ಟಿಸಿ, ತನ್ನ ಕೆಲಸಕ್ಕೆ ತಾನು ಹೊರಟುಹೋದ. ಠಾಣೆಯಲ್ಲಿದ್ದ ಪೋಲೀಸ್ ಸಬ್‍ಇನ್‍ಸ್ಪೆಕ್ಟರ್ ಕೃಷ್ಣನ್ ನಂಬಿಯಾರ್ ಹೊರಬಂದು ರಿಕ್ಷಾದಲ್ಲಿ ಕುಳಿತ ಈ ಗಾಯಾಳು ಹೇಳಿದ್ದನ್ನೆಲ್ಲಾ ಕೇಳಿದ. ಒಂದು ಕಾಲನ್ನು ರಿಕ್ಷಾದ ಮೇಲಿಟ್ಟುಕೊಂಡು, ತೊಡೆಯ ಮೇಲೆಯೇ ಬಿಳಿ ಕಾಗದದ ಚೂರು ಇರಿಸಿಕೊಂಡು ಆತ ಇಂಗ್ಲೀಷಿನಲ್ಲಿ ಹೇಳಿದ್ದನ್ನೆಲ್ಲಾ ಬರೆದುಕೊಂಡ. ಆದರೆ ದೂರು ದಾಖಲು ಪುಸ್ತಕದಲ್ಲಿ ದೂರು ನೊಂದಾಯಿಸಲಿಲ್ಲ. ನಂತರ ಈ ದೂರಿನಲ್ಲಿ ಬೇರೆ ಬೇರೆ ಶಾಯಿಯಲ್ಲಿ ಅಲ್ಲಲ್ಲಿ ತಿದ್ದಿದ್ದು ಕಂಡುಬಂತು. ಲಕ್ಷ್ಮೀಕಾಂತಂ ಏನು ಹೇಳಿದ್ದನೋ - ದೂರಿನಲ್ಲಿ ‘ವಡಿವೇಲು ಮತ್ತು 30ರ ಪ್ರಾಯದ ಇನ್ನೊಬ್ಬ’ ಎಂದಿತ್ತು !

ಆಸ್ಪತ್ರೆಯಲ್ಲೇನಾಯಿತು ?
     ಅಂತೂ ಲಕ್ಷ್ಮೀಕಾಂತಂ ಆಸ್ಪತ್ರೆ ತಲುಪಿದ. ಹೊರರೋಗಿಯಾಗಿ ಅವನನ್ನು ಉಪಚರಿಸಿ ಚಿಕಿತ್ಸೆ ಕೊಟ್ಟವರು ಡಾ.ಎ.ಕೆ.ಜೋಸೆಫ್. ಅಲ್ಲಿಯೂ ತನ್ನ ಮೇಲೆ ಹಲ್ಲೆ ನಡೆಸಿದವರು ಯಾರು ಎಂದು ಲಕ್ಷ್ಮೀಕಾಂತಂ ಹೇಳಲೇ ಇಲ್ಲ. ಆಸ್ಪತ್ರೆಯ ರಿಜಿಸ್ಟರಿನಲ್ಲಿ ಹಲ್ಲೆಕೋರ ‘ಅಪರಿಚಿತ’ ಎಂದು ಬರೆದಿತ್ತು. ಗಾಯ ಸರಳವಾಗಿತ್ತು. ಆದರೆ ಚಿಕಿತ್ಸೆಗೆ ರಕ್ತಸ್ರಾವ ನಿಲ್ಲಲಿಲ್ಲ. ಲಕ್ಷ್ಮೀಕಾಂತಂಗೆ ಸಂಕಟವಾಗಹತ್ತಿತ್ತು. ಆಗ ಅಲ್ಲಿದ್ದವರು ಮದ್ರಾಸಿನ ಆಗಿನ ಖ್ಯಾತ ಸರ್ಜನ್ ಡಾ.ನಾಡಕರ್ಣಿಮಂಗೇಶ್‍ರಾವ್. ಅವನನ್ನು ಒಳರೋಗಿಯಾಗಿಸಿದ ಅವರು ಗಾಯದ ಆಳ ಪರೀಕ್ಷೆಗೆ ಡಾ.ಪಿ.ಆರ್.ಬಾಲಕೃಷ್ಣನ್‍ಗೆ ಆದೇಶಿಸಿ ಬೇರೆ ದೊಡ್ಡ ಶಸ್ತ್ರಚಿಕಿತ್ಸೆಗೆ ತೆರಳಿದರು. ಬಾಲಕೃಷ್ಣನ್ ‘ಬಿಪಿ ತೀರಾ ಕಡಿಮೆ ಇದೆ’ ಎಂದ. ಆಗ ಒಳಗಾಯಕ್ಕಾಗಿ ಕಿಬ್ಬೊಟ್ಟೆ ತೆರೆದರೆ ಅಪಾಯ ಎಂದರು ಡಾ.ನಾಡಕರ್ಣಿ. ಹೊರಗಿನಿಂದಲೇ ರಕ್ತಸ್ರಾವ ನಿಲ್ಲಲು ಮದ್ದುಕೊಡಿ ಎಂದರು. ಆದರೂ ಬಾಲಕೃಷ್ಣನ್ ನಂತರ ಕಿಬ್ಬೊಟ್ಟೆ ಬಗೆದುಬಿಟ್ಟರು !

ಶವವಾದ ಲಕ್ಷ್ಮೀಕಾಂತಂ 
      ಇಷ್ಟರಲ್ಲಿ ನರ್ಗುಣನ್ 2 ಸಲ ಆಸ್ಪತ್ರೆಗೆ ಬಂದು ಹೋಗಿದ್ದ. ಆಸ್ಪತ್ರೆಯಲ್ಲಿ ಮಲಗಿಕೊಂಡೇ ಲಕ್ಷ್ಮೀಕಾಂತಂ ನಗುಮುಖದಿಂದ ಮಾತಾಡಿದ್ದ. ತನ್ನದೇ ಅಶ್ಲೀಲ ಭಾಷೆಯಲ್ಲಿ ಒದರಿದ್ದ. ‘ನಾಳೆ ನಾಡಿದ್ದರಲ್ಲಿ ಹೊರಬರುತ್ತೇನೆ - ಆ ಸೂಳೆಮಕ್ಕಳಿಗೆ ಬುದ್ಧಿ ಕಲಿಸುತ್ತೇನೆ’ ಎಂದಿದ್ದ. ಈ ಮಧ್ಯೆ ರಿಕ್ಷಾ ಚಾಲಕ ಗೋಪಾಲ್ ರಕ್ತಸಿಕ್ತ ಚೂರಿಯನ್ನು ಪೋಲೀಸರ ಕೈಗೆ ಕೊಟ್ಟಿದ್ದ. ಆದರೆ ಪೋಲೀಸರು ಅದನ್ನು ದಾಖಲಿಸಿರಲೇ ಇಲ್ಲ.  ವಡಿವೇಲು ವಿರುದ್ಧದ ರಿಕಾರ್ಡು ಸಹಾ ರಕ್ತಸಿಕ್ತವಾಗಿತ್ತು. ಅದನ್ನು ನರ್ಗುಣನ್ ಎತ್ತಿಕೊಂಡು ಹೋಗಿದ್ದ. ಅದು ಕೊನೆಗೂ ಹೊರಬರಲೇ ಇಲ್ಲ. ಆಸ್ಪತ್ರೆಯ ಹೊರಗೆ ಜನ ಸೇರಹತ್ತಿದ್ದರು. ರಾತ್ರಿಯಾದಂತೆ ಲಕ್ಷ್ಮೀಕಾಂತಂ ಸಂಕಟ ಉಲ್ಬಣಿಸುತ್ತಾ ಹೋಯಿತು. ಬೆಳಗ್ಗಿನ ಜಾವ ಅವನ ಸ್ಥಿತಿ ವಿಷಮವಾಯಿತು. ತಾ.9ರ ಮುಂಜಾನೆ 4-15ರ ಹೊತ್ತಿಗೆ ಲಕ್ಷ್ಮೀಕಾಂತಂ ಎಂಬ ಪ್ರಸಿದ್ಧ ಪತ್ರಿಕೆ ಮಾಲಕ - ಸಂಪಾದಕ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಲ್ಲೇ ಶವವಾಗಿಬಿಟ್ಟಿದ್ದ ! 

ಕೊಂದವರು ಯಾರು ?
        ಆತ ಸಾಯುತ್ತಾನೆಂತ ನರ್ಗುಣನ್ ಎಣಿಸಿರಲೇ ಇಲ್ಲ ! ಕಿಡ್ನಿಗೆ ಹಾನಿಯಾಗಿ ಆದ ಆಘಾತದಿಂದ ಲಕ್ಷ್ಮೀಕಾಂತಂ ಸತ್ತ ಎಂದು ಬರೆದಿತ್ತು ಮರಣೋತ್ತರ ಪರೀಕ್ಷೆಯಲ್ಲಿ. ದೇಹದಲ್ಲಿ ಎರಡೆರಡು ಗಾಯಗಳಿದ್ದವು. ಎರಡು ಹೊಲಿಗೆ ಇತ್ತು.  ಅಂದರೆ ಆಸ್ಪತ್ರೆಯಲ್ಲಿ ಅವನ ಕಿಡ್ನಿಗೆ ಚೂರಿಹಾಕಲಾಯಿತೇ ? ಆಸ್ಪತ್ರೆಯಲ್ಲೇ ಅವನನ್ನು ಕೊಂದು ಹಾಕಿದರೇ ? ಅವನ ಮೂತ್ರದಲ್ಲಿ ರಕ್ತ ಇದ್ದಿತ್ತು. ಹಲ್ಲೆಯಲ್ಲಾದ ಗಾಯ ಮರಣಾಂತಿಕವಾಗಿರಲಿಲ್ಲ - ಆಸ್ಪತ್ರೆಯಲ್ಲಿ ಮಾಡಿದ ಗಾಯ ಮರಣಾಂತಿಕವಾಯಿತೇ ? ಲಕ್ಷ್ಮೀಕಾಂತಂನನ್ನು ಕೊಂದವರಾರು ? ಡಾಕ್ಟರರೇ ? ಲಕ್ಷ್ಮಣ್ ಚೆಟ್ಟಿಯಾರ್‍ನನ್ನು ಮುಗಿಸಿದವರೇ? ವಡಿವೇಲುವೇ ? ರೌಡಿ ನಾಗಲಿಂಗಂನೇ ? ಅವನದೇ ಅಂಗರಕ್ಷಕ ಆರ್ಯವೀರ ಸೀನನ್‍ನೇ ? ಅಥವಾ ಅವನ ಪತ್ರಿಕೆಯಿಂದ ಮಾನಹಾನಿಗೆ ಒಳಗಾದ ಪ್ರತಿಷ್ಠಿತರೇ ? ಮದ್ರಾಸು ಪೋಲೀಸರಿಗೆ ಈ ಕೊಲೆಯೂ ಒಂದು ಸವಾಲಾಯಿತು. ನಿಗೂಢತೆ ಹೆಚ್ಚಿತು. ಮುಂದೇನಾಯಿತು ? ಅನಾಹುತವೇ ಆಯಿತು ! 

      ಲಕ್ಷ್ಮೀಕಾಂತಂನ ‘ಹಿಂದೂ ನೇಶನ್’ ಪೀತ ಪತ್ರಿಕೆಯೇ ಆದರೂ, ಅದರಲ್ಲಿ ಬರುತ್ತಿದ್ದ ಕಥೆಗಳೆಲ್ಲಾ ದೊಡ್ಡ ಮನುಷ್ಯರ ರಸಿಕ ಜೀವನದ ಕುರಿತೇ ಆಗಿರುತ್ತಿತ್ತು. ಪ್ರಸಿದ್ಧ ನಟ ನಟಿಯರು, ಸಂಗೀತಗಾರರು, ಕಲಾವಿದರು, ಉದ್ಯಮಿಗಳು, ಜಮೀನ್ದಾರರುಗಳು, ಡಾಕ್ಟರರು, ವಕೀಲರು, ಸಾಧುಸಂತರು, ಸ್ವಾಮಿಗಳ - ಕಾಮುಕತೆ, ಹೆಣ್ಣುಮರುಳುತನಗಳನ್ನೇ ಎಳೆ ಸಿಕ್ಕರೂ ಸಾಕು ಅಧಿಕೃತ ಎಂಬಂತೆ ಬರೆಯುತ್ತಿದ್ದ ಲಕ್ಷ್ಮೀಕಾಂತಂ ಬರಹ ಎಲ್ಲಾ ವರ್ಗದ ಜನಕ್ಕೆ ಅಚ್ಚುಮೆಚ್ಚಾಗಿತ್ತು. ಅಪಾರ ಪ್ರಸಾರ ಸಂಖ್ಯೆ ಹೊಂದಿತ್ತು ‘ಹಿಂದೂ ನೇಶನ್’. ದೊಡ್ಡವರ ಇಂತಹ ಸಣ್ಣತನದ ಕಥೆಗಳನ್ನು ಓದಲು ಸಾಮಾನ್ಯ ಜನಕ್ಕೆ ಖುಷಿಯಾಗಿರುತ್ತಿತ್ತು. ಅವರ ದೃಷ್ಠಿಯಲ್ಲಿ ದೊಡ್ಡವರ ಕೆಟ್ಟ ಕೆಲಸಗಳನ್ನು ಬಯಲಿಗೆಳೆಯುವ ಲಕ್ಷ್ಮೀಕಾಂತಂ ಒಬ್ಬ ವೀರಪುರುಷ. ಅವನ ಬಗ್ಗೆ ಅವರಿಗೆಲ್ಲಾ ಅಭಿಮಾನವಿತ್ತು. ಅವನ ಹುಚ್ಚು ಧೈರ್ಯವನ್ನು ಕೊಂಡಾಡುತ್ತಿದ್ದರು ಜನ. ತಾನು ಮಾಡುತ್ತಿದ್ದುದು ಹೇಸಿ ಕೆಲಸವಾಗಿದ್ದರೂ, ಲಕ್ಷ್ಮೀಕಾಂತಂ ಅದರಿಂದಾಗಿಯೇ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಎಂಬುದು ವಿಚಿತ್ರ ಆದರೂ ಸತ್ಯ ಸಂಗತಿಯಾಗಿತ್ತು.

ಐತಿಹಾಸಿಕವಾದ ಅಂತಿಮಯಾತ್ರೆ 
       ಹೀಗಾಗಿ, ಲಕ್ಷ್ಮೀಕಾಂತಂ ಮೇಲೆ ಹಲ್ಲೆ ನಡೆದು ಅವನ ಕೊಲೆಯಾಯಿತು ಎಂದು ಸುದ್ದಿ ಹಬ್ಬಿದ್ದೇ ತಡ, ಸರಕಾರಿ ಆಸ್ಪತ್ರೆಯ ಮುಂದೆ ಭಾರೀ ಜನಸಂದಣಿಯೇ ಸೇರಲಾರಂಭಿಸಿತು. ನೂಕುನುಗ್ಗಲು ಶುರುವಾಯಿತು. ಜನ ಪ್ರವಾಹದೋಪಾದಿಯಲ್ಲಿ ಧಾವಿಸಿ ಬರುತ್ತಿರುವಾಗ, ಅವರನ್ನು ನಿಯಂತ್ರಿಸಲು ಮದ್ರಾಸಿನ ಪೋಲೀಸರಿಗೆ ಸಾಕೋ ಸಾಕಾಯಿತು. ಒಂದು ಬೆಂಚಿನ ಮೇಲೆ ಸಂಪಾದಕ ಲಕ್ಷ್ಮೀಕಾಂತಂನ ಪಾರ್ಥಿವ ಶರೀರ ಇರಿಸಿದ್ದಾಗ ಅಂತಿಮ ದರ್ಶನಕ್ಕೆಂದೇ ನುಗ್ಗಾಟ ಶುರುವಾಯಿತು. ಸಾವಿರಾರು ಜನ ಬಂದು ಅಂತಿಮ ಗೌರವ ಸಲ್ಲಿಸಿದರು. ಬಂದವರೆಲ್ಲಾ ಕೈಯಲ್ಲಿ ಹೂ, ಹಾರ ಹಿಡಿದು ಬಂದ ಕಾರಣ ಲಕ್ಷ್ಮೀಕಾಂತಂ ಶವ ಹೂವಿನಲ್ಲಿ ಮುಚ್ಚಿ ಹೋಯಿತು. ನಂತರ ಶವದ ಸಂಸ್ಕಾರಕ್ಕಾಗಿ ನಡೆದ ಅಂತಿಮ ಯಾತ್ರೆ - ಮೆರವಣಿಗೆ ಮದ್ರಾಸಿನಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಐತಿಹಾಸಿಕ ಘಟನೆಯಾಯಿತು. ಅಷ್ಟೊಂದು ಜನ ಮೆರವಣಿಗೆಯಲ್ಲಿದ್ದರು. ಜನ ಎಡೆಬಿಡದೇ ಅಳುತ್ತಿದ್ದರು - ಹಲವರು ಎದೆ ಎದೆ ಬಡಿದುಕೊಳ್ಳುತ್ತಿದ್ದರು. ಲಕ್ಷ್ಮೀಕಾಂತಂ ಸ್ವತಃ ಕನಸು  ಮನಸಿನಲ್ಲೂ ಎಣಿಸದ ರೀತಿಯಲ್ಲಿ ಮದ್ರಾಸಿನ ಜನ ಅವನನ್ನು ಈ ಲೋಕದಿಂದ ಬೀಳ್ಕೊಟ್ಟ ರೀತಿ ಅವಿಸ್ಮರಣೀಯವಾಗಿತ್ತು ! ‘ಬೋಟ್ ಮೈಲ್’ ಕೊಲೆಗಾರರ ಹೆಸರಿಗೆ ಮುಂದಿನ ಸಂಚಿಕೆ ನೋಡಿ ಎಂದು ಬರೆದಿದ್ದ ಅವನ ಮುಂದಿನ ಸಂಚಿಕೆ ಕೊನೆಗೂ ಹೊರ ಬರಲೇ ಇಲ್ಲ ! ‘ಬೋಟ್‍ಮೈಲ್’ ಕೊಲೆಯ ಅಪರಾಧಿಗಳ ಪ್ರವರಗಳೆಲ್ಲಾ ಲಕ್ಷ್ಮೀಕಾಂತಂ ನಿರ್ಗಮನದೊಂದಿಗೇ ನಿಗೂಢವಾಗಿ ಮುಚ್ಚಿ ಹೋಗಿಬಿಟ್ಟುವು ! ಕೊಲೆಗಾರರು ನಿರಾಳವಾಗಿ ನಿಟ್ಟುಸಿರು ಬಿಟ್ಟರು. ಆದರೆ ಇನ್ನೊಂದು ಕೊಲೆಯ ತನಿಖೆ ಶುರುವಾಗಿತ್ತು - ಅದೇ ಲಕ್ಷ್ಮೀಕಾಂತಂ ಕೊಲೆ ಪ್ರಕರಣದ ತನಿಖೆ. ಪೋಲೀಸ್ ಇನ್ಸ್‍ಪೆಕ್ಟರ್ ಕೇಶವ ಮೆನನ್ ಈ ಕೊಲೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದ.

ಲಕ್ಷ್ಮೀಕಾಂತಂ ಕಥೆ ಕೇಳಿ 
        ಇಷ್ಟಕ್ಕೆಲ್ಲಾ ಕಾರಣನಾದ ‘ಹಿಂದೂ ನೇಶನ್’ ಪತ್ರಿಕೆಯ ಸಂಪಾದಕ ಲಕ್ಷ್ಮೀಕಾಂತಂ ಯಾರು, ಅವನ ಹಿನ್ನಲೆ ಏನು ಎಂದು ಹುಡುಕ ಹೊರಟಾಗ ಅದೊಂದು ಸಿನಿಮೀಯ ಕಥೆಯಂತೆಯೇ ಇತ್ತು.
       ಯುವಕ ಲಕ್ಷ್ಮೀಕಾಂತಂಗೆ ತಾನೊಬ್ಬ ವಕೀಲನಾಗಬೇಕು ಎಂಬ ಹಂಬಲವಿತ್ತು. ಆದರೆ ವಕೀಲ ವ್ಯಾಸಂಗಕ್ಕೆ ಬೇಕಾದಷ್ಟು ಹಣ ಇರಲಿಲ್ಲ - ನಿರಾಶೆ. ವಕೀಲಿ ಬದಲು ಆತ ಕಂಡುಕೊಂಡದ್ದು ತಡೆಹಿಡುಕತನ - ಅಥವಾ - ಮಧ್ಯವರ್ತಿವೃತ್ತಿ. ವಕೀಲರಿಗೆ ಕೇಸುಗಳನ್ನು ತಂದುಕೊಡುವುದು, ಅದರಲ್ಲಿ ಕಮಿಷನ್ ಪಡೆಯುವುದು ಮಾಡುತ್ತಿದ್ದ. ಹಾಗೆಯೇ ಮರಿ ವಕೀಲನಂತೆ ಅಲ್ಪಸ್ವಲ್ಪ ಕಾನೂನು ತಿಳಿದುಕೊಂಡು ವಿಲ್ ನಾಮೆ ಇತ್ಯಾದಿ ಬರೆಯಲು ಕಲಿತ. ಮುಗ್ಧ ಕಕ್ಷಿಗಾರರಿಗೆ ಮಾರ್ಗದರ್ಶನ ಮಾಡುವ ನೆಪದಲ್ಲಿ ಹಣ ಸಂಪಾದಿಸಿದ. ಹೀಗೆ ದಾಖಲೆ ಸೃಷ್ಠಿಮಾಡುವುದರಲ್ಲಿ  ನಿಸ್ಸೀಮನಾದ ಲಕ್ಷ್ಮೀಕಾಂತಂ ಒಂದು ಅಫಿದಾವಿತ್ ಫೋರ್ಜರಿ ಮಾಡಿಬಿಟ್ಟ. ಅದು ಮದ್ರಾಸ್ ಹೈಕೋರ್ಟಿನ ಸೆಶನ್ಸ್ ವಿಭಾಗದ ನ್ಯಾಯಾಲಯದ ಕಣ್ಣಿಗೆ ಬಿದ್ದಾಗ, ಕಾನೂನಿನ ಕಣ್ಣಿಗೆ ಮಣ್ಣೆರಚಿ, ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಿಹೋದ. ಅಲ್ಲಿ, ಇಲ್ಲಿ ಗಮ್ಮತ್ತಿನಲ್ಲಿ ನಿರಾತಂಕವಾಗಿ ತಿರುಗಾಡುತ್ತಿದ್ದ ಲಕ್ಷ್ಮೀಕಾಂತಂನನ್ನು ಅಂತೂ ಪೋಲೀಸರು ಹಿಡಿದುಬಿಟ್ಟರು.

ರೈಲು, ಜೈಲು, ಕೋಳ....ಮಾಯ
       ಲಕ್ಷ್ಮೀಕಾಂತಂ ಮೇಲೆ ಕ್ರಿಮಿನಲ್ ಪ್ರಕರಣ ನಡೆದು ಏಳು ವರ್ಷದ ಜೈಲಿನ ಶಿಕ್ಷೆ ವಿಧಿಸಿಬಿಟ್ಟರು. ಪೋಲೀಸರು ಅವನನ್ನು ಆಗ ಮದ್ರಾಸ್ ರಾಜ್ಯಕ್ಕೆ ಸೇರಿದ್ದ, ಈಗ ಆಂಧ್ರಪ್ರದೇಶದಲ್ಲಿರುವ, ರಾಜಮಹಂದ್ರಿ ಜೈಲಿಗೆ ಕೊಂಡೊಯ್ಯುತ್ತಿದ್ದರು. ರೈಲಿನಲ್ಲಿ ಪೋಲೀಸರ ಮಧ್ಯೆ ಕೈಗೆ ಕೋಳ ತೊಡಿಸಿಕೊಂಡು ಕುಳಿತಿದ್ದ ಲಕ್ಷ್ಮೀಕಾಂತಂ. ಹೇಗಾದರೂ ಈ ಪೋಲೀಸರಿಂದ ಪಾರಾಗಬೇಕು ಎಂತಲೇ ಯೋಚಿಸುತ್ತಿದ್ದ. ರೈಲು ಆಂಧ್ರದ ನದಿಯೊಂದನ್ನು ದಾಟಲು ಸೇತುವೆಯ ಮೇಲೆ ಚಲಿಸುತ್ತಿತ್ತು. ತಡರಾತ್ರಿ. ಸುತ್ತೆಲ್ಲಾ ಕತ್ತಲು. ಪೋಲೀಸರ ಬಳಿ ಶೌಚಾಲಯಕ್ಕೆ ಹೋಗಿ ಬರುವೆನೆಂದು ಹೇಳಿ ಎದ್ದು ಹೋದ ಲಕ್ಷ್ಮೀಕಾಂತಂ ಮರಳಿ ರೈಲಿಗೆ ಬರಲೇ ಇಲ್ಲ ! ಕೈಗಳಿಗೆ ಹಾಕಿದ್ದ ಬೇಡಿ ಹಾಕಿದ್ದಂತೆಯೇ ಇರುವಾಗಲೇ ರೈಲಿನಿಂದ ನೇರ ಆ ಕಾರ್ಗತ್ತಲಲ್ಲೇ ಕೆಳಗಿನ ಹೊಳೆಗೆ ಧುಮುಕಿ ಮಾಯವಾಗಿದ್ದ ಲಕ್ಷ್ಮೀಕಾಂತಂ ! ಕೈಯ ಬೇಡಿ ಅವನಿಗೆ ಈಜಿ ಪಾರಾಗಲು ಅಡ್ಡಿಯಾಗಲೇ ಇಲ್ಲ ! ಮದ್ರಾಸಿನ ಪೋಲೀಸರು ಮಂಗಗಳಂತೆ ಬರಿಕೈಯಲ್ಲಿ ವಾಪಾಸಾದರು.

ಅಪಾಯಕಾರಿ ಖೈದಿ ಅಂಡಮಾನ್‍ಗೆ
        ಪೋಲೀಸರ ಕಣ್ಣು ತಪ್ಪಿಸಿಕೊಂಡು ಒಂದು ಕಡೆ ಬದುಕುತ್ತಿದ್ದನೇನೋ ಈ ಲಕ್ಷ್ಮೀಕಾಂತಂ. ಆದರೆ ಅವನಿಗೂ ಅವನ ಓರ್ವ ಪ್ರೇಯಸಿಗೂ ಉಂಟಾದ ಜಟಾಪಟಿಯಲ್ಲಿ ಸಿಟ್ಟಾದ ಆಕೆ ಪೋಲೀಸರಿಗೆ ಅವನ ಸುಳಿವು ನೀಡಿಬಿಟ್ಟಳು. ಮತ್ತೆ ಮದ್ರಾಸ್ ಪೋಲೀಸರು ಹಠಾತ್ ಪ್ರತ್ಯಕ್ಷರಾಗಿ ಲಕ್ಷ್ಮೀಕಾಂತಂ ಕೈಗೆ ಬೇಡಿ ತೊಡಿಸಿಬಿಟ್ಟರು. ಒಮ್ಮೆ ಪೋಲೀಸರ ಕಣ್ಣಿಗೆ ಮಣ್ಣು ಹಾಕಿ ಕಗ್ಗತ್ತಲಲ್ಲೇ ಹೊಳೆಗೆ ಹಾರಿ ಪರಾರಿಯಾದ ಲಕ್ಷ್ಮೀಕಾಂತಂನನ್ನು ಸರಕಾರ ‘ಅಪಾಯಕಾರಿ ಕೈದಿ’ ಎಂದು ಘೋಷಿಸಿ, ಹೆಚ್ಚು ಭದ್ರತೆಯಲ್ಲಿ ಅಂಡಮಾನ್‍ದಲ್ಲಿನ ಜೈಲಿಗೆ ಕಳುಹಿಸಿದರು.

ಯುದ್ಧ ತಂದ ಅದೃಷ್ಟ
      ಅಲ್ಲಿಯೂ ಅದೃಷ್ಟ ಲಕ್ಷ್ಮೀಕಾಂತಂ ಪಾಲಿಗೇ ಇತ್ತು. ಆಗ ಎರಡನೇ ಮಹಾಯುದ್ಧ ನಡೆಯುತ್ತಿತ್ತು. ಅಂಡಮಾನ್ ದ್ವೀಪ ಯುದ್ಧದಲ್ಲಿ ಜಪಾನೀಯರ ಕೈಗೆ ಬಂತು. ಅವರಿಗೆ ಮಿಲಿಟರಿಗಾಗಿ ಈ ದ್ವೀಪ ಅಗತ್ಯವಾಗಿತ್ತು. ಅಂಡಮಾನ್ ಜೈಲು ಮತ್ತು ಅದರಲ್ಲಿದ್ದ ಕೈದಿಗಳು ಅವರ ಭದ್ರತೆಗೆ ಆತಂಕಕಾರಿ, ಅಪಾಯಕಾರಿ ಎನ್ನಿಸಿತ್ತು. ಹಾಗಾಗಿ ಎಲ್ಲಾ ಕೈದಿಗಳನ್ನೂ ಜಪಾನ್ ಸರಕಾರ ಅಂಡಮಾನ್‍ನಿಂದ ಬಿಡುಗಡೆ ಮಾಡಿ ಒಂದು ಹಡಗಿಗೆ ತುಂಬಿಸಿ ಭಾರತಕ್ಕೆ ವಾಪಾಸು ಕಳುಹಿಸಿತು. ಹೀಗೆ ಶಿಕ್ಷೆ ಮುಗಿಯುವ ಮೊದಲೇ ಲಕ್ಷ್ಮೀಕಾಂತಂ ಅದೃಷ್ಟ ಖುಲಾಯಿಸಿ ಮದ್ರಾಸಿಗೆ ಮತ್ತೆ ಬಂದಿಳಿದ !

‘ಮಿಲಿಟರಿ’ ಹೋಟೇಲು 
      ಮದ್ರಾಸಿನಲ್ಲಿ ಇನ್ನು ಕೋರ್ಟು, ಪೋಲೀಸರ ಸಹವಾಸ ಅಪಾಯಕಾರಿ ಎಂದರಿತ ಲಕ್ಷ್ಮೀಕಾಂತಂ ಅವುಗಳಿಂದ ದೂರ ಇರಲು ಬಯಸಿದ. ಸ್ವತಂತ್ರ ಉದ್ಯಮ ಮಾಡ ಹೊರಟ. ಆಗ ಮಾಂಸಾಹಾರಿ ಹೋಟೇಲುಗಳಿಗೆ ‘ಮಿಲಿಟರಿ ಹೋಟೇಲು’, ಶಾಖಾಹಾರಿ ಹೋಟೇಲುಗಳಿಗೆ ‘ಸಿವಿಲ್ ಹೋಟೇಲು’ ಎಂದು ಕರೆಯುತ್ತಿದ್ದರು. ಲಕ್ಷ್ಮೀಕಾಂತಂ ಒಂದು ‘ಮಿಲಿಟರಿ ಹೋಟೇಲು’ ಇಟ್ಟ. ಆದರೆ ನಷ್ಟ ಉಂಟಾಗಿ ಕೈ ಸುಟ್ಟುಕೊಂಡ. ಇನ್ನೇನು ಮಾಡುವುದು ಎಂದು ಯೋಚಿಸಿದ ಲಕ್ಷ್ಮೀಕಾಂತಂಗೆ ಕಂಡದ್ದು ಪತ್ರಿಕಾ ವೃತ್ತಿ. ಅದನ್ನೇ ಆರಿಸಿಕೊಂಡುಬಿಟ್ಟ.

‘ಸಿನಿಮಾ ತೂತು’ ಎಂಬ ಪತ್ರಿಕೆ
       1943ರಲ್ಲಿ ಪತ್ರಿಕಾರಂಗಕ್ಕಿಳಿದ ಲಕ್ಷ್ಮೀಕಾಂತಂ ‘ಸಿನಿಮಾ ತೂತು’ ಎಂಬ ಸಾಪ್ತಾಹಿಕ ಶುರುಮಾಡಿದ. ಅದೊಂದು ಪೀತಪತ್ರಿಕೆ. ಅದರಲ್ಲಿ ಶಯ್ಯಾಗೃಹದ ಕಥೆಗಳೇ ಹೆಚ್ಚು. ಸಿನಿಮಾ ನಟನಟಿಯರ ಪ್ರಣಯ ಪ್ರಸಂಗಗಳ ಕಥೆ ಬರೆದ. ಚಿತ್ರರಂಗದ ಘಟಾನುಘಟಿಗಳ ರಸಿಕತನಗಳನ್ನು ಪ್ರಕಟಿಸಿದ. ಕಾಮೋತ್ತೇಜಕ, ರಮ್ಯ, ಮನ್ಮಥ ಲೀಲೆಗಳೇ ಅವನ ಪತ್ರಿಕೆಯ ವಸ್ತುವಾಗಿಬಿಟ್ಟಿತ್ತು. ಚಿತ್ರರಂಗದ ಒಬ್ಬರನ್ನೂ ಲಕ್ಷ್ಮೀಕಾಂತಂ ಬಿಡಲೇ ಇಲ್ಲ. ಪತ್ರಿಕೆಯ ಪ್ರಸಾರವೂ ಹೆಚ್ಚಿತು - ಅವನ ಆದಾಯವೂ ಹೆಚ್ಚಿತು. ಆಗೆಲ್ಲಾ ಹೀಗೆ ಗಂಡು ಹೆಣ್ಣುಗಳ ಸಂಗತಿ, ಪ್ರೇಯಸಿಯರ ಸಂಗತಿ, ರತಿಲೀಲೆಗಳ ಸಂಗತಿ ಬಹಿರಂಗವಾಗಿ ಪತ್ರಿಕೆಯಲ್ಲಿ ಬರೆಯುವ ಕ್ರಮ ಇರಲಿಲ್ಲ. ಜನಕ್ಕೆ ಇಂತಹ ಸುದ್ದಿಗಳೂ ಬೇಕಾಗಿತ್ತು. ವದಂತಿಗಳಿಗೆ ಸ್ಪಂದಿಸುವ ಸಾವಿರ ಕಿವಿಗಳು ಕಾಯುತ್ತಿದ್ದುವು. ದೊಡ್ಡದೊಡ್ಡವರೆನಿಸಿಕೊಂಡವರ ಜೀವನದಲ್ಲಿ ನಡೆಯುವ ಸಣ್ಣ ಸಂಗತಿ ತಿಳಿಯಲು ಜನಕ್ಕೆ ಅತೀವ ಆಸಕ್ತಿ ಇತ್ತು. ತುದಿಗಾಲಲ್ಲಿ ನಿಂತು ಜನ ಇಂತಹ ಸುದ್ದಿ ಓದುತ್ತಿದ್ದರು, ಅದಕ್ಕಾಗಿ ಕಾಯುತ್ತಿದ್ದರು. ‘ಸಿನಿಮಾ ತೂತು’ ಬ್ಲ್ಯಾಕ್‍ನಲ್ಲಿ ಮಾರಾಟವಾಗುಷ್ಟು ಜನಪ್ರಿಯವಾಯಿತು. ಲಕ್ಷ್ಮೀಕಾಂತಂನ ಅದೃಷ್ಟವೇ ಅದೃಷ್ಟ.

ಚಿತ್ರರಂಗದ ತ್ರಿಮೂರ್ತಿಗಳು
      ಆಗ ತಮಿಳು ಚಿತ್ರರಂಗದಲ್ಲಿ ಎಂ.ಕೆ.ತ್ಯಾಗರಾಜ ಭಾಗವತರ್ ರಾಜನಾಗಿದ್ದ. ಆತ ತನ್ನ ಕೀರ್ತಿಶಿಖರದ ತುತ್ತತುದಿಯಲ್ಲಿದ್ದ. ಎಲ್ಲಾ ಚಿತ್ರಗಳಲ್ಲೂ ಅವನೇ ನಾಯಕ. ಅವನಿದ್ದ ಚಿತ್ರಗಳೆಲ್ಲಾ ಹಿಟ್ ! ಅವನೊಬ್ಬ ಸ್ಪುರದ್ರೂಪಿ ಹಾಡುಗಾರ - ನಟ. ಉದ್ದ, ನೀಳುಗೂದಲು ಬಿಟ್ಟುಕೊಂಡವ. ಆಗಿನ ಹುಡುಗರೆಲ್ಲಾ ಅದೇ ಫ್ಯಾಶನ್ ಅನುಸರಿಸಿ ತಾವು ಎಂ.ಕೆ.ಟಿ.ಎಂದು ಉದ್ದ ನೀಳುಗೂದಲು ಬಿಟ್ಟುಕೊಳ್ಳಲಾರಂಭಿಸಿದ್ದರು. ಅಷ್ಟು ಜನಪ್ರಿಯ ಈ ಚಿತ್ರರಂಗದ ರಾಜ. ‘ಸಿಂಗಿಂಗ್ ಸ್ಟಾರ್’ ಎಂದೇ ಮನೆಮಾತಾಗಿದ್ದ ತ್ಯಾಗರಾಜ ಭಾಗವತರ್. ಆತ ಹುಡುಗಿಯರ ಕಣ್ಮಣಿಯಾಗಿದ್ದ. ಜತೆಯಲ್ಲಿ ಹಾಸ್ಯ ಪಾತ್ರದ ಹೀರೋ ಆಗಿ ಮಿಂಚುತ್ತಿದ್ದವ ಎನ್.ಎಸ್.ಕೃಷ್ಣನ್. ತಮಿಳು ಚಿತ್ರರಂಗದ ‘ಚಾರ್ಲಿಚಾಪ್ಲಿನ್’ ಎಂದೇ ಖ್ಯಾತ ಈ ಕೃಷ್ಣನ್ ನಾಟಕರಂಗದಲ್ಲಿ ಪರಿಚಿತಳಾದ ಟಿ.ಎ.ಮಧುರಂಳನ್ನು ಬಾಳಸಂಗಾತಿ ಮಾಡಿಕೊಂಡವ ಎನ್.ಎಸ್.ಕೆ.. ಈ ದಂಪತಿ ಜೋಡಿಯ ಹಾಸ್ಯಕ್ಕಾಗಿ ಜನ ಮುಗಿಬೀಳುತ್ತಿದ್ದರು. ಇವರ ಚಿತ್ರನಿರ್ಮಾಪಕ ಶ್ರೀರಾಮುಲು ನಾಯ್ಡು ಸಹಾ ಪ್ರಸಿದ್ಧನೇ. ಹೀಗೆ ಚಿತ್ರರಂಗದ ತ್ರಿಮೂರ್ತಿಗಳಾಗಿದ್ದ ಇವರು ಎಷ್ಟು ಜನಪ್ರಿಯರೋ ಅಷ್ಟೇ ಮತ್ಸರ ಇವರ ಮೇಲೆ ಚಿತ್ರರಂಗದಲ್ಲೇ ಇತ್ತು.

ರಹಸ್ಯ ಸ್ಪೋಟ
    ಲಕ್ಷ್ಮೀಕಾಂತಂ ಜನಸಾಮಾನ್ಯರ ನಾಡಿಮಿಡಿತ ಹಿಡಿದಿದ್ದ. ಅವರಿಗೆ ಬೇಕಾಗಿದ್ದೇನು ಎಂಬುದು ಅವನಿಗೆ ಗೊತ್ತಾಗಿತ್ತು. ಭಾರತೀಯ ಸಂಸ್ಕøತಿ - ಹಿಂದೂ ಸಂಸ್ಕøತಿ ಎತ್ತಿ ಹಿಡಿಯುವ ಸೋಗು ಹಾಕಿದ ಲಕ್ಷ್ಮೀಕಾಂತಂ ಸಮಾಜ ಸುಧಾರಕನ ವೇಷ ತೊಟ್ಟು, ಸಮಾಜದ ಶುದ್ಧೀಕರಣದ ಹೆಸರಲ್ಲಿ ಅಶ್ಲೀಲ ಸಂಗತಿಗಳನ್ನೆಲ್ಲಾ ಬಯಲು ಮಾಡಿದ. ರಹಸ್ಯಗಳನ್ನೆಲ್ಲಾ ಸ್ಪೋಟ ಮಾಡಿದ. ಮಾಡುತ್ತಲೇ ಹೋದ.

ರದ್ದಾದ ಲೈಸೆನ್ಸ್
     ಲಕ್ಷ್ಮೀಕಾಂತಂ ಕಣ್ಣು ತ್ಯಾಗರಾಜ ಭಾಗವತರ್ ಮೇಲೆ ಬಿತ್ತು. ಅವನ ಮೇಲೆ ಬರೆದ. ಅವನ ರಸಿಕತನದ ಕಥೆಗಳನ್ನು ಪ್ರಕಟಿಸಿದ. ಆತ ಸೊಪ್ಪು ಹಾಕಲಿಲ್ಲ. ಹಾಗಾಗಿ ಎಂ.ಕೆ.ಟಿ. ಪ್ರಣಯ ಪ್ರಸಂಗಗಳ ‘ಧಾರಾವಾಹಿ’ಯನ್ನೇ ಪ್ರಕಟಿಸಿದ. ಎನ್.ಎಸ್.ಕೃಷ್ಣನ್, ಶ್ರೀರಾಮುಲು ನಾಯ್ಡುರನ್ನೂ ಬಿಡಲಿಲ್ಲ. ಇವನ ಪತ್ರಿಕೆಯಿಂದ ಇವರೆಲ್ಲರಿಗೂ ತೇಜೋವಧೆಯಾಗುತ್ತಲೇ ಹೋಯಿತು. ಆದರೆ ಅವನ ಬ್ಲ್ಯಾಕ್‍ಮೈಲ್‍ಗೆ ಅವರು ಬಗ್ಗಲಿಲ್ಲ. ಬೇರೆ ದಾರಿ ಕಾಣದ ಈ ಮೂವರು ಚಿತ್ರರಂಗದ ಘಟಾನುಘಟಿಗಳು ನೇರ ಮದ್ರಾಸಿನ ಆಗಿನ ಗವರ್ನರ್ ಆರ್ಥರ್ ಓಸ್ವಾಲ್ಡ್ ಜೇಮ್ಸ್ ಹೋಪ್‍ಗೆ ಮನವಿ ಸಲ್ಲಿಸಿದರು. ಇಂತಹ ಕೀಳು ಅಭಿರುಚಿಯ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಪೀತಪತ್ರಿಕೆಯ ಲೈಸೆನ್ಸ್ ರದ್ದು ಮಾಡಲು ಬಿನ್ನವಿಸಿಕೊಂಡರು. ಗವರ್ನರ್ ತಕ್ಷಣ ಕಾರ್ಯಪ್ರವೃತ್ತÀರಾಗಿ ‘ಸಿನೆಮಾತೂತು’ ಪತ್ರಿಕೆಯ ಲೈಸೆನ್ಸ್ ರದ್ದುಮಾಡಿಬಿಟ್ಟರು. 

ಅದೃಷ್ಟದ ಬಾಗಿಲು ತೆರೆದಾಗ.....
     ಲಕ್ಷ್ಮೀಕಾಂತಂ ನರ್ಗುಣನ್ ಎಂಬ ವಕೀಲನನ್ನು ಹಿಡಿದು ದಿಲ್ಲಿಗೆ ಅಪೀಲು ದಾಖಲು ಮಾಡಿದ. ಆದರೂ ಲೈಸನ್ಸ್ ಮರಳಿ ಸಿಗಲಿಲ್ಲ. ಹತಾಶನಾದ ಲಕ್ಷ್ಮೀಕಾಂತಂ ಹಳೆಯ ಚಾಳಿಗೆ ಬಿದ್ದ. ಲೈಸನ್ಸ್ ನವೀಕರಣ ಆಗಿದೆ ಎಂದು ಫೋರ್ಜರಿ ಆದೇಶ ಸೃಷ್ಠಿ ಮಾಡಿ, ಪತ್ರಿಕೆ ಪುನರಾರಂಭಿಸಿಬಿಟ್ಟ. ಕೆಲವು ವಾರ ಪತ್ರಿಕೆ ನಡೆಯಿತು. ಆದರೆ ಇದರ ವಾಸನೆ ಬಡಿದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಂತೆ ಬಿಸಿ ಹತ್ತಿದ ಲಕ್ಷ್ಮೀಕಾಂತಂ ‘ಸಿನೆಮಾತೂತು’ ಪತ್ರಿಕೆಯನ್ನೇ ಕೈಬಿಟ್ಟ. ಆದರೆ ಪತ್ರಿಕೋದ್ಯಮವೇ ಅವನ ಕೈ ಹಿಡಿದಿತ್ತು ! ಅವನಿಗೊಂದು ಸುವರ್ಣಾವಕಾಶ ಒಲಿದುಬಂದುಬಿಟ್ಟಿತ್ತು. ‘ಹಿಂದೂ ನೇಶನ್’ ಎಂಬ ಒಂದು ಪತ್ರಿಕೆ ತೀರಾ ನಷ್ಟದಲ್ಲಿತ್ತು. ಲಕ್ಷ್ಮೀಕಾಂತಂಗೆ ಬೇಕಾಗಿದ್ದದ್ದು ಲೈಸನ್ಸ್ ಇದ್ದ ಒಂದು ಪತ್ರಿಕೆ. ಹಿಂದೆ, ಮುಂದೆ ನೋಡದೇ ‘ಹಿಂದೂ ನೇಶನ್’ ಪತ್ರಿಕೆಯನ್ನು ಕೊಂಡುಕೊಂಡು ತನ್ನದಾಗಿಸಿಕೊಂಡುಬಿಟ್ಟ. ‘ಹೋದೆಯಾ ಬೇತಾಳ ಅಂದರೆ ಕಿಟಕಿಯಿಂದ ಬಂದೆ’ ಎಂಬಂತೆ ಲಕ್ಷ್ಮೀಕಾಂತಂ ಮತ್ತೆ ಪತ್ರಿಕೋದ್ಯಮದಲ್ಲಿ ಹೊಸ ಗೆಟ್ಟಪ್ಪಿನಲ್ಲಿ ಪ್ರತ್ಯಕ್ಷನಾಗಿ ಚಿತ್ರರಂಗದ ಪ್ರಮುಖರಿಗೆಲ್ಲಾ ಚಳಿ ಹುಟ್ಟಿಸಿದ. ಅವನ ವ್ಯಾಪ್ತಿ ವಿಸ್ತಾರವಾದಾಗ ಮದ್ರಾಸಿನ ‘ಪ್ರತಿಷ್ಠಿತ’ರೆಂಬವರೆಲ್ಲಾ ಕಂಗಾಲು - ಯಾಕೆÀಂದರೆ ಅವರ ‘ರಾತ್ರಿಲೀಲೆ’ಗಳೆಲ್ಲಾ ‘ಹಿಂದೂ ನೇಶನ್’ನಲ್ಲಿ ಬೆಳಕು ಕಾಣುತ್ತಿದ್ದುವು. ಲಕ್ಷ್ಮೀಕಾಂತಂ ಕಂಡದ್ದನ್ನೆಲ್ಲಾ ಬರೆದ, ಕೇಳಿದ್ದನ್ನೆಲ್ಲಾ ಬರೆದ, ಕಾಣದೇ ಇದ್ದುದನ್ನೂ, ಕೇಳದೇ ಇದ್ದುದನ್ನೂ ಬರೆದ. ಹಗರಣಗಳನ್ನೇ ಸೃಷ್ಠಿಸಿದ. ಶ್ರೀಮಂತಿಕೆಯ ಹಾಸಿಗೆಯಲ್ಲಿ ಹೊರಳಾಡಿದ.

ಮುಚ್ಚಿಹೋದ ಬದುಕು
     ಆಗ ಅವನ ಮೂಗಿಗೆ ಬಡಿದ ವಾಸನೆ ದೇವಕೊಟ್ಟೈಯ ಲಕ್ಷ್ಮಣ್ ಚೆಟ್ಟಿಯಾರ್ ಕೊಲೆ ಪ್ರಕರಣ. ನಿಗೂಢವೆಂದೇ ಪೋಲೀಸರು, ಓರ್ವ ಸಂಗೀತಗಾರ್ತಿ, ನಟಿ ಮುಚ್ಚಿ ಹಾಕಿದ ಪ್ರಕರಣದ ಪೂರ್ತಿ ವಿವರ ಅವನಿಗೆ ಅದು ಹೇಗೋ ಲಭಿಸಿತ್ತು. ಅದು ಅವನ ಬದುಕಿನಲ್ಲೇ ಅತೀ ದೊಡ್ಡ ‘ಸ್ಕೂಪ್’ ಆಗಿತ್ತು. ಅದನ್ನು ‘ಮುಂದಿನ ಸಂಚಿಕೆ’ಯಲ್ಲಿ ಬಹಿರಂಗಗೊಳಿಸುವುದಾಗಿ ಪ್ರಕಟಿಸಿಬಿಟ್ಟ ಲಕ್ಷ್ಮೀಕಾಂತಂ. ಅಷ್ಟರಲ್ಲಿ ಅವನನ್ನೇ ಮುಗಿಸಿಬಿಟ್ಟರು ! ಅವನ ‘ಮುಂದಿನ ಸಂಚಿಕೆ’ ಕೊನೆಗೂ ಹೊರಬರಲೇ ಇಲ್ಲ. ಯಾರು ಇದನ್ನು ಮಾಡಿದವರು? ಲಕ್ಷ್ಮಣನ್ ಚೆಟ್ಟಿ ಕೊಲೆಗಾರರೇ? ಆ ಸಂಗೀತಗಾರ್ತಿ ನಟಿಯೇ? ತ್ಯಾಗರಾಜ ಭಾಗವತರ್ ತ್ರಿಮೂರ್ತಿಗಳೇ ಅಥವಾ ಅವರನ್ನು ಕಂಡರೆ ಆಗದಿದ್ದವರೇ? ಯಾರು? 

ಮರೆತುಹೋದ ಮಹಾಯುದ್ಧ
     ಲಕ್ಷ್ಮೀಕಾಂತಂ ಕೊಲೆಯಾದ ಸಂದರ್ಭ - 1944 - ಇಡೀ ಜಗತ್ತು ಎರಡನೇ ಮಹಾಯುದ್ಧದ ಬಿಸಿಯಲ್ಲಿತ್ತು. ಎಲ್ಲೆಲ್ಲೂ ಬಾಂಬುಗಳ ಸುರಿಮಳೆಯಿಂದ ಇಡೀ ಪ್ರಪಂಚದ ವಾತಾವರಣ ಕಾವೇರಿತ್ತು. ಅದರ ಜತೆಗೆ, ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪರಾಕಾಷ್ಠೆಯಲ್ಲಿತ್ತು. ಸ್ವಾತಂತ್ರ್ಯಕ್ಕಾಗಿ ಇಡೀ ಭಾರತದ ಜನ ತಹತಹಿಸುತ್ತಿದ್ದ ಕಾಲವದು. ಇವೆಲ್ಲದರ ನಡುವೆ, ಆವಶ್ಯಕ ಸಾಮಾಗ್ರಿಗಳ ತೀವ್ರ ಅಭಾವ ಇತ್ತು. ಜನ ಪರದಾಡುತ್ತಿರುವ ಪರಿಸ್ಥಿತಿ ಆಗ. ಆದರೆ ಮದ್ರಾಸ್ ರಾಜ್ಯದ ಜನಕ್ಕೆ ಇದೆಲ್ಲಾ ಮರೆತೇ ಹೋಗಿಬಿಟ್ಟಿತ್ತು. ಅವರಿಗೆ ಈಗ ಲಕ್ಷ್ಮೀಕಾಂತಂ ಕೊಲೆ ಪ್ರಕರಣವೊಂದೇ ಮಂತ್ರ. ಎಲ್ಲೆಲ್ಲೂ ಅದೇ ಚರ್ಚೆ, ಅದೇ ಸುದ್ದಿ. ಕೊಲೆಗಾರ ಯಾರು, ಪೋಲೀಸರೇಕೆ ಕೊಲೆಗಾರರನ್ನು ಹಿಡಿಯುತ್ತಿಲ್ಲ ? ಎಲ್ಲ ದೊಡ್ಡ ದೊಡ್ಡವರೇ ಈ ಕೊಲೆಯ ಸಂಚಿನ ಹಿಂದೆ ಇರುವಾಗ ಪೋಲೀಸರು ಪ್ರಕರಣ ಮುಚ್ಚಿ ಹಾಕದೇ ಇರುತ್ತಾರಾ ಎಂದೇ ಜನ ಮಾತಾಡಿಕೊಳ್ಳುತ್ತಿದ್ದರು. ಪತ್ರಿಕೆಗಳಲ್ಲಂತೂ ಉಹಾಪೋಹಗಳು, ಆರೋಪಗಳು ಹರಿದಾಡುತ್ತಿದ್ದುವು. ಬೇರೆಲ್ಲಾ ಸಮಸ್ಯೆಗಳು, ಸಂಗತಿಗಳು ಈ ಜನಕ್ಕೆ ಆಗ ಗೌಣವಾಗಿಬಿಟ್ಟಿತ್ತು. 

ಕಗ್ಗಂಟಾದ ಕೊಲೆ ಕೇಸು
     ಇವೆಲ್ಲದರ ನಡುವೆ ಪೋಲೀಸ್ ಇನ್‍ಸ್ಪೆಕ್ಟರ್ ಕೇಶವ ಮೆನನ್ ಲಕ್ಷ್ಮೀಕಾಂತಂ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ. ತನಿಖೆ ಮೇಲುಸ್ತುವಾರಿಗೆಂತ ಮದ್ರಾಸಿನ ಪೋಲೀಸ್ ಮುಖ್ಯಸ್ಥ ಬ್ರಿಟಿಷ್ ಅಧಿಕಾರಿ ಆರ್.ಸಿ.ಹ್ಯೂಮ್ ಮದ್ರಾಸಿನ ಪೋಲೀಸ್ ಸಹಾಯಕ ಕಮಿಷನರ್ ಸಿ.ವಿ.ಅಣ್ಣಾಗಿರಿ ಮೊದಲಿಯಾರ್‍ರನ್ನು ನೇಮಿಸಿದ್ದ. ಆರಂಭದಲ್ಲೇ ಮೊದಲಿಯಾರ್‍ಗೂ, ಕೇಶವ ಮೆನನ್‍ಗೂ ಇದೊಂದು ಕಷ್ಟಸಾಧ್ಯವಾದ ಕ್ಲಿಷ್ಟ ಕೆಲಸ ಎನ್ನಿಸಿಬಿಟ್ಟಿತ್ತು. ಕಾರಣ, ಕೊಲೆಗಾರರ ಪತ್ತೆಗೆ ನೆರವಾಗಬಲ್ಲ ಒಂದಿನಿತೂ ಸುಳಿವು ಇರಲೇ ಇಲ್ಲ !

ಮೂವರ ಗ್ಯಾಂಗು?
      ಜನ ಹೇಳುತ್ತಿದ್ದರು. ಮಾಡ್ಡೊಕ್ಸ್ ರಸ್ತೆ ಮತ್ತು ಜನರಲ್ ಕಾಲಿನ್ಸ್ ರಸ್ತೆಯಲ್ಲಿ ಆ ಸಮಯ ಮೂರು ನಾಲ್ಕು ಮಂದಿಯ ಗ್ಯಾಂಗ್ ಓಡಾಡುತ್ತಿದ್ದುದನ್ನು ಕಂಡೆವು ಎಂತ. ಅದೇ ಜಾಡಿನಲ್ಲಿ ಪೋಲೀಸರ ತನಿಖೆ ಸಾಗಿತ್ತು. ಆ ರಸ್ತೆಯಲ್ಲಿ ಮೂರು ಜನ ಒಟ್ಟಾಗಿ ಓಡಾಡುತ್ತಿದ್ದವರನ್ನೆಲ್ಲಾ ಪೋಲೀಸರು ಹಿಡಿದು ತನಿಖೆಗೆ ಒಳಪಡಿಸತೊಡಗಿದರು. ಅದೊಂದು ತಮಾಷೆಯ, ಹತಾಶೆಯ ತನಿಖೆಯಾಗಿ ಕಾಣುತ್ತಿತ್ತು.

ಒಬ್ಬ ವಡಿವೇಲು - ಇನ್ನಿಬ್ಬರು ಬೇಕು
     ಪೋಲೀಸರು ಯಾರನ್ನೂ ಹಿಡಿಯುವುದಿಲ್ಲ ಎಂದು ಜನ, ಪತ್ರಿಕೆಗಳು ಹೇಳತೊಡಗಿದಾಗ ಬೇರೇನೂ ಉಪಾಯ ತೋಚದ ಪೋಲೀಸರು ವಡಿವೇಲುವನ್ನು ಬಂಧಿಸಿಬಿಟ್ಟರು. ಲಕ್ಷ್ಮೀಕಾಂತಂನ ಕಟ್ಟಡದಲ್ಲಿ ಬಾಡಿಗೆ ಒಕ್ಕಲಾಗಿದ್ದ ಈ ವಡಿವೇಲುವನ್ನು ಬಲಾತ್ಕಾರದಿಂದ ಹೊರದಬ್ಬಲು ಲಕ್ಷ್ಮೀಕಾಂತಂ ಯತ್ನಿಸಿ ಸೋತಿದ್ದ. ಅವನಿಗೂ ಲಕ್ಷ್ಮೀಕಾಂತಂಗೂ ಆದ ಬೀದಿ ಜಗಳದ ಸಂಗತಿ ಪೋಲೀಸರಿಗೆ ಗೊತ್ತಿದ್ದಿತ್ತಲ್ಲ. ಮೂವರ ಪೈಕಿ ಒಬ್ಬ ಸಿಕ್ಕಿದನಲ್ಲ - ಇನ್ನಿಬ್ಬರನ್ನು ಎಲ್ಲಿಂದ ತರುವುದು - ‘ಮೂವರ ಗ್ಯಾಂಗ್’ ಬಂಧನಕ್ಕಾಗಿ ? ಆ ಇನ್ನಿಬ್ಬರು ಯಾರು ? ಗ್ಯಾಂಗ್ ಸಿದ್ಧಗೊಳಿಸಲು ಪೋಲೀಸರು ‘ಇನ್ನಿಬ್ಬರನ್ನು’ ಹುಡುಕಿ ತಂದರು. ತಮ್ಮ ವಶದಲ್ಲಿಟ್ಟುಕೊಂಡರು. ಆ ಇಬ್ಬರು ವಡಿವೇಲುವಿನಂತೆ ಕೆಳವರ್ಗದವರು. ಲಕ್ಷ್ಮೀಕಾಂತಂ ವಿರುದ್ಧ ವಡಿವೇಲುವಿನ ಹೋರಾಟದಲ್ಲಿ ಅವನಿಗೆ ಬೆಂಬಲ ವ್ಯಕ್ತಪಡಿಸಿದವರು. ತೀರಾ ಅಮಾಯಕರು. ಕೊಲೆ ಸಂಬಂಧ ತಮ್ಮ ಬಂಧನ ಎಂದು ತಿಳಿದಾಗ ಅವರಿಗೋ ವಿಸ್ಮಯ, ಆಘಾತ. ಗುರುತು ಪತ್ತೆಗೆ ಅವರನ್ನು ಪೋಲೀಸರು ಪೆರೇಡ್ ಕೂಡಾ ಮಾಡಿಸಿದಾಗ, ಹುಚ್ಚು ಧೈರ್ಯ ತಾಳಿದ ಅವರು ಪೋಲೀಸ್ ಮೇಲಧಿಕಾರಿಗಳಿಗೆ ತಮಗೆ ನ್ಯಾಯ ನೀಡಿ ಎಂತ ಅರ್ಜಿಸಲ್ಲಿಸಿಬಿಟ್ಟರು. ಹಾಗಾಗಿ ಕೆಲಕಾಲ ಪೋಲೀಸ್ ಕೈಯಲ್ಲಿ ನರಕಯಾತನೆ ಅನುಭವಿಸಿದ ಅವರನ್ನು ಪೋಲೀಸರು ಬಿಟ್ಟುಬಿಟ್ಟರು. ಆದರೆ ವಡಿವೇಲು ಇನ್ನೂ ಕಸ್ಟಡಿಯಲ್ಲೇ ಇದ್ದ ! 

ಪ್ರತಿಭಟನೆ - ಮನವಿ
      ಏನೂ ಸುಳಿವು ಸಿಕ್ಕದೇ ತನಿಖೆ ಮುಗ್ಗರಿಸಿತು. ನಿಂತುಹೋಯಿತು. ಕೆಲಕಾಲ ಸ್ತಬ್ಧವಾಯಿತು, ಪೋಲೀಸ್ ಕಾರ್ಯಾಚರಣೆ. ತನಿಖೆಯ ವಿಳಂಬ ಸಾರ್ವಜನಿಕರಲ್ಲಿ ಅಸಮಾಧಾನ ತಂದಿತು. ಕೆಲವು ಸಂಘಟನೆಗಳು ‘ಧೀರ’ ಲಕ್ಷ್ಮೀಕಾಂತಂನ ಕೊಲೆ ತನಿಖೆ ಯಾಕಿಲ್ಲ ಎಂದು ಪ್ರತಿಭಟನಾ ಸಭೆ ನಡೆಸಿದರು. ದುರುದ್ದೇಶ ಆರೋಪಿಸಿದುವು. ದೊಡ್ಡ ಮನುಷ್ಯರನ್ನು ಬಚಾವು ಮಾಡುವ ಯತ್ನ ನಡೆದಿದೆ ಎಂದುವು. ಪೋಲೀಸರ ಮೇಲೆ ಒತ್ತಡ ಹೆಚ್ಚುತ್ತಲೇ ಇತ್ತು. ಅದು ತಾರಕಕ್ಕೇರಿದ್ದು ಸರಕಾರಿ ನೌಕರರ ಸಂಘವೊಂದು ಈ ಕುರಿತು ಗವರ್ನರ್ ಸರ್.ಅರ್ಥರ್ ಹೋಪ್‍ಗೆ ಮನವಿ ಸಲ್ಲಿಸಿದಾಗ. ಮನವಿ ಸ್ವೀಕರಿಸಿದ ಗವರ್ನರ್ ತನಿಖೆ ಯಾಕೆ ವಿಳಂಬವಾಗುತ್ತಿದೆ ಎಂದು ತನ್ನ ಅಧಿಕಾರಿಗಳ ಮೇಲೆ ಮುಗಿಬಿದ್ದರು. ಅಧಿಕಾರಿಗಳು ಉಪಾಯವಿಲ್ಲದೇ ಪೋಲೀಸ್ ಮುಖ್ಯಸ್ಥರ ಮೇಲೆ ಒತ್ತಡ ತಂದರು. ಏನಾದರೂ ಮಾಡಿ, ಹೇಗಾದರೂ ಮಾಡಿ ಕೊಲೆಗಾರರನ್ನು ಹಿಡಿದುಬಿಡಿ ಎಂದು ತೀವ್ರ ಒತ್ತಡ ಬಂತು.

ಮತ್ತೆ ಮೂವರ ಬಂಧನ
      ಪೋಲೀಸರು ಬೇರೆ ದಾರಿ ಕಾಣದೇ ಅದರಂತೆಯೇ ಮಾಡಿದರು. ಇನ್ನೂ ಮೂವರನ್ನು ಬಂಧಿಸಿದರು. ಅವರು ಯಾರೆಂದರೆ ಲಕ್ಷ್ಮೀಕಾಂತಂ ಮನೆಗೆ ಹಾಲು ಕೊಡುತ್ತಿದ್ದ ರೌಡಿ ನಾಗಲಿಂಗಂ ಮತ್ತು ಲಕ್ಷ್ಮೀಕಾಂತಂನ ಅಂಗರಕ್ಷಕ, ಬಾಕ್ಸಿಂಗ್ ಪಟು ಆರ್ಯವೀರ ಸೇನನ್. ಮತ್ತೊಬ್ಬ ಮಾಂಸ ಮಾರಾಟದ ಕಟುಕ ರಾಜಬತ್ತಾರ್. ಇವರೆಲ್ಲಾ ಯಾರು ಎಂದು ಕೇಳಿದರೆ ಪೋಲೀಸರು ಇವರೆಲ್ಲಾ ವಡಿವೇಲು ಜತೆ ಹಲ್ಲೆ ಮಾಡಿದವರು ಎಂದರು. ಇವರೆಲ್ಲಾ ಚಿಕ್ಕ ಮೀನುಗಳು, ಯಾರೋ ಹೇಳಿದಂತೆ ಕೆಲಸ ಮಾಡಿದವರು ಎಂದರು ಪೋಲೀಸರು. ಆ ‘ಯಾರೋ’ ಅಂದರೆ ಯಾರು?

ಸಂಶಯಾಸ್ಪದ ನಡೆಯ ನರ್ಗುಣನ್
     ಈ ಮಧ್ಯೆ ಲಕ್ಷ್ಮೀಕಾಂತಂನ ವಕೀಲ ನರ್ಗುಣನ್ ನಡತೆ ಸಂಶಯಕ್ಕೆಡೆಮಾಡಿತ್ತು. ಅನೇಕ ಪ್ರಶ್ನೆ ಹುಟ್ಟಲು ಕಾರಣವಾಗಿತ್ತು. ಲಕ್ಷ್ಮೀಕಾಂತಂ ತನ್ನ ಆಪ್ತ ಸ್ನೇಹಿತ, ಕಕ್ಷಿಗಾರನಾಗಿದ್ದರೂ ತೀವ್ರ ರಕ್ತಸ್ರಾವದ ಗಾಯ ಹೊಂದಿದ ಆತನನ್ನು ತಕ್ಷಣ ಹತ್ತಿರದ ಡಾಕ್ಟರರ ಹತ್ತಿರವಾಗಲೀ, ಹತ್ತಿರದ ಆಸ್ಪತ್ರೆಗಾಗಲೀ ಚಿಕಿತ್ಸೆಗೆ ಯಾಕೆ ಈ ನರ್ಗುಣನ್ ಕರೆದೊಯ್ಯಲಿಲ್ಲ ? ಯಾಕೆ ನರ್ಗುಣನ್ ತಾನೇ ಅವನೊಂದಿಗೆ ಆಸ್ಪತ್ರೆಗೆ ಹೋಗಲಿಲ್ಲ? ದಾರಿಯಲ್ಲಿ ಹೋಗುತ್ತಿದ್ದ ಬ್ರೂ ಎಂಬ ಆಂಗ್ಲೋ ಇಂಡಿಯನ್‍ನನ್ನು ಯಾಕೆ ಜತೆ ಮಾಡಿ ಕಳುಹಿಸಿದ್ದ? ರಕ್ತಸಿಕ್ತವಾಗಿದ್ದ ವಡಿವೇಲು ಪ್ರಕರಣದ ಫೈಲನ್ನು ಪೋಲೀಸರಿಗೆ ಕೊಡದೇ ನರ್ಗುಣನ್ ಯಾಕೆ ಎತ್ತಿಟ್ಟುಕೊಂಡ ? ಪೋಲೀಸರಿಗೆ ಯಾಕೆ ಅದನ್ನು ಹೇಳದೇ ಮುಚ್ಚಿಟ್ಟ ? (ಪ್ರಕರಣ ನಡೆದ ದಶಕಗಳ ನಂತರ ಚಲನಚಿತ್ರ ಇತಿಹಾಸಕಾರ, ಪತ್ರಕರ್ತ ರ್ಯಾಂಡರ್ ಗೈ ಎಂಬವರು ಪ್ರಶ್ನಿಸಿದಾಗ ಇದಕ್ಕೆಲ್ಲಾ ನರ್ಗುಣನ್ ಕೊಟ್ಟ ಉತ್ತರ ಇಷ್ಟೇ - ‘ಗಾಯ ಸರಳವಾಗಿತ್ತು’ ಪೋಲೀಸರೂ ಕೂಡಾ ಹಾಗೇ ದಾಖಲಿಸಿದ್ದರು. ಡಾ. ಜೋಸೆಫ್ ಕೂಡಾ ಆಸ್ಪತ್ರೆಯಲ್ಲಿ ಹಾಗೇ ಬರೆದಿದ್ದರು. ಮತ್ತು ಆತ ಹೇಳಿದ್ದೇನೆಂದರೆ ‘ಲಕ್ಷ್ಮೀಕಾಂತಂ ಎಂತಹ ಕೊಳಕನೆಂದರೆ ಅವನ ಪ್ರಕರಣದಲ್ಲಿ ಸಿಲುಕಲು ನಾನು ಇಷ್ಟಪಟ್ಟಿರಲಿಲ್ಲ!’

ಇನ್ನೊಬ್ಬ ವಕೀಲ ರಾಮಣ್ಣ
      ಅದೇ ಹೊತ್ತಿಗೆ ಇನ್ನೊಬ್ಬ ವಕೀಲನ ಕಥೆ ಹೀಗಿದೆ. ಆತ ವಡಿವೇಲುವಿನ ಬಾಡಿಗೆ ಕಟ್ಟಡದ ವಿವಾದದಲ್ಲಿ ಅವನ ವಕೀಲನಾಗಿದ್ದವ. ಲಕ್ಷ್ಮೀಕಾಂತಂ ಮೇಲೆ ಹಲ್ಲೆ ನಡೆದ ದಿನ, ಅದೇ ಹೊತ್ತಿಗೆ ಈ ವಡಿವೇಲು ತಾನು ಕೆಲಸಮಾಡುತ್ತಿದ್ದ ಪತ್ರಿಕಾ ಕಛೇರಿಯಲ್ಲಿ ಕುರ್ಚಿ ಮೇಲೆ ಕುಳಿತುಕೊಂಡಿದ್ದ - ಕರ್ತವ್ಯನಿರತನಾಗಿದ್ದ ಎಂಬುದನ್ನು ತಿಳಿದವ ಈತ. ವಡಿವೇಲು ಅಂದಿನ ಹಲ್ಲೆಯಲ್ಲಿ ಇರಲೇ ಇಲ್ಲ ಎಂಬುದು ಈ ವಕೀಲ ಸಿ.ರಾಮಣ್ಣನಿಗೆ ಗೊತ್ತಿತ್ತು. ದಾಖಲೆಗಳಿದ್ದುವು ಅದನ್ನು ರುಜುವಾತುಪಡಿಸಲು. ಆದರೂ ಈ ವಕೀಲ ಏಕೆ ಪೋಲೀಸರಿಗೆ ಅದನ್ನು ತಿಳಿಸಲಿಲ್ಲ ? ದಶಕಗಳ ನಂತರ ರ್ಯಾಂಡರ್  ಗೈ ಪ್ರಶ್ನೆಗೆ ರಾಮಣ್ಣ ನೀಡಿದ ಉತ್ತರ ಆಘಾತಕಾರಿಯಾಗಿತ್ತು. ಪೋಲೀಸ್ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತು. ಆತ ಹೇಳಿದ, ‘ನಾನು ಪೋಲೀಸರಿಗೆ ಈ ವಿಚಾರ ಖಂಡಿತ ತಿಳಿಸಿದ್ದೆ. ಆದರೆ ಅವರು ಕಿವುಡರಂತೆ, ಕುರುಡರಂತೆ ಇದ್ದುಬಿಟ್ಟರು. ಅದನ್ನು ಕೇಳಲಿಕ್ಕೇ ಪೋಲೀಸರು ಸಿದ್ಧರಿರಲಿಲ್ಲ. ನಾನು ಒತ್ತಾಯಿಸಿದೆ. ಆಗ ಅವರು ನನ್ನನ್ನೇ ಕೊಲೆ ಪ್ರಕರಣದಲ್ಲಿ ಸಿಕ್ಕಿಸಿ ಹಾಕುವುದಾಗಿ ಬೆದರಿಕೆ ಹಾಕಿಬಿಟ್ಟರು. ಅದಕ್ಕೆ ಪೋಲೀಸರೇ ಒಂದು ಕಟ್ಟುಕತೆ ಸಹಾ ಹೆಣೆದುಬಿಟ್ಟಿದ್ದರು. ಏನೆಂತ ? ಲಕ್ಷ್ಮೀಕಾಂತಂ ಓರ್ವ ಪತ್ರಿಕಾ ಮಾಲಕನ ಬಗ್ಗೆ ತನ್ನ ಪತ್ರಿಕೆಯಲ್ಲಿ ಬರೆದಿದ್ದ. ಆ ಪತ್ರಿಕಾ ಮಾಲಕನಿಗೂ, ಹಾಡುಗಾರ್ತಿ ಚಿತ್ರನಟಿಗೂ ಇದ್ದ ಅಕ್ರಮ ಸಂಬಂಧ ಬಯಲಿಗೆಳೆದಿದ್ದ. ಆ ಪತ್ರಿಕಾ ಮಾಲಕ ಈ ವಕೀಲ ರಾಮಣ್ಣನ ಸಂಬಂಧಿಕನೇ. ವಡಿವೇಲು ಆ ಪತ್ರಿಕಾ ಮಾಲಕನ ಪತ್ರಿಕೆಯಲ್ಲೇ ಕೆಲಸಮಾಡುತ್ತಿದ್ದವ. ಹಾಗಾಗಿ ಆ ಪತ್ರಿಕಾ ಮಾಲಕನೇ ವಕೀಲ ರಾಮಣ್ಣನ ಮೂಲಕ ಅವನ ಕಕ್ಷಿಗಾರ ವಡಿವೇಲುವನ್ನು ಪ್ರೇರೇಪಿಸಿ ಲಕ್ಷ್ಮೀಕಾಂತಂ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿಸಿದ್ದು ಎಂದು ನಿನ್ನನ್ನು ಸಿಕ್ಕಿಸಿ ಹಾಕುತ್ತೇವೆ ಎಂದಿದ್ದರು ಪೋಲೀಸರು’. ಪೋಲೀಸರು ಅಷ್ಟು ಹೇಳಿದ್ದೇ ತಡ, ವಕೀಲ ರಾಮಣ್ಣ ಬೆದರಿ ನೀರಾಗಿಹೋದ. ಮುಖ ಬಿಳುಪೇರಿದ ಆತ ತನಗೆ ಈ ಉಸಾಬರಿಯೇ ಬೇಡ ಎಂದು ಮನೆಗೋಡಿದವ ಆಮೇಲೆ ವಡಿವೇಲು ಬಗ್ಗೆ ಯೋಚನೆ ಕೂಡಾ ಮಾಡದೇ ಆರಾಮವಾಗಿದ್ದುಬಿಟ್ಟ ! ಪಾಪ, ವಡಿವೇಲು ಪೋಲೀಸರಿಂದ ಪೆಟ್ಟು ತಿನ್ನುತ್ತಾ ಕಸ್ಟಡಿಯಲ್ಲಿದ್ದುಬಿಟ್ಟ.

ಮಾಯವಾದ ಇಳಂಗೋವನ್
       ಈ ನಡುವೆ, ಪೋಲೀಸರ ಕಣ್ಣು ಇನ್ನಿಬ್ಬರ ಮೇಲೂ ಬಿತ್ತು. ಅವರಲ್ಲಿ ಒಬ್ಬಾತ ಪ್ರಸಿದ್ಧ ಚಲನಚಿತ್ರ ಕಥಾ ಲೇಖಕ. ಸಂಭಾಷಣಾ ಲೇಖಕ. ಅವನ ಕಾವ್ಯನಾಮ ‘ಇಳಂಗೋವನ್’. ಈತ ಕಥೆ ಬರೆದ ಚಿತ್ರಗಳೆಲ್ಲಾ ನೂರಕ್ಕೆ ನೂರು ಹಿಟ್. ಇವನ ಕಥೆ ಇದ್ದರೆ ಸಾಕು ಗಲ್ಲಾಪೆಟ್ಟಿಗೆ ತುಂಬಿ ತುಳುಕುತ್ತಿತ್ತು. ಆದರೆ ವಿಚಿತ್ರ ಖಯಾಲಿಯವ ಈ ಇಳಂಗೋವನ್. ಬೀದಿಬದಿಯ ಬಿಕನಾಸಿಗಳೆಲ್ಲಾ ಇವನ ಒಡನಾಡಿಗಳು. ರೌಡಿಗಳೇ ಇವನ ಸ್ನೇಹಿತರು. ಇವನಿಗೂ ಲಕ್ಷ್ಮೀಕಾಂತಂಗೂ ಅತೀವ ಸ್ನೇಹ. ಲಕ್ಷ್ಮೀಕಾಂತಂನ ಅಂಗರಕ್ಷಕ ಆರ್ಯಸೇನನ್ ಸಹಾ ಇವನ ದೋಸ್ತಿ. ಇಳಂಗೋವನ್‍ನ ನೆರಳಿನಂತಿದ್ದವ ಅವನ ಅಂಗರಕ್ಷಕ, ವಾಹನ ಚಾಲಕ ಹಾಗೂ ಬಾವನಾದ ಶ್ರೀರಾಮುಲು. ಈ ಶ್ರೀರಾಮುಲುವಿನ ಇಬ್ಬರು ಸೋದರಿಯರನ್ನೂ ಇಳಂಗೋವನ್ ಮದುವೆಯಾಗಿಬಿಟ್ಟಿದ್ದ ! ಸಿನಿಮಾ ತೂತು, ಹಿಂದೂ ನೇಶನ್‍ಗಳಲ್ಲಿ ಲಕ್ಷ್ಮೀಕಾಂತಂ ಬರೆಯುತ್ತಿದ್ದ ಹೆಚ್ಚಿನ ಮಸಾಲೆ ಕಥೆಗಳಿಗೆ ಸಾಮಾಗ್ರಿ ಒದಗಿಸುತ್ತಿದ್ದವನೇ ಈ ಇಳಂಗೋವನ್. ದೊಡ್ಡವರ ಸಣ್ಣ ಕಥೆಗಳನ್ನು ಪ್ರಕಟಿಸದಂತೆ ಲಕ್ಷ್ಮೀಕಾಂತಂ ಬಾಯಿಮುಚ್ಚಿಸಲು ಹಣದ ಥೈಲಿ ತರುವವರ ‘ಡೀಲು’ ಮಾಡುತ್ತಿದ್ದವನೂ ಇವನೇ. ಇವನ ಕೀರ್ತಿಯ ದಿನಗಳಲ್ಲಿ ಈತ ಬರೆದದ್ದೆಲ್ಲಾ ಯಶಸ್ಸೇ. ಆಗಿನ ತಮಿಳು ಚಿತ್ರರಂಗದ ಸಾರ್ವಭೌಮ ಎಮ್.ಕೆ.ತ್ಯಾಗರಾಜ ಭಾಗವತರ್ ಚಿತ್ರದ ಕಥಾಲೇಖಕನೇ ಇಳಂಗೋವನ್. ತ್ಯಾಗರಾಜ ಭಾಗವತರ್ ಯಾವುದೇ ಚಿತ್ರದಲ್ಲಿ ಅಭಿನಯಿಸಲು ಸಹಿ ಹಾಕುವ ಮುನ್ನ ಚಿತ್ರಕಥೆ - ಸಂಭಾಷಣೆ ಇಳಂಗೋವನ್‍ನಿಂದಲೇ ಬರೆಸಬೇಕು ಎಂದು ಶರತ್ತು ವಿಧಿಸುತ್ತಿದ್ದ. (ಆದರೂ ಈ ಇಳಂಗೋವನ್ ಕೊನೆಗಾಲದಲ್ಲಿ ತೀರಾ ಬಡತನದಲ್ಲಿ ನಿಕೃಷ್ಟವಾಗಿ ಕಳೆಯಬೇಕಾಯಿತು) ಪೋಲೀಸರಿಗೆ ‘ ಮೂವರ ಗ್ಯಾಂಗ್’ಗೆ ಇನ್ನಿಬ್ಬರು ಬೇಕಿತ್ತಲ್ಲ - ಈ ಇಳಂಗೋವನ್ ಮತ್ತು ಶ್ರೀರಾಮುಲುವನ್ನು ಪ್ರಶ್ನಿಸಲಾರಂಭಿಸಿದರು. ಇನ್ನೇನು, ಕೊಲೆ ಆರೋಪದಲ್ಲಿ ಇಳಂಗೋವನ್‍ನನ್ನು ಬಂಧಿಸುತ್ತಾರೆÀಂತಲೇ ಇತ್ತು. ಅದು ಗೊತ್ತಾದದ್ದೇ ತಡ ಬೆಚ್ಚಿಬಿದ್ದ ಇಳಂಗೋವನ್ ಇದ್ದಕ್ಕಿದ್ದಂತೆಯೇ ಅದೃಶ್ಯನಾಗಿಬಿಟ್ಟ. ಭೂಗತನಾದ. ತನಗಿನ್ನು ಅಪಾಯವಿಲ್ಲ ಎಂದು ಖಾತ್ರಿಯಾದಾಗಲೇ ಆತ ಮತ್ತೆ ಕಾಣಿಸಿಕೊಂಡದ್ದು !

ಗೋಪಾಲನ್ ಪಾತ್ರವೇನು ?
      ರಿಕ್ಷಾಚಾಲಕ ಗೋಪಾಲನ್ ವರ್ತನೆಯೂ ಸಂಶಯಕ್ಕೆಡೆಮಾಡಿತ್ತು. ಆತ ಹಲ್ಲೆಯ ಪ್ರತ್ಯಕ್ಷದರ್ಶಿ ಸಾಕ್ಷಿಗಾರನಾಗಿಬಿಟ್ಟ. ನಿಜಕ್ಕೂ ಆತ ಪ್ರತ್ಯಕ್ಷದರ್ಶಿಯಾಗಿದ್ದನೇ? ಇಲ್ಲವೇ ಇಲ್ಲ. ರಿಕ್ಷಾ ಅಡಿಮೇಲಾದ ಕೂಡಲೇ ಪ್ರಾಣಭಯದಿಂದ ಲಕ್ಷ್ಮೀಕಾಂತಂನನ್ನು, ರಿಕ್ಷಾವನ್ನು ಬಿಟ್ಟು ಓಡಿಹೋದವ ಈ ಗೋಪಾಲನ್. ಇಲ್ಲವಾದರೆ ಸುರಿಯುತ್ತಿದ್ದ ರಕ್ತದ ಗಾಯ ಕೈಯಲ್ಲಿ ಒತ್ತಿಹಿಡಿದುಕೊಂಡು ನಡೆದುಕೊಂಡೇ ಲಕ್ಷ್ಮೀಕಾಂತಂ ವಕೀಲ ನರ್ಗುಣನ್ ಕಡೆಗೆ ಹೋಗಬೇಕಾಗಿತ್ತೇ? ಗೋಪಾಲನ್ ಇದ್ದಿದ್ದರೆ ಅದೇ ರಿಕ್ಷಾದಲ್ಲಿ ಹೋಗಬಹುದಾಗಿತ್ತಲ್ಲ ? ನಿಜವಾಗಿ ಗೋಪಾಲನ್ ಕೆಲ ಹೊತ್ತಿನ ಬಳಿಕವೇ ನರ್ಗುಣನ್ ನಿಂತಲ್ಲಿಗೆ ರಿಕ್ಷಾ ಹಿಡಿದುಕೊಂಡು ಬಂದವ. ಹಾಗಾಗಿ ಆತ ಪ್ರತ್ಯಕ್ಷದರ್ಶಿ ಹೇಗಾದಾನು?

ಚೂರಿ ಚಮತ್ಕಾರ
     ಗೋಪಾಲನ್ ನರ್ಗುಣನ್‍ಗೆ ಎತ್ತಿಕೊಟ್ಟ, ಪೋಲೀಸರ ಕೈ ಸೇರಿದ, ರಕ್ತಸಿಕ್ತ ಚೂರಿಯ ಕಥೆ ಸಹಾ ಸಂಶಯಾಸ್ಪದವೇ. ಪೋಲೀಸರ ರಿಜಿಸ್ಟರಿನಲ್ಲಿ ಆ ಚೂರಿ ದಾಖಲಾಗಿರಲೇ ಇಲ್ಲ ! ಸಬ್‍ಇನ್‍ಸ್ಪೆಕ್ಟರ್ ನಂಬಿಯಾರ್‍ಗೆ ಅಡ್ಡಸವಾಲು ಮಾಡಿದಾಗ ಎಲ್ಲಾ ಸಂದರ್ಭಗಳಲ್ಲೂ ಹಾಗೆ ರಿಜಿಸ್ಟರಿನಲ್ಲಿ ದಾಖಲು ಮಾಡುವ ಕ್ರಮ ಇಲ್ಲ ಎಂದು ಸಮರ್ಥಿಸಿಕೊಂಡ. ಆದರೆ ಆತನ ಠಾಣೆಯ ರಿಜಿಸ್ಟರ್ ಅವಲೋಕಿಸಿದಾಗ ಕ್ಷುಲ್ಲಕ ವಸ್ತುಗಳಾದ ನೀರುಳ್ಳಿ, ಮೊಟ್ಟೆ ಇತ್ಯಾದಿ ಸಹಾ ವಶಪಡಿಸಿಕೊಂಡಾಗ ರಿಜಿಸ್ಟರಿನಲ್ಲಿ ಬರೆಯುವ ಕ್ರಮ ಇದ್ದೇ ಇತ್ತು. ಕೊಲೆಗೆ ಬಳಸಿದ್ದೆನ್ನಲಾದ ಪ್ರಮುಖ ಆಯುಧವೇ ರಿಜಿಸ್ಟರಿನಲ್ಲಿ ಬರೆಯಲಿಲ್ಲ ಎಂದರೆ - ಹಲ್ಲೆಗೆ ಬಳಸಿದ ಚೂರಿ ನಿಜವಾಗಿಯೂ ಸಿಕ್ಕಲೇ ಇಲ್ಲವೇ ? ಗೋಪಾಲ್ ಎತ್ತಿಕೊಟ್ಟದ್ದು ಎಂಬುದು ನಕಲಿ ಚೂರಿಯೇ? ಅಥವಾ ಅದು ಪೋಲೀಸರ ಸೃಷ್ಟಿಯೇ ? ‘ಇಂತಹ ಚೂರಿಯಿಂದ ಒಂದು ಇಲಿಯನ್ನು ಸಹಾ ಕೊಲ್ಲಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ‘ಕೊಲೆ ಆಯುಧ’ ಎಂಬ ಚೂರಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು ನ್ಯಾಯಾಧೀಶರು! ಹಾಗಾದರೆ ನಿಜವಾದ ಚೂರಿ ಎಲ್ಲಿತ್ತು ? ಇಂತಹ ಪ್ರಶ್ನೆಗಳು ಕೊನೆಗೂ ನಿಗೂಢವಾಗಿಯೇ ಉಳಿದುವು.

ಮಹತ್ವದ ತಿರುವು
    ಇಷ್ಟೆಲ್ಲ ಆಗುವಾಗ ಕೊಲೆ ಪ್ರಕರಣದ ತನಿಖೆಗೆ ಒಂದು ಮಹತ್ವದ ತಿರುವು ಸಿಕ್ಕಿದ್ದು ಒಂದು ಪತ್ರದಿಂದ. ಈ ಪತ್ರವೇ ಕೊಲೆಯ ಹಿಂದಿನ ಘಟಾನುಘಟಿಗಳನ್ನು ‘ಪತ್ತೆಹಚ್ಚಲು’ ಸಹಾಯಕವಾಯಿತು ಎನ್ನುತ್ತಾರೆ ಪೋಲೀಸರು. ಈ ಪತ್ರ ಯಾರು ಯಾರಿಗೆ ಬರೆದದ್ದು? ಅದರಲ್ಲಿ ಏನಿತ್ತು? ಅದು ಪೋಲೀಸರ ಕೈಗೆ ಸಿಕ್ಕಿದ್ದಾದರೂ ಹೇಗೆ? ಅದರ ಆಧಾರದಲ್ಲಿ ಪೋಲೀಸರು ಬಂಧಿಸಿದ ಚಲನಚಿತ್ರರಂಗದ ಪ್ರಸಿದ್ಧರು ಯಾರು? ಲಕ್ಷ್ಮೀಕಾಂತಂ ಕೊಲೆ ಪ್ರಕರಣವನ್ನು ಕುತೂಹಲದ ಘಟ್ಟ ಮುಟ್ಟಿಸಿ, ಮದ್ರಾಸ್ ರಾಜ್ಯದ ಜನಕ್ಕೆಲ್ಲಾ ಶಾಕ್ ನೀಡಿದ್ದು ಆಗಲೇ. ಏನದು? 

ಮತ್ತೊಬ್ಬ ರಾಮಣ್ಣ
    ಆ ಪತ್ರ ಬರೆದಾತ ಒಬ್ಬ ಎ.ಕೆ.ರಾಮಣ್ಣ ಎಂಬ ಪುರುಸವಾಕಂನ ನಿವಾಸಿ. ತಾನೊಬ್ಬ ನಾಟಕಗಾರ, ಚಲನಚಿತ್ರ, ಕಥಾಲೇಖಕ ಎಂದು ಹೇಳಿಕೊಂಡು ತಿರುಗುತ್ತಿದ್ದ ರಾಮಣ್ಣ ನಿಕೃಷ್ಠ ಸ್ಥಿತಿಯಲ್ಲಿದ್ದ. ಆತ ಪೇಯಿಂಗ್‍ಗೆಸ್ಟ್ ಆಗಿ ಒಂದು ಮನೆಯಲ್ಲಿದ್ದ. ಆ ಮನೆಯ ಮಾಲಕ - ಈತನ ಸ್ನೇಹಿತ -ನಿಗೇ  ಈ ಪತ್ರ ಬರೆದದ್ದು. ಆ ಸ್ನೇಹಿತ ಚಿಲ್ಲರೆ ಪಾತ್ರ ಮಾಡುವ ಓರ್ವ ಚಿತ್ರಕಲಾವಿದನಾಗಿದ್ದ. ಹೆಸರು ವಿ.ಮಣಿ. ಸೇಲಂನಲ್ಲಿ ಒಂದು  ಚಿತ್ರದ ಶೂಟಿಂಗ್‍ಗಾಗಿ ಹೋಗಿದ್ದ ಮಣಿ. ಅಲ್ಲಿಗೇ ಬರೆದಂತಿತ್ತು ಈ ಪತ್ರ. ಪತ್ತೇದಾರಿ ಕಾದಂಬರಿಯಲ್ಲಿ ನಿಗೂಢ ಸುಳಿವು ಸಿಕ್ಕ ರೀತಿಯಲ್ಲಿ ಮದ್ರಾಸ್ ಪೋಲೀಸರಿಗೆ ಈ ಪತ್ರ ಕೈ ಸೇರಿತ್ತು - ಅಪಾರ ನಿಧಿ ಕೈ ಸೇರಿದ ಹಾಗೆ. ಪತ್ರ ಸ್ವಾರಸ್ಯಕರವೂ, ಕುತೂಹಲಕರವೂ ಆಗಿ ಇತ್ತು.

ಪೋಲೀಸರ ಕೈಗೆ ಬಂತು ಪತ್ರ
     ಪತ್ರದ ತಾರೀಕು 09-11-1944 ಎಂದಿತ್ತು. ಮದ್ರಾಸಿನ ಪರುಸವಾಕಂನಿಂದ ಇನ್ನೂರು ಚಿಲ್ಲರೆ ಮೈಲುಗಳಷ್ಟು ದೂರದ ಸೇಲಮ್ಮಿಗೆ ಅಂದು 14ನೇಯ ತಾರೀಕಿಗೆ ಬಂದು ತಲುಪಿತು. ಅಂದು ಬೆಳಿಗ್ಗೆ ಆ ಪತ್ರವನ್ನು ಅಂಚೆಯವ ಮಣಿಗೆ ಬಂದು ತಲುಪಿಸುವ ಹೊತ್ತಿಗೆ ಸರಿಯಾಗಿ, ಚಿಲ್ಲರೆ ಕಲಾವಿದ ಮಣಿಯ ಹತ್ತಿರ ಪೋಲೀಸ್ ಅಧಿಕಾರಿಯೊಬ್ಬ ಕಾದುಕುಳಿತ್ತಿದ್ದ. ಅವನೇ ಕೆ.ವಿ. ವೆಂಕಟಸುಬ್ರಮಣಿಯಂ. ಅಂಚೆಪೇದೆ ಪತ್ರವನ್ನು ಮಣಿ ಕೈಗೆ ಕೊಡುತ್ತಲೂ ಈ ಪೋಲೀಸ್ ಅಧಿಕಾರಿ ವೆಂಕಟಸುಬ್ರಮಣಿಯಂ ಗಬಕ್ಕನೇ ಪತ್ರವನ್ನು ಹಿಡಿದು ವಶಪಡಿಸಿಕೊಂಡು ಬಿಟ್ಟ ! ಹಾಗಾದರೆ ಈ ಪತ್ರದ ಸಂಗತಿ ಪೋಲೀಸರಿಗೆ ಮುಂಚೆಯೇ ಗೊತ್ತಿತ್ತೇ? ಅದು ಹೇಗೆ? ಈ ಪತ್ರದಲ್ಲಿ ಏನು ಬರೆದಿತ್ತು ಎಂಬುದನ್ನು ಪೋಲೀಸರು ಓದಿದ್ದÀರೇ? ಅದು ಹೇಗೆ ಸಾಧ್ಯ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹೋಗುತ್ತಾ ಕಥೆ ಸ್ವಾರಸ್ಯಕರವೂ ಕುತೂಹಲಕರವೂ ಆಗುತ್ತಾ ಹೋಯಿತು.

ಸೆನ್ಸಾರ್ - ಪೋಲೀಸ್ ಸೃಷ್ಠಿಯೇ - ಪತ್ರ ?
       ಅದು ಮಹಾಯುದ್ಧದ ಕಾಲ. ಬ್ರಿಟಿಷ್ ಸರಕಾರದ ಬೇಹುಗಾರಿಕೆ ಜಾಲ ವ್ಯಾಪಕವಾಗಿತ್ತು. ಅಂಚೆ ಕಛೇರಿಗಳಲ್ಲೂ ಪತ್ರಗಳ ಸೆನ್ಸಾರ್‍ಗೆ ಸರಕಾರ ಅಧಿಕೃತ ಅನುಮತಿ ನೀಡಿತ್ತು. ಹಾಗಾಗಿ ಸಂಶಯಿತರ ಪತ್ರಗಳನ್ನು ಅವರಿಗೆ ಅರಿಯದ ರೀತಿಯಲ್ಲಿ ಒಡೆದು ಓದುವ ಪರಿಪಾಠ ಆಗ ಇತ್ತು. ರಾಮಣ್ಣ ಬರೆದ ಪತ್ರವೂ ಹೀಗೆ ಸೆನ್ಸಾರ್ ಕಣ್ಣಿಗೆ ಬಿದ್ದಿತ್ತು. ಅದು ಹೇಗೆ, ಏಕೆ ಎಂಬುದೇ ಪ್ರಶ್ನೆ. ಬ್ರಿಟಿಷ್ ಸರಕಾರದ ಭದ್ರತೆಗೆ ಸಂಬಂಧವೇ ಇಲ್ಲದ ರಾಮಣ್ಣನ ಪತ್ರವನ್ನು ಅಂಚೆ ಇಲಾಖೆಯವರು ಯಾಕೆ ಒಡೆದು ಓದಿದರು ? ಪತ್ರ ಬರೆದ ರಾಮಣ್ಣ ಉಗ್ರಗಾಮಿಯೇನಾಗಿರಲಿಲ್ಲ. ಭೂಗತ ಚಳುವಳಿಕೋರನೂ ಸಹಾ ಅಲ್ಲ. ಪೋಲೀಸರಿಗೆ ‘ಬೇಕಾದ’ ವ್ಯಕ್ತಿಯೂ ಆಗಿರಲಿಲ್ಲ. ನಿಜಕ್ಕೆಂದರೆ ಆತನೊಬ್ಬ ಏನೂ ಅಲ್ಲ. ಅಂತಹವನು ಬರೆದ ಪತ್ರವನ್ನು ಯಾಕೆ ಒಡೆದು ಓದುತ್ತಾರೆ? ಅದೊಂದು ಆಕಸ್ಮಿಕವೇ? ಸೆನ್ಸಾರ್‍ಗೆ ಟೆಲಿಪತಿ ಇತ್ತೇ? ಅಥವಾ ಬೇರಾವ ಕಾರಣಗಳಿದ್ದುವೇ? ಅಥವಾ, ಪ್ರಕರಣದಲ್ಲಿನ ಡಿಫೆನ್ಸ್ ವಕೀಲರು ಹೇಳಿದಂತೆ ಈ ‘ಪತ್ರ’ ಪೋಲೀಸರ ಸೃಷ್ಟಿಯೇ?

ಪತ್ರದಲ್ಲೇನಿತ್ತು?
    ಏನಿತ್ತು ಆ ಪತ್ರದಲ್ಲಿ ? ರಾಮಣ್ಣ ತನ್ನ ಮನೆ ಮಾಲಿಕ ಸ್ನೇಹಿತ ಮಣಿಗೆ ಆತನ ಶೂಟಿಂಗ್ ನಡೆಯುವ ಜಾಗಕ್ಕೇ ತರಾತುರಿಯಿಂದ ಇಂತಹ ಪತ್ರವನ್ನು ಬರೆದಾನೇ? ಅದರಲ್ಲಿ ರಾಮಣ್ಣ ಬರೆದಿದ್ದ. “ನಿನ್ನೆ ಬೆಳಿಗ್ಗೆ 10-30ರ ಹೊತ್ತಿಗೆ ಸಿ.ಎನ್.ಲಕ್ಷ್ಮೀಕಾಂತಂ ತನ್ನ ವಕೀಲ ನರ್ಗುಣನ್ ಮನೆಯಿಂದ ಮರಳುವಾಗ ಮಾಡ್ಡೊಸ್ ರಸ್ತೆಯಲ್ಲಿ ಹಲ್ಲೆಗೀಡಾದ. ಚೂರಿಯಿಂದ ಮೂರು ಕಡೆ ಗಾಯ ಆಯಿತು. ಬೆಳಗ್ಗಿನ ಜಾವ 4ಕ್ಕೆ  ಅವನು ಸತ್ತುಹೋದ. ಅವನನ್ನು ಮುಗಿಸಿದವ....ಟಿ...
ನಿನ್ನೆ ಬೆಳಿಗ್ಗೆ 11ಕ್ಕೆ ಟಿ....ನನ್ನ ಬಳಿಗೆ ಬಂದ. ತಾನು ಸಿ.ಎನ್.ಲಕ್ಷ್ಮೀಕಾಂತಂನನ್ನು ಮುಗಿಸಿ ಬಿಟ್ಟರುವುದಾಗಿ ಹೇಳಿದ. ಮತ್ತು ಇದನ್ನು ಯಾರಿಗೂ ಹೇಳಬೇಡ ಎಂದು ಎಚ್ಚೆರಿಸಿ ಹೋರಟುಹೋದ”
      ಈ ಪತ್ರದಲ್ಲಿದ್ದದ್ದು ಇಷ್ಟೇ. ಹೆಸರುಗಳನ್ನು ಬರೆಯದೇ ಖಾಲಿಬಿಟ್ಟಿತ್ತು. ಪತ್ರದಲ್ಲಿ ಸಹಿ ಇರಲಿಲ್ಲ. ಕೆಳಗೆ ಎ.ಕೆ.ಆರ್. ಎಂದು ಮಾತ್ರ ಬರೆಯಲಾಗಿತ್ತು. (ಅಂದರೆ ಎ.ಕೆ.ರಾಮಣ್ಣ?)

ಪೋಲೀಸರ ನಿರಾಳ
     ಸೆನ್ಸಾರ್‍ನವರು ಪತ್ರ ಓದಿ ಅದರ ಒಂದು  ಫೋಟೋಸ್ಟಾಟ್ ಪ್ರತಿ ಮಾಡಿ ಮದ್ರಾಸಿನ ಪೋಲೀಸರಿಗೆ ಕಳುಹಿಸಿಕೊಟ್ಟರು - ಕಾರಣ ಆಗ ‘ಆಪರೇಶನ್ ಲಕ್ಷ್ಮೀಕಾಂತಂ ಮರ್ಡರ್’ ಚಾಲ್ತಿಯಲ್ಲಿತ್ತಲ್ಲ. ಎಲ್ಲೆಲ್ಲೂ ಅದೇ ಸುದ್ದಿಯಾಗಿತ್ತಲ್ಲ. ಸೆನ್ಸಾರ್‍ನವರಿಗೂ ಲಕ್ಷ್ಮೀಕಾಂತಂ ಹೆಸರು ಕಂಡಾಕ್ಷಣ ಇದು ಪೋಲೀಸರಿಗೆ ಬೇಕಾದ ಮಾಹಿತಿ ಎಂದು ಹೊಳೆದು ಪತ್ರದ ಪ್ರತಿ ಪೋಲೀಸರಿಗೆ ಹೋಯಿತು. ಪೋಲೀಸರು ‘ಅಯ್ಯಬ್ಬ ಎಂದು ನೀಳ ನಿಟ್ಟುಸಿರು ಬಿಟ್ಟರು !

ಪೋಲೀಸ್ ವಶದಲ್ಲಿ ರಾಮಣ್ಣ
     ರಾಮಣ್ಣನನ್ನು ತಕ್ಷಣ ಪೋಲೀಸರು ವಶಕ್ಕೆ ತೆಗೆದುಕೊಂಡುಬಿಟ್ಟರು. ದಿನಗಟ್ಟಲೆ ಅವನನ್ನು ವಶದಲ್ಲಿಟ್ಟುಕೊಂಡು ನಾನಾ ರೀತಿಯಲ್ಲಿ ಪ್ರಶ್ನಿಸಿದರು. ಹೀಗೆ ಅನಧಿಕೃತವಾಗಿ ವಶದಲ್ಲಿಟ್ಟುಕೊಳ್ಳಲು ಬರುವಂತಿಲ್ಲ. ಅದು ನಿಯಮಗಳಿಗೆ ವ್ಯತಿರಿಕ್ತ. ಆದರೆ ಆಗೆಲ್ಲ ಬ್ರಿಟಿಷರ ಆಳ್ವಿಕೆಯಲ್ಲಿ ಇಂತಹ ಅಕ್ರಮಗಳು ಮಾಮೂಲು. ಈಗಲೂ ಬ್ರಿಟಿಷರು ತೊಲಗಿದರೂ ಅಂತಹ ಪಳೆಯುಳಿಕೆಗಳು ಇನ್ನೂ ಪೋಲೀಸರಲ್ಲಿ ಉಳಿದಿವೆ. ಪತ್ರದಲ್ಲಿ ರಾಮಣ್ಣ ಹೆಸರಿರುವ ಜಾಗ ಖಾಲಿಬಿಟ್ಟಿದ್ದ. ಪೋಲೀಸರಿಗೆ ಈ ರಹಸ್ಯ ಬೇಧಿಸಬೇಕಾಗಿತ್ತು.

ಬಾಯಿಬಿಟ್ಟನೇ ರಾಮಣ್ಣ ?
    ರಾಮಣ್ಣ ಪೋಲೀಸರ ಪ್ರಶ್ನೆಗಳಿಗೆ ಬೆದರಿ, ಬಾಯಿಬಿಟ್ಟ ಹೆಸರು ಯಾವುದು? ಪೋಲೀಸರಿಗೆ ಆತ ‘ಆರ್ಯವೀರ ಸೇನನ್’ ಎಂದಿದ್ದ. ಈ ಸೀನನ್, ರಾಮಣ್ಣ ಮತ್ತು ಮಣಿ ಹಳೆಯ ಸ್ನೇಹಿತರು. ಸೀನನ್ ಅಂದರೆ ಕೊಲೆಯಾದ ಲಕ್ಷ್ಮೀಕಾಂತಂನ ಖಾಸಾ ಅಂಗರಕ್ಷಕ ! ಸೀನನ್ ಆಗಾಗ್ಗೆ ಮಣಿಯನ್ನು ಭೇಟಿ ಮಾಡುತ್ತಿದ್ದ. ‘ಆಪರೇಶನ್ ಲಕ್ಷ್ಮೀಕಾಂತಂ’ಗೆ ತಮಿಳು ಚಿತ್ರರಂಗದ ಘಟಾನುಘಟಿಗಳು ಹಣ ಒದಗಿಸಿದ್ದರು, ಎಂದು ಸೀನನ್ ರಾಮಣ್ಣನ ಹತ್ತಿರ ಬಾಯಿಬಿಟ್ಟಿದ್ದ. ಯಾರು ಈ ಘಟಾನುಘಟಿಗಳು ? ಕೊನೆಗೂ ರಾಮಣ್ಣ ಬಾಯಿಬಿಟ್ಟ ! ಲಕ್ಷ್ಮೀಕಾಂತಂ ಪತ್ರಿಕೆಯ ವಿರುದ್ಧ ಮದ್ರಾಸಿನ ಗವರ್ನರ್ ಸರ್‍ಆರ್ಥರ್ ಹೋಪ್‍ಗೆ ಮನವಿ ಸಲ್ಲಿಸಿದವರಲ್ಲಿ ಇವರು ಪ್ರಮುಖರಾಗಿದ್ದರು. ಯಾರು ಅವರು?

ಜಯಾನಂದಂ ಮಾಫಿ ಸಾಕ್ಷಿ
   ರಾಮಣ್ಣನಿಂದ ಬಾಯಿಬಿಡಿಸಿದ ಪೋಲೀಸರು 1944 ದಶಂಬರ 11ರಂದು ರೋಯಪುರಂನಿಂದ ಜಯಾನಂದಂ ಎಂಬಾತನನ್ನು ಹಿಡಿದು ತಂದರು. ಈತ ಕಡಲತೀರದವ. ಮಾಡಲು ಏನೂ ಕೆಲಸವಿಲ್ಲದೇ ಗಮ್ಮತ್ತಿನಲ್ಲಿ ಕಾಲ ಕಳೆಯುತ್ತಿದ್ದ ಯುವಕ. ಲಕ್ಷ್ಮೀಕಾಂತಂ ಪತ್ರಿಕೆಯಲ್ಲಿ ಅಶ್ಲೀಲವಾಗಿ ಆತ ಬರೆದ ಕ್ಲಾರಾ ಯಾನೆ ಚಂದ್ರಾ ಎಂಬ ಚಿತ್ರನಟಿಯ ಸಹೋದರ ಈ ಜಯಾನಂದ. ಅವನನ್ನು ಬಂಧಿಸಿದ್ದೇ ತಡ ತಾನು ಮಾಫಿ ಸಾಕ್ಷಿಯಾಗುವುದಾಗಿ ಹೇಳಿಬಿಟ್ಟ. ಅದರೆ ಕೇಸಿನಲ್ಲಿ ತನ್ನನ್ನು ಶಿಕ್ಷಿಸದೇ ಬಿಟ್ಟುಬಿಡುವ ಶರ್ತ ಹಾಕಿದ. ಪೋಲೀಸರು ಆದಕ್ಕೆ ಅಸ್ತು ಎಂದರು. ಸರಕಾರ ಅವನಿಗೆ ಕ್ಷಮೆ ನೀಡಿತು !

ತಪ್ಪೊಪ್ಪಿಗೆ
       ಆದರೆ ಈ ಜಯಾನಂದಂ ಬುಡದಿಂದ ಕೊನೆಯ ತನಕವೂ ಪೋಲೀಸರಿಗೆ ಒಂದು ತಲೆನೋವಾಗಿಬಿಟ್ಟ. ತಾನು ಮ್ಯಾಜಿಸ್ಟೇಟ್‍ರ  ಮುಂದೆ ತಪ್ಪೊಪ್ಪಿಗೆ ನೀಡುವುದಾಗಿ ಪೋಲೀಸರಿಗೆ ಹೇಳಿದ್ದ. ಅದನ್ನು ನಂಬಿ ಪೋಲೀಸರು ಇವನನ್ನು 15ರಂದು ಮ್ಯಾಜಿಸ್ಟೇಟ್‍ರ ಮುಂದೆ ಹಾಜರುಪಡಿಸಿದಾಗ ಅಲ್ಲಿ ತಪ್ಪೊಪ್ಪಿಗೆ ನೀಡಲು ನಿರಾಕರಿಸಿದ. ಅವನನ್ನು ಮತ್ತೆ ಅಕ್ರಮವಾಗಿ ಪೋಲೀಸ್ ವಶ ಇರಿಸಿಕೊಂಡರು. ತಪ್ಪೊಪ್ಪಿಗೆ ನೀಡಲು ನಿರಾಕರಿಸಿದವನನ್ನು ಹಾಗೆ ಪೋಲೀಸ್ ಕಸ್ಟಡಿಗೆ ಕೊಡುವುದು ಕಾನೂರು ವಿರುದ್ಧವಾಗಿತ್ತು.  ಎಗ್ಮೋರ್ ಠಾಣೆಯಲ್ಲಿದ್ದ ಅವನನ್ನು ದೂರದ ಸೈದಾಪೇಟ್ ಸಬ್ ಜೈಲಿನಲ್ಲಿಟ್ಟರು. 17ರ ಸಂಜೆ ಆತ ಪೋಲೀಸ್ ಕಮಿಶನರಿಗೆ ಪತ್ರ ಬರೆದ. ‘15ರಂದು ಬೆದರಿಕೆಯ ಕಾರಣ ತಪ್ಪೊಪ್ಪಿಗೆ ನೀಡಿರಲಿಲ್ಲ. ಈಗ ತಪ್ಪೊಪ್ಪಿಗೆ ನೀಡುವುದಾಗಿ’ ಹೇಳಿದ. ಅವನ್ನು ಸಬ್‍ಡಿವಿಜನಲ್ ಮ್ಯಾಜಿಸ್ಟೇಟರ ಮುಂದೆ ಹಾಜರುಪಡಿಸಿದಾಗ ತಪ್ಪೊಪ್ಪಿಗೆ ಹೇಳಿಕೆ ದಾಖಲಾಗಿಬಿಟ್ಟಿತು. ಏನು ಆತನ ತಪ್ಪೊಪ್ಪಿಗೆ? ನಂತರ ಜಯಾನಂದಂ ತನಿಖೆ ಕಾಲದಲ್ಲಿ ತಿರುಗಿಬಿದ್ದನೇ? ಅವನ ‘ಕ್ಷಮಾದಾನ’ ರದ್ದಾಯಿತೇ? ಇಡೀ ಪ್ರಕರಣದ ತನಿಖೆಗೆ ರಸವತ್ತಾದ ತಿರುವು ನೀಡಿದ್ದೇ ಈ ಜಯಾನಂದಂ.

ತ್ರಿಮೂರ್ತಿ ಬಂಧನ !
     ಅದೇನೇ ಇರಲಿ - ಪೋಲೀಸರಿಗೆ ಪ್ರಕರಣ ಬೇಧಿಸಿದ ಸಂತೋಷವೇ ಸಂತೋಷ. ಹಿಂದೆ ಮುಂದೆ ನೋಡದೇ ಪೋಲೀಸರು ಕೊಲೆ ಆರೋಪದಲ್ಲಿ ಬಂಧಿಸಿದ್ದು ಯಾರನ್ನು ? ಆಗ ಕೀರ್ತಿಶಿಖರದ ತುತ್ತತುದಿಯಲ್ಲಿದ್ದ ತಮಿಳು ಸಿನಿಮಾ ರಸಿಕರ ಕಣ್ಮಣಿ -ದೇವರೇ - ಎನ್ನಿಸಿದ್ದ ಖ್ಯಾತ ಸಂಗೀತಗಾರ - ಚಿತ್ರನಟ ಎಂ.ಕೆ.ತ್ಯಾಗರಾಜ ಭಾಗವತರ್, ಅಷ್ಟೇ ಜನಪ್ರಿಯ ಹಾಸ್ಯನಟ ಎನ್.ಎಸ್. ಕೃಷ್ಣನ್ ಮತ್ತು ಇವರುಗಳ ಚಿತ್ರಗಳ ನಿರ್ಮಾಪಕ ತಮಿಳು ಚಿತ್ರಂಗದ ಆಧಾರಸ್ತಂಭವೆನಿಸಿಕೊಂಡಿದ್ದ  ಶ್ರೀರಾಮುಲು ನಾೈಡು ಎಂಬ ತ್ರಿಮೂರ್ತಿಗಳನ್ನು ! ಈ ಮೂವರ ಬಂಧನವಾದದ್ದೇ ಆದದ್ದು ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಇಡೀ ದಕ್ಷಿಣ ಭಾರತ ತತ್ತರಿಸಿಬಿಟ್ಟಿತು ! ನಿಜಕ್ಕೂ ಈ ಚಲನಚಿತ್ರದ ಈ ‘ಶ್ರೇಷ್ಠ’ ಮಂದಿ ಲಕ್ಷ್ಮೀಕಾಂತಂನ ಕೊಲೆ ಮಾಡಿಸಿದರೆ? 


ಯುದ್ಧಕ್ಕೆ ಸಿದ್ಧವಾದ ರಣರಂಗ
     ಒಬ್ಬ ಜಯಾನಂದಂನ ಹೇಳಿಕೆ ಆಧಾರದಲ್ಲಿ ಮದ್ರಾಸು ಪೋಲೀಸರು 8 ಮಂದಿಯ ಮೇಲೆ ಲಕ್ಷ್ಮೀಕಾಂತಂ ಕೊಲೆ ಹಾಗೂ ಕೊಲೆ ಒಳಸಂಚು ನಡೆಸಿದ ಆರೋಪ ಹೊರಿಸಿ, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದರು. ಇಡೀ ಮದ್ರಾಸು ರಾಜ್ಯ ಸಹಿತ ಚಿತ್ರರಂಗವೇ ಬೆಚ್ಚಿಬಿದ್ದಿತು. ಭಾರತ ಮಾತ್ರವಲ್ಲ, ತಮಿಳು ಚಿತ್ರಗಳ ಅಭಿಮಾನಿಗಳು ತುಂಬಿರುವ ಸಿಲೋನ್, ಬರ್ಮಾ, ಮಲಯಾ ಸಹಿತ ತಮಿಳು ಭಾಷಿಕರಿರುವ ಕಡೆಗಳಲ್ಲೆಲ್ಲಾ ಪ್ರಕರಣ ತೀವ್ರ ಆಸಕ್ತಿ ಹುಟ್ಟಿಸಿತು. ಪ್ರಕರಣದ ಆರೋಪಿಗಳೆಂದರೆ ವಡಿವೇಲು, ನಾಗಲಿಂಗಂ, ಆರ್ಯವೀರಸೇನನ್, ಜನಪ್ರಿಯ ನಟರಾದ ತ್ಯಾಗರಾಜ ಭಾಗವತರ್, ಎನ್.ಎಸ್.ಕೃಷ್ಣನ್, ಚಿತ್ರ ನಿರ್ಮಾಪಕ ಶ್ರೀರಾಮುಲು ನಾಯ್ಡು, ರಾಜಬತ್ತಾರ್ ಮತ್ತು ಆರ್ಮುಗಂ. ಈ ಆರ್ಮುಗಂ ಓರ್ವ ಪೋಲೀಸ್ ಕಾನ್‍ಸ್ಟೇಬಲ್. ಆತನೂ ಈ ಪಿತೂರಿಯಲ್ಲಿದ್ದ ಎಂದು ಆರೋಪ. ಮದ್ರಾಸಿನ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ಮಾಮೂಲು ಕಮಿಟಲ್ ಪ್ರಕ್ರಿಯೆ ನಡೆದು ಕೊಲೆ ಪ್ರಕರಣ ತನಿಖೆಗಾಗಿ ಮದ್ರಾಸ್ ಹೈಕೋರ್ಟಿನ ಕ್ರಿಮಿನಲ್ ವಿಭಾಗದ ಮುಂದೆ ಬಂತು. ತನಿಖಾ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದವರು ಜಸ್ಟೀಸ್ ಮೊಕೆಟ್. ಜ್ಯೂರಿ ಪದ್ದತಿ ಜಾರಿ ಮಾಡಿದ ಅವರು ಜ್ಯೂರಿಗಳ ತಂಡವನ್ನು ಆಯ್ಕೆ ಮಾಡಿದರು. ತನಿಖೆಗೆ ರಣರಂಗ ತೆರೆದುಕೊಂಡಿತು. 

ತನಿಖೆ ಒಂದು ಧಾರಾವಾಹಿ ಕಥೆ
     ಇಂಡೋಸಾರ್ಸನಿಕ್ ಶೈಲಿಯ, ಕೆಂಪು ಇಟ್ಟಿಗೆಯ ಮದ್ರಾಸ್ ಹೈಕೋರ್ಟಿನ ಪುರಾತನ ಕಟ್ಟಡ ಈಗ ಜನಾಕರ್ಷಣೆಯ ಕೇಂದ್ರವಾಗಿಬಿಟ್ಟಿತು. ತಮ್ಮ ನೆಚ್ಚಿನ ನಟರನ್ನು ಕಾಣಲು, ತನಿಖೆಯ ಸಂಗತಿ ಅರಿಯಲು ಜನಜಂಗುಳಿಯೇ ಸೇರತೊಡಗಿತು. ಆಗಿನ ಮದ್ರಾಸಿನ ಎಡ್ವೊಕೇಟ್ ಜನರಲ್ ಪಿ.ವಿ.ರಾಜಮನ್ನಾರ್ ಈ ದೇಶದ ಶ್ರೇಷ್ಠ ಕಾನೂನುತಜ್ಞ. ಮದ್ರಾಸ್ ಹೈಕೋರ್ಟಿನಲ್ಲಿ ನಂತರ ಸುದೀರ್ಘಕಾಲ ಮುಖ್ಯ ನ್ಯಾಯಮೂರ್ತಿಯಾಗಿದ್ದವರು. ಅವರೇ ಪ್ರಾಸಿಕ್ಯೂಶನ್ ಮುಖ್ಯಸ್ಥರು. ಸಹಾಯಕ್ಕೆ ಪಿ.ಗೋವಿಂದ ಮೆನನ್ (ನಂತರ ಮದ್ರಾಸ್ ಹೈಕೋರ್ಟು - ಸುಪ್ರೀಂಕೋರ್ಟು ನ್ಯಾಯಮೂರ್ತಿ) ತನಿಖೆ ಮುನ್ನಡೆಸಿದ ಅರುಣಗಿರಿ ಮೊದಲಿಯಾರ್ ಪ್ರಾಸಿಕ್ಯೂಶನ್‍ಗೆ ಸಹಾಯಕ. ಇಂಗ್ಲೀಷ್, ತಮಿಳು, ತೆಲುಗು ಮತ್ತಿತರ ಪತ್ರಿಕೆಗಳು ದಿನದಿನದ ತನಿಖೆಯನ್ನು ಇದ್ದಕ್ಕಿದ್ದ ಹಾಗೇ ಧಾರಾವಾಹಿಯಾಗಿ ಪ್ರಕಟಿಸುತ್ತಾ ಜನಗಳ ಆಸಕ್ತಿಯನ್ನು ಜೀವಂತ ಇಟ್ಟವು.

ಇದು ಜಯಾನಂದಂ ‘ತಪ್ಪೊಪ್ಪಿಗೆ’ಯೇ?
       ಈ ಜಯಾನಂದಂ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಿಷ್ಟೇ. ‘ನನ್ನ ಮತ್ತು ಅಕ್ಕನನ್ನು ‘ಹಿಂದೂ ನೇಶನ್’ ಪತ್ರಿಕೆ ಅವಹೇಳನ ಮಾಡುತ್ತಿತ್ತು. ನವಂಬರ್ 7 ರಂದು ನಾಗಲಿಂಗಂ ಬಂದು ಲಕ್ಷ್ಮೀಕಾಂತಂನನ್ನು ಮುಗಿಸಲು ಏರ್ಪಾಡು ಆಗಿದೆ ಎಂದ. ಹೇಗೆ, ಇಂಥಾ ಅಪಾಯಕಾರಿ ಕೆಲಸ ಎಂದು ಕೇಳಿದಾಗ, ತ್ಯಾಗರಾಜ ಭಾಗವತರ್ ಮತ್ತು ಎನ್.ಎಸ್.ಕೃಷ್ಣನ್ ಹಣ ಒದಗಿಸುತ್ತಾರೆ, ಸಿಕ್ಕಿಬಿದ್ದರೆ ರಕ್ಷಿಸುತ್ತಾರೆ ಕೂಡಾ ಎಂದು ಹೇಳಿ ನನ್ನನ್ನು ಪೀಪಲ್ಸ್ ಪಾರ್ಕ್‍ಗೆ ಕರೆದೊಯ್ದ. ಅಲ್ಲಿ ವಡಿವೇಲು, ರಾಜಬತ್ತಾರ್, ಶ್ರೀರಾಮುಲು ನಾಯ್ಡು ಕಾಯುತ್ತಿದ್ದರು. ವಡಿವೇಲುವನ್ನು ತೋರಿಸಿದ ನಾಗಲಿಂಗಂ ಈ ಹಿಂದೆ ಲಕ್ಷ್ಮೀಕಾಂತಂ ಮೇಲೆ ಬಿದ್ದವ ಇವನೇ, ನಾಳೆ ಲಕ್ಷ್ಮೀಕಾಂತಂನನ್ನು ಕೊಲ್ಲಲು ತಯಾರಾಗಿದ್ದಾನೆ ಎಂದ.  ಶ್ರೀರಾಮುಲು ಇದು ಗಂಡಾಂತರದ ಕೆಲಸ, ಸಿಕ್ಕಿಬಿದ್ದರೆ ಯಾರೊಬ್ಬರದೂ ಹೆಸರು ಹೇಳಬಾರದು ಎಂದು ತಾಕೀತು ಮಾಡಿದ. ಕಮಲನಾಥನ್ ಎಂಬವನನ್ನು ಪರಿಚಯಿಸಿ ಈತನೇ ಹಣದ ವ್ಯವಸ್ಥೆ ಮಾಡುತ್ತಾನೆ ಎಂದ. ಇನ್ನು ‘ದೊಡ್ಡವ’ರನ್ನು ಭೇಟಿ ಮಾಡಲು ‘ವಾಲ್ ಟ್ಯಾಕ್ಸ್ ಥೀಯೇಟರ್’ಗೆ ಹೋದೆವು. ಮೇಕಪ್ ರೂಮಿನಲ್ಲಿರುವಾಗ ಭಾಗವತರ್ ಮತ್ತು ಕೃಷ್ಣನ್ ಬಂದರು. ಕೆಲಸ ಪೂರೈಸಿದರೆ ರೂ.2500/- ಕೊಡುತ್ತೇವೆ ಎಂದರು. ರೂ.500/- ಕೊಟ್ಟು ಬಾಕಿ ಹಣ ಕೆಲಸ ಮುಗಿದ ನಂತರ ಎಂದು ಹೇಳಿ ಯಾರಿಗೂ ಹೇಳಬಾರದು ಎಂದು ಪ್ರತಿಜ್ಞೆ ಮಾಡಿಸಿದರು.  ಕೊಲೆಗೈಯಲು ವೀಳ್ಯದೆಲೆಯೊಂದಿಗೆ ಉಪ್ಪು ನೀಡಿ ವೀಳ್ಯ ನೀಡಲಾಯಿತು. ಮರುದಿನ ಬೆಳಿಗ್ಗೆ 4-45ಕ್ಕೆ ಎಲ್ಲರೂ ಜನರಲ್ ಕಾಲಿನ್ಸ್ ರೋಡ್‍ನಲ್ಲಿ ಎಲ್ಲರೂ ಒಟ್ಟಾದೆವು. ಲಕ್ಷ್ಮೀಕಾಂತಂ ತನ್ನ ಮನೆಯಿಂದ ರಿಕ್ಷಾದಲ್ಲಿ ಬರುವಾಗ ಹೊಂಚುಹಾಕಿ ಕುಳಿತಿದ್ದೆವು. ಆದರೆ ಆ ಜಾಗ ಸರಿಯಿಲ್ಲ, ಆತ ವಾಪಾಸು ಬರುವಾಗ ನೋಡುವ ಎಂದ ವಡಿವೇಲು. ರಿಕ್ಷಾ ಹಿಂದಿರುಗುವುದನ್ನು ಕಾಯುತ್ತಾ ಶೆಡ್ ಒಂದರಲ್ಲಿ ಹಾಲು ಕರೆಯುತ್ತಿದ್ದ ಗೋಪಾಲಕರನ್ನು ಮಾತನಾಡಿಸುತ್ತಾ ನಿಂತೆವು (ಕೊಲೆ ಮಾಡಲು ಹೊರಟ ಯಾರಾದರೂ ಹೀಗೆ ಸಿಕ್ಕಿಬೀಳುವ ರೀತಿಯಲ್ಲಿ ಯಾರನ್ನಾದರೂ ಮಾತನಾಡಿಸುವುದುಂಟೇ?) ಅಷ್ಟರಲ್ಲಿ ನಾಗಲಿಂಗಂ ಓಡಿ ಬಂದು ನೀನಿನ್ನು ಮರೆಯಾಗು ಎಂದ. ರಾಜಬತ್ತಾರ್‍ನನ್ನೂ ದೂರ ಹೋಗು ಎಂದ. ಆತ ಮತ್ತು ವಡಿವೇಲು ಅಷ್ಟರಲ್ಲಿ ಕೆಲಸ ಪೂರೈಸಿದ್ದರು. ನಾನು ಮನೆಗೆ ಮರಳಿದೆ’ ಪೋಲೀಸರು ಇಡೀ ಕೇಸನ್ನು ಕಟ್ಟಿದ್ದೇ ಈ ಹೇಳಿಕೆಯ ಮೇಲೆ. ಈ ಹೇಳಿಕೆಯನ್ನು ಪೋಲೀಸರೇ ಕಟ್ಟಿದ್ದು ಎಂಬುದು ಡಿಫೇನ್ಸ್ ವಕೀಲರ ವಾದ.

ತಿರುಗಿಬಿದ್ದ ಜಯಾನಂದಂ
      ಆದರೆ ಕಮಿಟ್ಟಲ್ ನ್ಯಾಯಾಲಯದಲ್ಲೇ ಸಾಕ್ಷ್ಯ ನುಡಿಯುವ ಪ್ರಸಂಗ ಬಂದಾಗ ಈ ಜಯಾನಂದಂ ಪೋಲೀಸರಿಗೆ ಕೈಕೊಟ್ಟ. ತಪ್ಪೊಪ್ಪಿಗೆ ಹೇಳಿಕೆಯಿಂದ ತಿರುಗಿಬಿದ್ದ. ಪೋಲೀಸರು ತನಗೆ ಚಿತ್ರಹಿಂಸೆ ನೀಡಿ ಈ ರೀತಿಯ ತಪ್ಪೊಪ್ಪಿಗೆ ಹೇಳಿಕೆ ಹೊರಡಿಸಿದ್ದರು ಎಂದ. ಹಾಗಾಗಿ ಅವನ ತಪ್ಪೊಪ್ಪಿಗೆ ಮಾಯವಾಗಿ ಅದು ಬರೇ ಸಾಕ್ಷ್ಯ ಮಾತ್ರವಾಯಿತು. ಜಯಾನಂದಂ ಲಾಗ ಹಾಕಿದಾಗ ಪ್ರಾಸಿಕ್ಯೂಶನ್ ಅವಾಕ್ಕಾಯಿತು. ಆತನನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲಾಯಿತು. ಪ್ರಾಸಿಕ್ಯೂಶನ್ ಪರ ‘ಸ್ಟಾರ್ ವಿಟ್‍ನೆಸ್’  ಎನ್ನಿಸಿದ್ದ ಈ ಜಯಾನಂದಂನನ್ನೇ ಅಡ್ಡಸವಾಲಿಗೆ ಒಳಪಡಿಸಿದರು. ಶೆಡ್ಡಿನಲ್ಲಿದ್ದ ಗೋಪಾಲಕರೂ ಆ ದಿನ ಹಲ್ಲೆಗೆ ಮುಂಚೆ ಇವರನ್ನು ನೋಡಿದ್ದಾಗಿ ಸಾಕ್ಷ್ಯ ಕೊಟ್ಟರು. ರಿಕ್ಷಾ ಚಾಲಕ ಗೋಪಾಲನ್ ಪ್ರತ್ಯಕ್ಷದರ್ಶಿಯಾಗಿ ಇವರನ್ನು ಗುರುತಿಸಿಬಿಟ್ಟ. ರಾಮಣ್ಣ ಪತ್ರ ಬರೆದ ಸಂಗತಿ ಸಾಕ್ಷ್ಯ ನೀಡಿ ಆರೋಪಿಗಳ ಎದೆಯಲ್ಲಿ ಚಳಿಹುಟ್ಟಿಸಿದ. ಕಮಲನಾಥನ್ ಸಹಾ ಪಿತೂರಿ ಕುರಿತು ಸಾಕ್ಷ್ಯ ನೀಡಿದ. ಲಕ್ಷ್ಮೀಕಾಂತಂ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಶ್ರೀನಿವಾಸಲು ನಾಯ್ಡು ಸಾಕ್ಷಿ ಪಂಜರಕ್ಕೆ ಬಂದಾಗ ಡಿಫೆನ್ಸ್ ವಕೀಲರು ಆತನನ್ನು ಹಿಗ್ಗಾಮುಗ್ಗಾ ತಿಕ್ಕಿಬಿಟ್ಟರು. ಆತ ಪಾಪ, ತನ್ನ ವೈದ್ಯಮಿತ್ರರನ್ನೇ ಕೈಬಿಟ್ಟಂತೆ ಆಸ್ಪತ್ರೆಯಲ್ಲಾದ ಎರಡನೇ ಗಾಯದಿಂದಲೇ ಲಕ್ಷ್ಮೀಕಾಂತಂ ಮೃತಪಟ್ಟಿರಬೇಕು ಎಂದುಬಿಟ್ಟ ! ಲಕ್ಷ್ಮೀಕಾಂತಂನನ್ನು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿ ಗಾಯವನ್ನು ದಾಖಲಿಸಿದ ಡಾ.ಜೋಸೆಫ್ ಆಸ್ಪತ್ರೆಯ ಪುಸ್ತಕದಲ್ಲಿ ‘ಹಲ್ಲೆ ಮಾಡಿದವರ ಹೆಸರು ಗೊತ್ತಿಲ್ಲ’ ಎಂದು ಆತ ಹೇಳಿರುವುದಾಗಿ ಬರೆದಿದ್ದರು. ಆದರೆ ಯಾಕೋ ಪ್ರಾಸಿಕ್ಯೂಶನ್ ಈ ಪ್ರಮುಖ ಸಾಕ್ಷಿಯನ್ನು ಕರೆಸಲೇ ಇಲ್ಲ. ಇದರಿಂದ ಕುಪಿತರಾದ ನ್ಯಾಯಮೂರ್ತಿಗಳೇ ನ್ಯಾಯಾಲಯದ ಸಾಕ್ಷಿಯಾಗಿ ಡಾ.ಜೋಸೆಫ್‍ರನ್ನು ಕರೆಸಿ ತನಿಖೆ ಮಾಡಿಬಿಟ್ಟರು.

ಆರೋಪಿಗಳ ಬಚಾವಿಗೆ ಪರಿಣತರ ದಂಡು
        ಆರೋಪಿಗಳನ್ನು ಕೇಸಿನಿಂದ ಪಾರುಮಾಡಲು ದೇಶದ ಅತಿ ಶ್ರೇಷ್ಠ ವಕೀಲರ ಗಡಣವೇ ಸಿದ್ಧವಾಗಿ ನಿಂತಿತ್ತು. ಕ್ರಿಮಿನಲ್ ಕಾಯ್ದೆಯ ದಿಗ್ಗಜರು, ಅಪರಾಧಶಾಸ್ತ್ರ ಪಂಡಿತರು, ಪರಿಣತರೆನಿಸಿದವರೆಲ್ಲಾ ಆರೋಪಿಗಳ ಪರ ವಕಾಲತು ಸಲ್ಲಿಸಿದರು. ಇವರೆಲ್ಲಾ ಆಗಲೇ ಉನ್ನತ ಕಾನೂನುವೇತ್ತರಾಗಿ ಹೆಸರುಗಳಿಸಿದವರು. ಇವರ ರುಸುಂ ಕೂಡಾ ಗಗನದೆತ್ತರದಷ್ಟು. ವಿ.ಟಿ.ರಂಗಸ್ವಾಮಿ ಐಯ್ಯಂಗಾರ್, ರಾಜಗೋಪಾಲಾಚಾರ್ಯ, ಬ್ರಾಡೆಲ್ (ಸಿಂಗಾಪುರದಲ್ಲಿ ಬ್ಯಾರಿಸ್ಟರಾಗಿದ್ದ ಈತ ಯುದ್ಧದ ಕಾರಣ ಜಪಾನ್ ಬಾಂಬ್ ದಾಳಿಗೆ ಹೆದರಿ ಮದ್ರಾಸಿಗೆ ಬಂದಿದ್ದವ) ಬಿ.ಟಿ.ಸುಂದರರಾಜನ್, ಗೋವಿಂದಸ್ವಾಮಿನಾಥನ್, ಶ್ರೀನಿವಾಸ ಗೋಪಾಲ್ ಅಲ್ಲದೇ ಮುಂಬೈಯಿಂದ ಪ್ರಸಿದ್ಧ ಲೇಖಕ, ದೇಶಭಕ್ತ, ಕಾಂಗ್ರೆಸ್ ಧುರೀಣ (ನಂತರ ಕೇಂದ್ರ ಸಚಿವ, ಗವರ್ನರ್ ಆಗಿದ್ದ) ನ್ಯಾಯವಾದಿ ಕೆ.ಎಂ.ಮುನ್ಶಿ ಸಹಾ ಆರೋಪಿಗಳ ರಕ್ಷಣೆಗೆ ಬಂದು ನಿಂತಿದ್ದರು. ಕೆ.ಎಂ. ಮುನ್ಶಿ ಬರುತ್ತಲೇ ಪ್ರಕರಣ ಇನ್ನಷ್ಟು ಹೆಚ್ಚು ತೂಕ ಪಡೆದುಕೊಂಡಿತು. ಅವರನ್ನು ಆಕಾಶದೆತ್ತರದ ರುಸುಂ ನೀಡಿ ಕರೆಸಿಕೊಂಡವರು ಶ್ರೀರಾಮುಲು ನಾಯ್ಡು. ಆದರೆ ನಾಯ್ಡು ಕೊಟ್ಟ ರುಸುಂ ವ್ಯರ್ಥವಾಗಲಿಲ್ಲ. ಪ್ರಕರಣದ ತನಿಖೆಗೆ ಮುಂಚೆಯೇ ‘ಆಲಿಬಿ’ ಅಂದರೆ ಘಟನೆ ನಡೆದ ಸಂದರ್ಭದಲ್ಲೇ ಆರೋಪಿ ಬೇರೆ ಕಡೆ ಇದ್ದನೆಂಬ ಸಾಕ್ಷ್ಯ - ಎತ್ತಿಬಿಟ್ಟರು ಕೆ.ಎಂ.ಮುನ್ಶಿ. ಪಿತೂರಿ ನಡೆಯಿತು ಎಂದು ಹೇಳುವ ಕಾಲಕ್ಕೆ ಈ ನಾಯ್ಡು ಮುಂಬೈಯ ಪ್ರಸಿದ್ಧ ತಾಜ್‍ಮಹಲ್ ಹೋಟೇಲಿನಲ್ಲಿದ್ದರು ಎಂದು ಹೋಟೇಲಿನ ದಾಖಲೆ ಸಹಿತ ಮಂಡಿಸಿ ವಾದಿಸಿಬಿಟ್ಟರು. ಅವರ ವಾದ ಯಶಸ್ವಿಯಾಗಿ ನಾಯ್ಡು ಬಗ್ಗೆ ಪ್ರಾಸಿಕ್ಯೂಶನ್ ತಣ್ಣಗಾಯಿತು. ಅವರ ಮೇಲಿನ ಆರೋಪವನ್ನು ಕೈಬಿಟ್ಟಿತು. ಕೊಯಮುತ್ತೂರಿನ ಈ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಸ್ಟುಡಿಯೋ ಮಾಲಕ ಬಚಾವಾಗಿ ಸ್ವತಂತ್ರ ಮನುಷ್ಯನಾಗಿ ಹೊರನಡೆದುಬಿಟ್ಟ ! ಆ ನಂತರ ಎನ್.ಎಸ್.ಕೃಷ್ಣನ್ ರಕ್ಷಣೆಗೆ ಕೆ.ಎಂ.ಮುನ್ಶಿಯವರಿಗೇ ವಕಾಲತು ನೀಡಲಾಯಿತು. ಆತನನ್ನು ನಿರ್ದೋಷಿ ಎಂದು ಸಾಧಿಸಿ ಮುಕ್ತಿಗೊಳಿಸಲು ಮುನ್ಶಿ ಮತ್ತವರ ತಂಡ ತಮ್ಮ ಪ್ರತಿಭೆ, ಅನುಭವ, ಪರಿಣತಿ, ನೈಪುಣ್ಯಗಳನ್ನೆಲ್ಲಾ ವ್ಯಯಿಸಿತು.

ಪೋಲೀಸರು ಕಟ್ಟಿದ ಕತೆ !
      ಲಕ್ಷ್ಮೀಕಾಂತಂನ ಅಸಹ್ಯ ಬರವಣಿಗೆ ವಿರುದ್ಧ ಗವರ್ನರಿಗೆ ಮನವಿ ಮಾಡಿದ್ದೇ ತಪ್ಪೇ? ಅದನ್ನೇ ಕೊಲೆಗೆ ಕಾರಣವಾದ ದ್ವೇಷ ಎಂದು ಪರಿಗಣಿಸಲಾದೀತೇ? ಪಿತೂರಿಗೆ ಅದೇ ಸಾಕಾದೀತೇ? ಜಯಾನಂದಂ ತಪ್ಪೊಪ್ಪಿಗೆ ಹೇಳಿಕೆ ಪೋಲೀಸರ ಚಿತ್ರಹಿಂಸೆಯಿಂದ ಪಡೆದದ್ದು. ಆರೋಪಕ್ಕೆ ಆಧಾರವಾದೀತೇ? ಹಲ್ಲೆ ನಡೆದಾಗಿನ ಸಣ್ಣ ಸರಳ ಗಾಯದಿಂದ ಲಕ್ಷ್ಮೀಕಾಂತಂ ಸಾಯಲಿಲ್ಲ - ನಂತರ ಯಾರೋ ಮಾಡಿದ ಎರಡನೇಯ ಗಾಯದಿಂದಾಗಿಯೇ ಸತ್ತ ಎಂಬುದು ರುಜುವಾತಾಗಿದೆ. ಡಾ.ಶ್ರೀನಿವಾಸಲು ನಾಯ್ಡು ಈ ಬಗ್ಗೆ ಒಪ್ಪಿಬಿಟ್ಟಿದ್ದಾನಲ್ಲ. ಅಂದ ಮೇಲೆ ಹಲ್ಲೆ ಹಾಗೂ ಮೊದಲ ಗಾಯ ಕೊಲೆಗೆ ಕಾರಣ ಎನ್ನಲಾದೀತೇ? ಇಡೀ ಪ್ರಕರಣ ಪೋಲೀಸರು ಕಟ್ಟಿದ ಕಟ್ಟುಕತೆ ಎಂದರು ಡಿಫೆನ್ಸ್ ವಕೀಲರುಗಳು. ಡಿಫೆನ್ಸ್ ಪರ ಸಾಕ್ಷಿಗಾರರು ಕೋರ್ಟು ಮುಂದೆ ಹಾಜರಾಗಿ ಎನ್.ಎಸ್.ಕೆ. ಪಿತೂರಿ ನಡೆಯಿತೆಂಬ ಕಾಲದಲ್ಲಿ ಮದ್ರಾಸಿನಲ್ಲಿರಲೇ ಇಲ್ಲ, ಸೇಲಂನಲ್ಲಿ ‘ಬರ್ಮಾರಾಣಿ’ ಚಿತ್ರದ ಶೂಟಿಂಗ್‍ನಲ್ಲಿದ್ದ ಎಂದು ಸಾಕ್ಷಿ ಹೇಳಿದರು.

ಬಂದೆರಗಿತು ತೀರ್ಪು
      ತನಿಖೆ ಅಂತೂ ಮುಗಿಯಿತು. ಆರೋಪಿಗಳಿಗೆ ತಾವು ನಿರ್ದೋಷಿಗಳೆಂದೂ, ಕೇಸಿನಿಂದ ತಮ್ಮ ಬಿಡುಗಡೆಯಾಗುವುದೆಂದು ಅತೀವ ಆತ್ಮವಿಶ್ವಾಸವಿತ್ತು. ಕೇಸಿನಲ್ಲಿ ಸಾಕ್ಷಿಗಳ ತನಿಖೆಯೂ ಹಾಗಿತ್ತು. ಎನ್.ಎಸ್.ಕೆ. ಪತ್ನಿ ಟಿ.ಎ.ಮಧುರಂಳಂತೂ ಆ ದಿನ ತೀರ್ಪಿನ ನಂತರ ಸಿಹಿ ಹಂಚಲು ಸಿದ್ಧವಾಗಿಯೇ ನ್ಯಾಯಾಲಯಕ್ಕೆ ಬಂದು ಕುಳಿತಿದ್ದರು. ಜ್ಯೂರಿಗಳಿಗೆ ನ್ಯಾಯಮೂರ್ತಿಗಳು ಎಲ್ಲ ಬಿಡಿಸಿ ಹೇಳಿ, ನಿಮ್ಮ ತೀರ್ಮಾನ ಹೇಳಿ ಎಂದರು. ಜ್ಯೂರಿಗಳು ಬಹುಮತದಿಂದ ತಮ್ಮ ಅಭಿಮತ ನೀಡಿದರು.  ನ್ಯಾಯಮೂರ್ತಿ ಮೊಕೆಟ್ ಜ್ಯೂರಿಗಳ ಅಭಿಪ್ರಾಯಕ್ಕೆ ಬೆಲೆ ಕೊಟ್ಟರು. ಜ್ಯೂರಿಗಳು ಸರಿಯಾಗಿಯೇ ನಿರ್ಧರಿಸಿದ್ದಾರೆ ಎಂದರು. ತನ್ನ ತೀರ್ಪೂ ಸಹಾ ಅದೇ ಎಂದರು. ಆರ್ಮುಗಂ ಬಿಡುಗಡೆಯಾದ. ಭಾಗವತರ್, ಕೃಷ್ಣನ್ ಮತ್ತು ನಾಲ್ವರಿಗೆ ಜೀವಾವಧಿ ಶಿಕ್ಷೆ ನೀಡಿಬಿಟ್ಟರು !

ದರಿದ್ರರಾದ ದಾನಶೂರರು
        ದಿಗ್ಭ್ರಾಂತರಾದರು ಎಂ.ಕೆ.ಟಿ ಮತ್ತು ಎನ್.ಎಸ್.ಕೆ. ಬಂಧನದ ಹೊತ್ತಿಗೆ ಇಪ್ಪತ್ತು ಚಿತ್ರಗಳಿಗೆ ಸಹಿ ಮಾಡಿದ್ದ ಈ ವರನಟ. ಹಲವರಿಂದ ಅಡ್ವಾನ್ಸ್ ಹಣ ಪಡೆದಿದ್ದ. ಆದರೆ ಬಂಧನದಲ್ಲಿರುವಾಗ ಯಾವನೇ ನಿರ್ಮಾಪಕ ಇವರ ಸಹಾಯಕ್ಕೆ ಬಂದಿರಲಿಲ್ಲ. ಜೈಲಿಗೆ ಬಂದು ಮಾತಾಡಿಸಿರಲಿಲ್ಲ. ಬಂದವರಿದ್ದರೆ, ಅಡ್ವಾನ್ಸ್ ವಾಪಾಸು ಕೇಳಲು ಮಾತ್ರ. ಸ್ನೇಹಿತರೂ ಕೈಬಿಟ್ಟಿದ್ದರು. ನಿರ್ಮಾಪಕರೂ ಇವರ ಬದಲಿಗೆ ಬೇರೆಯವರನ್ನು ಹಾಕಿಕೊಂಡು ಚಿತ್ರ ತಯಾರಿಕೆ ಮುಂದರಿಸಿದ್ದರು - ಕಾರಣ ಇವರು ಇನ್ನೆಂದೂ ಜೈಲಿನಿಂದ ಹೊರಬರಲಾರರು ಎಂದು. ಎಂ.ಕೆ.ಟಿ. ಅಭಿನಯಿಸಬೇಕಾಗಿದ್ದ ‘ಕಾಳಿದಾಸ’ ಚಿತ್ರಕ್ಕೆ  ಕರ್ನಾಟಕದಿಂದ ಹೊನ್ನಪ್ಪ ಭಾಗವತರ್ ಎಂಬ ಹಾಡುಗಾರ ನಟನನ್ನು ಕರೆತಂದು ನಿರ್ಮಿಸಿದರೂ ಅದು ಸೋತಿತು. ‘ವಾಲ್ಮೀಕಿ’ ಚಿತ್ರವೂ ನೆಲಕಚ್ಚಿತ್ತು. ಎಂ.ಕೆ.ಟಿ.ಗೆ ಸಮನಾದವರು ಬೇರಿಲ್ಲ ಎಂದೇ ಆಗಿಬಿಟ್ಟಿತ್ತು. ತ್ಯಾಗರಾಜ ಭಾಗವತರ್‍ಗೆ ತಮಿಳು ಚಿತ್ರರಂಗ ತನ್ನನು ಈ ರೀತಿ ಕಡೆಗಣಿಸಿದ್ದು ತಂಬ ನೋವು ತಂದಿತ್ತು. ಅದೇ ರೀತಿ ಎನ್.ಎಸ್.ಕೃಷ್ಣನ್ ತಮಿಳು ಚಿತ್ರರಂಗದ ಕಾಮಿಡಿಯನ್ ರಾಜ. ಜೈಲಿನಲ್ಲಿರುವಾಗ ಆತನನ್ನು ಕಂಡವರೇ ಇಲ್ಲ. ವಾಸನ್ ಎಂಬ ನಿರ್ಮಾಪಕ ಮಾತ್ರ ಆತನ ಅಭಿನೇತ್ರಿ ಪತ್ನಿ ಟಿ.ಎ.ಮಧುರಂ ಕೈಗೆ ರೂ.25,000/- ನೀಡಿ ಸಹಾಯ ಒದಗಿಸಿದ್ದ. ತ್ಯಾಗರಾಜ ಭಾಗವತರ್ ಎರಡು ಕೈಗಳಿಂದಲೂ ಸಂಪಾದನೆ ಮಾಡುತ್ತಿದ್ದವ. ಮನೆಯಲ್ಲಿ ಚಿನ್ನದ ಬಟ್ಟಲಲ್ಲೇ ಉಣ್ಣುತ್ತಿದ್ದ. ಬೆಳ್ಳಿಯ ಲೋಟದಲ್ಲೇ ಕುಡಿಯುತ್ತಿದ್ದ. ಆತನ ಒಂದು ಚಿನ್ನದ ಬಟ್ಟಲು 110 ಪವನ್ ತೂಕದ್ದು. ಅಂತಹ ಮೂರು ಬಟ್ಟಲುಗಳು ಆತನಲ್ಲಿದ್ದುವು. ಕೊಡುಗೈ ದೊರೆ ಆತ. ಒಮ್ಮೆ ತನ್ನ ಬಳಿ ಸಹಾಯ ಕೇಳಿ ಬಂದ ಸುರಥ ಎಂಬ ಕಲಾವಿದನಿಗೆ ಮನೆಯಲ್ಲಿ ಊಟ ನೀಡುವಾಗ ಹಾಕಿದ್ದ ಬಾಳೆಎಲೆಯನ್ನು ತಾನು ಹಾಕಿಕೊಂಡು ತನ್ನ ಚಿನ್ನದ ಬಟ್ಟಲನ್ನು ಅವನಿಗೆ ಉಣ್ಣಲುಕೊಟ್ಟ ಎಂ.ಕೆ.ಟಿ. ಕಡೆಗೆ ಅದನ್ನೇ ಆತನಿಗೆ ಸಹಾಯವಾಗಿ ಕೊಟ್ಟವ. ಆಗ ಅದರ ಬೆಲೆ ರೂ.15,000/-, (ಈಗ  ನಾಲ್ಕೈದು ಲಕ್ಷಕ್ಕೂ ಹೆಚ್ಚು) ಎನ್.ಎಸ್.ಕೃಷ್ಣನ್ ಸಹಾ ಇದೇ ರೀತಿಯವ. ಇಸ್ಪೀಟು ಆಡಲು ಕುಳಿತಾಗ ಸಹಾಯ ಕೇಳಿ ಬಂದ, ಮೂರು ದಿನದಿಂದ ಊಟ ಕಾಣದ ಒಬ್ಬಾತನಿಗೆ ತನ್ನ ಜೇಬಿನಿಂದ ಹಣ ಕೊಡುವಂತೆ ಮಿತ್ರನಿಗೆ ಹೇಳಿ ಆಟವಾಡುತ್ತಲೇ ಇದ್ದವ. ಬೇಬಿನಲ್ಲಿದ್ದ ಹೊಸ ರೂ.5ರ ಕಟ್ಟಿನಿಂದ ಆತನ ಮಿತ್ರ ಒಂದು ನೋಟು ಕೀಳಲು ಉರುಡಾಟ ಮಾಡುತ್ತಿದ್ದಾಗ ‘ಯಾಕೆ ಜಿಪುಣತನ ಮಾಡುತ್ತೀ ಕೊಡು ಒಂದಷ್ಟು ನೋಟನ್ನು’ ಎಂದು ಆಗಿನ ಕಾಲದಲ್ಲಿ ದುಬಾರಿ ಎನಿಸಿದ್ದ 5ರ ಹತ್ತು ನೋಟುಗಳನ್ನೇ ಊಟಕ್ಕಾಗಿ ಕೊಟ್ಟು, ನಂತರ ಮತ್ತಷ್ಟು ಹಣ ಸಹಾಯಕೊಟ್ಟು ಕಳುಹಿಸಿದವ. ಈಗ ಇವರಿಬ್ಬರು ತಮ್ಮಲ್ಲಿದ್ದ ಸಂಪತ್ತನ್ನೆಲ್ಲಾ ಕೇಸಿಗಾಗಿ ದೊಡ್ಡದೊಡ್ಡ ವಕೀಲರಿಗೆ ಅವರ ಭಾರೀ ಮೊತ್ತದ ರುಸುಂ ಪಾವತಿಮಾಡಲು ತೆತ್ತು ದರಿದ್ರರಾಗಿಬಿಟ್ಟಿದ್ದರು!

ಅಪೀಲಿನಲ್ಲೇನಾಯಿತು ?
        ತಮಗೊದಗಿದ ಅನ್ಯಾಯದ ಶಿಕ್ಷೆ ವಿರುದ್ಧ ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಅಪೀಲು ಮಾಡಿದರು ಆರೋಪಿಗಳು. ಅದು ಮೂರು ಮಂದಿಯ ಅಪೀಲು ಪೀಠ. ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಲಿನೆಲ್ ಲೀಚ್, ನ್ಯಾಯಮೂರ್ತಿ ಕೆ.ಪಿ.ಲಕ್ಷ್ಮಣರಾವ್ ಮತ್ತು ಆಗಿನ ಆಡ್ವಕೇಟ್ ಜನರಲ್ ಕೆ.ರಾಜಾ ಐಯ್ಯರ್ ಇವರಿರುವ ಪೀಠ. ಆಗಿನ ಖ್ಯಾತ ವಕೀಲರುಗಳಾದ ವಿ.ವಿ.ಶ್ರೀನಿವಾಸ ಐಯ್ಯಂಗಾರ್, ಎ.ಸಿ.ಗೋಪಾಲರತ್ನಂ ಅಪೀಲುಗಳನ್ನು ಸಲ್ಲಿಸಿ ಪ್ರಬಲ ವಾದ ಮಂಡಿಸಿದರು. ಅಪೀಲಿನಲ್ಲಿ ಖಂಡಿತ ತಮಗೆ ನ್ಯಾಯ ದೊರಕುತ್ತದೆ, ಸತ್ಯಕ್ಕೆ ಜಯವಾಗುತ್ತದೆ ಎಂಬ ವಿಶ್ವಾಸ ಆರೋಪಿಗಳಿಗೆ ಇದ್ದೇ ಇತ್ತು. ಎಲ್ಲರೂ ಕುತೂಹಲ ಮತ್ತು ಆಸಕ್ತಿಯಿಂದ ಅಪೀಲು ಬೆಂಚಿನ ತೀರ್ಪನ್ನು ಎದುರು ನೋಡುತ್ತಿರುವಾಗಲೇ ಬರಸಿಡಿಲಿನಂತೆ ಬಂದ ತೀರ್ಪು ಅವರ ಆಸೆಯನ್ನು ಮಣ್ಣುಗೂಡಿಸಿತ್ತು. ಅವರ ಅಪೀಲನ್ನು ವಜಾ ಮಾಡಲಾಗಿತ್ತು. ತನಿಖಾ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದ ವಿಭಾಗೀಯ ಪೀಠ ಹಸ್ತಕ್ಷೇಪ ಮಾಡಲು ನಿರಾಕರಿಸಿ, ಆರೋಪಿಗಳಿಗೆ ನೀಡಿದ ಜೀವಾವಧಿ ಶಿಕ್ಷೆಯನ್ನು ಗಟ್ಟಿಮಾಡಿಬಿಟ್ಟಿತ್ತು. ಜೈಲಿನಿಂದ ಹೊರಬರುವ ಈ ತಾರಾಮಣಿಗಳ ಆಕಾಂಕ್ಷೆಯ ಮೇಲೆ ಅಪೀಲುಪೀಠ ತಣ್ಣೀರೆರೆಚಿತ್ತು.

     ಮದ್ರಾಸ್ ಹೈಕೋರ್ಟಿನ ವಿಭಾಗೀಯಪೀಠ ಆರೋಪಿಗಳ ಅಪೀಲುಗಳನ್ನು ತಿರಸ್ಕರಿಸಿ ಜೀವಾವಧಿ ಶಿಕ್ಷೆ ಖಾಯಂಗೊಳಿಸಿದರೂ ಆರೋಪಿಗಳಿಗೆ ಇನ್ನೂ ಒಂದು ಮಾರ್ಗ ಉಳಿದಿತ್ತು. ಅವರ ಆಶಾದೃಷ್ಟಿ ಲಂಡನ್ನಿನತ್ತ ನೆಟ್ಟಿತ್ತು. ಆಗಿನ್ನೂ ಬ್ರಿಟಿಷ್ ಸರಕಾರದ ಆಳ್ವಿಕೆಯೇ ಇತ್ತು. 1935ರ ಭಾರತ ಸರಕಾರದ ಕಾನೂನು ಭಾರತದ ದಿಲ್ಲಿಯಲ್ಲಿ ಅತ್ಯುನ್ನತ ಫೆಡರಲ್ ನ್ಯಾಯಾಲಯ ಸ್ಥಾಪಿಸಿತ್ತು. ಅದೂ ಸಹಾ ಮೂವರು ಸದಸ್ಯರ ಅಪೀಲು ಪೀಠ. ಭಾರತದಲ್ಲಿ ಅತ್ಯುಚ್ಚ ಅಪೀಲು ನ್ಯಾಯಾಲಯ ಅದೇ ಆಗಿತ್ತು. ಆದರೆ ಈ ಕಾಯಿದೆಯಲ್ಲಿ ಪದಪ್ರಯೋಗದ ನ್ಯೂನತೆಯಿಂದಾಗಿ ಭಾರತದಲ್ಲಿನ ಕ್ರಿಮಿನಲ್ ಪ್ರಕರಣಗಳಿಗೆ ಅಂತಿಮ ಅಪೀಲು ನ್ಯಾಯಾಲಯ ಲಂಡನ್ನಿನಲ್ಲಿನ ಪ್ರಿವಿಕೌನ್ಸಿಲೇ ಆಗಿ ಉಳಿದಿತ್ತು. ಪ್ರಿವಿಕೌನ್ಸಿಲ್‍ಗೆ ಮೊರೆ ಹೋಗದೇ ಆರೋಪಿಗಳಿಗೆ ಬೇರೆ ದಾರಿಯೇ ಇರಲಿಲ್ಲ.

ಪ್ರಿಟ್ಟ್ ಅಟ್ಟಹಾಸ
     ಪ್ರಿವಿಕೌನ್ಸಿಲ್‍ನಲ್ಲಿ ಡಿ.ಎನ್.ಪ್ರಿಟ್ಟ್ ಎಂಬ ಬ್ಯಾರಿಸ್ಟರ್ ಇದ್ದ. ಅನ್ಯಾಯಕ್ಕೊಳಗಾದವರ ಪರ, ಶೋಷಿತರ ಪರ ಕೊನೆಯ ಹೋರಾಟಕ್ಕೆ ಆತ ಪ್ರಸಿದ್ಧ. ಡಿಫೆಂಡರ್ ಆಫ್ ಲೋಸ್ಟ್ ಕಾಸನ್ ಎಂದೇ ಅವನಿಗೆ ಹೆಸರಿತ್ತು. ಆತ ಎಡಪಂಥೀಯ. ಲೇಬರ್‍ಪಕ್ಷದ ವಿಶ್ವದ ಪಾರ್ಲಿಮೆಂಟ್ ಸದಸ್ಯ. ಭಾರತದ ಸ್ವಾತಂತ್ರ್ಯವೀರ ಭಗತ್‍ಸಿಂಗ್ ಪ್ರಕರಣದಲ್ಲಿ ತನಿಖಾ ಪ್ರಕ್ರಿಯೆ ಕುರಿತ ತಾಂತ್ರಿಕತೆ ಕುರಿತಂತೆ ಆತ ಪ್ರಿವಿಕೌನ್ಸಿಲ್‍ನಲ್ಲಿ ವಾದಿಸಿದವ. ಆಫ್ರಿಕಾದ ಜೋಮೊ ಕೆನ್ನಾಟಾನ ಮೌಮೌ ಕೇಸಿನಲ್ಲೂ ಈತನೇ ವಕೀಲ - ಇಂತಹ ಹತ್ತು ಹಲವು ಸಂಗ್ರಾಮಗಳ ವೀರ ಈ ಡಿ.ಎನ್.ಪ್ರಿಟ್ಟ್. ಲಕ್ಷ್ಮೀಕಾಂತಂ ಪ್ರಕರಣದಲ್ಲಿ ಆರೋಪಿಗಳ ಪರ ಮೇಲ್ಮನವಿ ಸಲ್ಲಿಸಿ ಪ್ರಿವಿ ಕೌನ್ಸಿಲ್‍ನಲ್ಲಿ ಹೋರಾಡಿದ. ತಪ್ಪು ತಪ್ಪೊಪ್ಪಿಗೆ, ಆರೋಪಿÀಗಳನ್ನು ಗುರುತು ಹಚ್ಚುವಲ್ಲಿನ ವೈಫಲ್ಯಗಳನ್ನೆಲ್ಲ ಪಟ್ಟಿಮಾಡಿ ಬಣ್ಣಿಸಿದಾಗ ಪ್ರಿವಿಕೌನ್ಸಿಲ್ ಅವನ ವಾದಕ್ಕೆ ತಲೆಬಾಗಿತು. ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠದ ತೀರ್ಪನ್ನು ಪ್ರಿವಿಕೌನ್ಸಿಲ್ ರದ್ದುಪಡಿಸಿತು. ಆದರೆ ಅದೇ ವಿಭಾಗೀಯಪೀಠ ಆರೋಪಿಗಳ ಅಪೀಲನ್ನು ಮರುಪರಿಶೀಲನೆ ಮಾಡಬೇಕು ಎಂದು ಆದೇಶಿಸಿ ಪ್ರಕರಣವನ್ನು ಮತ್ತೆ ಮದ್ರಾಸ್ ಹೈಕೋರ್ಟಿಗೆ ವಾಪಾಸು ಕಳುಹಿಸಿತು.

ಕುಗ್ಗಿಹೋದ ಭಾಗವತರ್
       ಅತ್ತ ತಮಿಳು ಚಿತ್ರರಂಗ ಪ್ರಗತಿಪಥದತ್ತ ದಾಪುಗಾಲು ಹಾಕುತ್ತಿದ್ದಂತೆಯೇ, ಇತ್ತ ಚಿತ್ರರಂಗದ ಆಧಾರಸ್ತಂಭಗಳೆನಿಸಿದ್ದ ವರನಟ ತ್ಯಾಗರಾಜಭಾಗವತರ್ ಮತ್ತು ಕಾಮಿಡಿಯೆನ್ ಎನ್.ಎಸ್.ಕೃಷ್ಣನ್ ಜೈಲಿನಲ್ಲಿ ಬುಕ್‍ಬೈಂಡಿಂಗ್ ಕೆಲಸ ಮಾಡುತ್ತಿದ್ದರು. ಭಾಗವತರ್ ಮನಸ್ಸು ಕುಗ್ಗಿಹೋಗಿತ್ತು. ಆತ ತೀರಾ ಖಿನ್ನನಾಗಿಬಿಟ್ಟಿದ್ದ. ತನ್ನ ಒಳ್ಳಯತನಕ್ಕೆ ತನಗೆ ಈ ಶಿಕ್ಷೆಯೇ? ಎಂದಾತ ನೊಂದಿದ್ದ. ತಾನು ಮಾಡದ ತಪ್ಪಿಗೆ ತನಗೇಕೆ ಈ ಕಷ್ಟ ಬಂತು? ಎಂದು ಪ್ರಶ್ನಿಶಿಸಿಕೊಳ್ಳುತ್ತಿದ್ದ. ಅದಕ್ಕೆ ಕಾರಣಗಳೂ ಇದ್ದುವು. ಈತ ಅಭಿನಯಿಸಿದ ‘ಹರಿದಾಸ’ ಚಿತ್ರ ಈತ ಜೈಲಿನಲ್ಲಿರುವಾಗಲೇ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿ ಬ್ರಾಡ್‍ವೇಯ ಸನ್ ಥಿಯೇಟರ್‍ನಲ್ಲಿ ಯಶಸ್ವಿಯಾಗಿ ಓಡುತ್ತಿತ್ತು. ಸತತ ಮೂರು ದೀಪಾವಳಿಗಳ ತನಕ ಓಡಿದ ತಮಿಳು ಚಿತ್ರ ಎಂದರೆ ಇದೇ. ಅದರ ಹಾಡುಗಳೆಲ್ಲಾ, ವಿಶೇಷತಃ, ‘ಮನ್ಮಥಲೀಲೈ’ ಜನರ ಬಾಯಲ್ಲಿ ಗುನುಗುತ್ತಿದ್ದುವು. ಎಂ.ಕೆ.ಟಿ. ಇನ್ನೆಂದೂ ಚಿತ್ರರಂಗಕ್ಕೆ ಬರಲಾರ ಎಂಬ ಭಾವನೆಯೇ ‘ಹರಿದಾಸ’ ಚಿತ್ರಕ್ಕೆ ಜನ ಮುಕುರುವಂತೆ ಮಾಡಿತ್ತು. ಬಂಧನದ ವೇಳೆ ‘ಶಿವಗಾಮಿ’ ಚಿತ್ರದ ಅರ್ಧ ಶೂಟಿಂಗ್ ಮುಗಿದಿತ್ತು. ಉಳಿದರ್ಧವನ್ನು ನಿರ್ಮಾಪಕರು ಬೇರೆ ನಟನÀನ್ನು ಬಳಸಿ ಪೂರ್ತಿಗೊಳಿಸಿದ್ದರು ! ಎಂ.ಕೆ.ಟಿ. ಚಿನಿವಾರ ಮನೆತನದಲ್ಲಿ ಹುಟ್ಟಿ ತಿರುಚಿರಪಳ್ಳಿಯಿಂದ ಬಂದ ನಾಟಕ ಕಲಾವಿದ. 13ರ ಬಾಲಕನಾಗಿದ್ದಾಗಲೇ ಶ್ರೀರಂಜಿನಿ ನಾಟಕ ಕಂಪೆನಿ ಸೇರಿದವ. ‘ಹರಿಶ್ಚಂದ್ರ’ ಅವನ ಮೊದಲ ನಾಟಕ - ಅದರಲ್ಲಿ ರೋಹಿತಾಶ್ವನ ಪಾತ್ರ ಮಾಡಿದವ. ಆಗೆಲ್ಲಾ ನಾಟಕರಂಗದಲ್ಲಿ ಯಶಸ್ಸುಗಳಿಸಬೇಕಾದರೆ ನಟನೇ, ಹಾಡುಗಾರನೂ ಆಗಿರಬೇಕಿತ್ತು. ಅದೂ ಗಟ್ಟಿಧ್ವನಿಯಲ್ಲಿ ಹಾಡಬೇಕು. ಮೈಕುಗಳಿಲ್ಲದ ಕಾಲ. ಹಾಗೆ ಹಾಡಿಯೇ ನಟಿಸಿ, ಜನಪ್ರಿಯನಾದವ ತ್ಯಾಗರಾಜಭಾಗವತರ್.  ಅವನ ‘ಚಿಂತಾಮಣಿ’ ನಾಟಕ ಸಿನೆಮಾ ಆಗಿ ಅದೆಷ್ಟು ಹಣ ಗಳಿಸಿತ್ತೆಂದರೆ ಅದೇ ಹಣದಿಂದ ‘ಚಿಂತಾಮಣಿ ಟಾಕೀಸ್’ ಸಹಾ ಕಟ್ಟಿಸಲಾಗಿತ್ತು. ಅವನ ಮೊದಲ ಚಿತ್ರ ‘ಪವಳಕ್ಕೊಡಿ’. ತಮಿಳು ಚಿತ್ರಂಗದಲ್ಲೇ ಆಗ ಅತೀ ಹೆಚ್ಚು ಸಂಭಾವನೆ ಪಡೆವ ಸುಪರ್‍ಸ್ಟಾರ್ ಆಗಿದ್ದವ. ಎರಡನೇ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ಸರಕಾರ ರೆಡ್‍ಕ್ರಾಸ್‍ಗಾಗಿ ಹಣ ಸಂಗ್ರಹಿಸಿ ಕೊಡಿ ಎಂದಾಗ ಅಪಾರ ಧನ ಸಂಗ್ರಹ ಮಾಡಿಕೊಟ್ಟವ ಭಾಗವತರ್. ಅದಕ್ಕೆ ಪ್ರತಿಯಾಗಿ ಸರಕಾರ ಯಾವ ಕಲಾವಿದರಿಗೂ ಆ ವರೆಗೆ ಕೊಟ್ಟಿರದ ‘ರಾವ್‍ಬಹದ್ದೂರ್’ (ನೈಟ್‍ಹುಡ್) ಪದವಿ ಕೊಡಬಂದಾಗ ನಿರಾಕರಿಸಿದವನೀತ. ನಂತರ ತಿರುವರಂಬೂರ್ ಗ್ರಾಮವನ್ನೇ ನೀಡಲು ಬಂದರೂ ತಿರಸ್ಕರಿಸಿದ ಮಹಾನುಭಾವ. ಅಂತಹ ತನಗೆ ಈ ದುರ್ಗತಿಯೇ ಎಂದು ಮರುಗುತ್ತಿದ್ದ ಎಂ.ಕೆ.ಟಿ.

ಕುಗ್ಗದ ಕೃಷ್ಣನ್
         ಆದರೆ ಎನ್.ಎಸ್.ಕೃಷ್ಣನ್ ಹಾಗಲ್ಲ. ಆತ ಜೈಲುವಾಸದಿಂದಾಗಿ ತಲೆ ಕೆಡಿಸಿಕೊಳ್ಳಲೇ ಇಲ್ಲ, ಎದೆಗುಂದಲೇ ಇಲ್ಲ. ಮುಂಚಿನಂತೆ ಉಲ್ಲಸಿತನಾಗಿಯೇ ಜೈಲಿನಲ್ಲಿಯೂ ಇದ್ದುಬಿಟ್ಟಿದ್ದ. ಅಲ್ಲಿಯೂ ತನ್ನ ಹಾಸ್ಯದಿಂದ ಎಲ್ಲರನ್ನೂ ನಗಿಸುತ್ತಿದ್ದ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದ್ದಾಗಲೂ ವಕೀಲರುಗಳನ್ನು, ಸಾಕ್ಷಿಗಾರರನ್ನು, ಜಡ್ಜ್‍ಗಳನ್ನು ‘ಅಣಕ’ ಮಾಡುತ್ತಾ ರಂಜಿಸುತ್ತಿದ್ದವ. ತನ್ನ ಸ್ವಂತ ವಕೀಲ ಕೆ.ಎಂ.ಮುನ್ಶಿಯನ್ನೂ ಬಿಡದೇ ಅಣಕ ಮಾಡುತ್ತಿದ್ದ. ಅವನ ಹಾಸ್ಯದಿಂದ ಮುನ್ಶಿ ಕೂಡಾ ಹೊಟ್ಟೆ ತುಂಬಾ ನಕ್ಕುಬಿಟ್ಟಿದ್ದರು. ನಾಗರಕೊಯಿಲ್ ಸುದಲೈ ಮುತ್ತುಕೃಷ್ಣನ್ ನಾಟಕ ಕಲಾವಿದ, ಹಿನ್ನೆಲೆ ಹಾಡುಗಾರ, ಲೇಖಕ, ಕಲಾವಿದ - ಹೀಗೆ ಬಹುಮುಖ ಪ್ರತಿಭೆಯವ. ನಾಗರಕೊಯಿಲ್‍ನ ಒಳಂಗಿನಚೆರ್ರಿಯಲ್ಲಿ ಜನಿಸಿದವ. ‘ವಿಲ್ಲುಪಾಟ್ಟು’ ಕಲಾವಿದನಾಗಿ ವೃತ್ತಿಜೀವನ ಆರಂಭಿಸಿದವ. ಅಂದರೆ ಬಿಲ್ಲಿನಂತಹ ಸಂಗೀತದ ಉಪಕರಣ ಹಿಡಿದುಕೊಂಡು ಬಾರಿಸುತ್ತಾ ಹಾಡಿನ ಮೂಲಕ ಕಥೆ ಹೇಳಿ ರಂಜಿಸುವವ. ಸ್ವಂತ ನಾಟಕ ಕಂಪೆನಿ ಹೊಂದಿದ್ದ. ಸಿನೆಮಾಗಳಲ್ಲಿ ತನ್ನ ಹಾಸ್ಯ ಡಯಲಾಗ್ ತಾನೇ ಬರೆಯುತ್ತಿದ್ದವ. 150 ಸಿನೆಮಾಗಳಲ್ಲಿ ನಟಿಸಿದ ಆತ ಗಾಂಧೀವಾದಿ, ದೇಶಭಕ್ತ, ದಾನಿ. ಹೆಂಡತಿ ಟಿ.ಎ.ಮಧುರಂ ಸಹಾ ನಾಟಕರಂಗದಿಂದ ಬಂದ ಹಾಸ್ಯ ನಟಿ. ಆಕೆ ಧೀರೆ. ಕೃಷ್ಣನ್ ಬಿಡುಗಡೆಗಾಗಿ ಶತಪ್ರಯತ್ನ ನಡೆಸಿದವಳು. ಪ್ರಿವಿ ಕೌನ್ಸಿಲ್ ತನಕವೂ ಕಾನೂನು ಹೋರಾಟ ನಡೆಸಲು ತಮ್ಮ ಆಸ್ತಿಯನ್ನೇ ಮಾರಿ ಹಣವೆಚ್ಚ ಮಾಡಿದವಳು. ಕೈ ಬರಿದಾಗಿದ್ದರೂ, ಕೇಸು ಗೆಲ್ಲುವ ಗುರಿ ಇರಿಸಿಕೊಂಡಿದ್ದ ಆದರ್ಶ ಪತ್ನಿ.

ಅಂತೂ ಬಂತು ಸ್ವಾತಂತ್ರ್ಯ
     ಪ್ರಿವಿಕೌನ್ಸಿಲ್ ತೀರ್ಪು ಆರೋಪಿಗಳಲ್ಲಿ ಆಶಾಕಿರಣ ಮೂಡಿಸಿತ್ತು. ಪ್ರಕರಣ ಮತ್ತೆ ಮದ್ರಾಸ್ ಹೈಕೋರ್ಟಿನ ವಿಭಾಗೀಯಪೀಠದ ಮುಂದೆ ಬಂತು. ಆಗ ನ್ಯಾಯಮೂರ್ತಿಗಳಾಗಿದ್ದವರು ಜಸ್ಟೀಸ್ ಹಪ್ಪೇಲ್ ಮತ್ತು ಜಸ್ಟೀಸ್ ಶಹಾಬುದ್ದೀನ್ (ಇವರು ನಂತರ ಪಾಕಿಸ್ತಾನಕ್ಕೆ ವಲಸೆಹೋಗಿ ಅಲ್ಲಿನ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾದರು) ಈ ಸಲ ಎಂ.ಕೆ.ಟಿ. ಮತ್ತು ಎನ್.ಎಸ್.ಕೆ. ಹಿಡಿದುಕೊಂಡದ್ದು ಯಶಸ್ವೀ ಬ್ಯಾರಿಸ್ಟರ್ ಎನ್ನಿಸಿದ ವಿ.ಎಲ್.ಯತಿರಾಜ್‍ನನ್ನು. ವೃತ್ತಿಯಲ್ಲಿ ಕೌಶಲತೆಯಿಂದ ಗೆಲುವನ್ನೇ ಕಾಣುತ್ತಿದ್ದ ಯತಿರಾಜನ್ ಹೆಸರಲ್ಲಿದ್ದ ‘ವಿ.ಎಲ್.’ ಅಂದರೆ ‘ವೆರಿ ಲಕ್ಕಿ’ ಎನ್ನುತ್ತಿದ್ದರು ಸಹೋದ್ಯೋಗಿ ವಕೀಲರು. ಪ್ರಕರಣ ತನಿಖೆಗೆ ಬಂದಾಗ ಯತಿರಾಜ್ ಗುಡುಗಿಬಿಟ್ಟರು. ರಾಮಣ್ಣ ಬರೆದದ್ದೆಂಬ ಪತ್ರವನ್ನು ಅಪಹಾಸ್ಯ ಮಾಡಿ ‘ಯಾವನೇ ಬುದ್ಧಿ ಇರುವ ಮನುಷ್ಯ ಕೊಲೆ ಮಾಡಿದ ಕೆಲವೇ ಗಂಟೆಗಳಲ್ಲೇ ಸ್ನೇಹಿತನ ಬಳಿ ಓಡಿ ಬಂದು ತಾನು ಕೊಲೆ ಮಾಡಿದ್ದೇನೆ ಎಂದು ಹೇಳಿಯಾನೇ? ಇದನ್ನು ನಂಬಲಾದೀತೇ?’ ಎಂದು ಕೇಳಿದಾಗ ಜಡ್ಜಿಗಳು ತಲೆದೂಗಿದರು. ರಾಮಣ್ಣನ ಪತ್ರದಲ್ಲಿ ಕೊಲೆಗಾರನ ಹೆಸರನ್ನು ಖಾಲಿಬಿಟ್ಟದ್ದೇಕೆ? ಬೇಕಾದಾಗ ಬೇಕಾದವರ ಹೆಸರು ಬರೆಯಲೆಂದೇ? ಎಂದಾತ ಸಂಶಯಗಳ ಸುರುಳಿಯನ್ನೇ ಬಿಚ್ಚಿಬಿಟ್ಟ. ಈ ಜಯಾನಂದಂ ಮಹಾ ಫಟಿಂಗ. ಕ್ಷಣಕ್ಕೊಮ್ಮೆ ಒಂದೊಂದು ರೀತಿಯ ಹೇಳಿಕೆ ನೀಡುವವ ಆತ. ನಂಬಿಕೆಗೆ ಅರ್ಹನೇ ಅಲ್ಲ. ಅಂತಹವನ ಹೇಳಿಕೆ ಹಿಡಕೊಂಡು ಮರ್ಯಾದಸ್ಥರನ್ನು ಬಂಧಿಸುವುದೇ? ಇವೆಲ್ಲಾ ನಿಜವಾದ ಹಂತಕರನ್ನು ಹಿಡಿಯಲಾಗದ ಪೋಲೀಸರು ಮೇಲಧಿಕಾರಿಗಳ ಭತ್ರ್ಸನೆಯಿಂದ ಪಾರಾಗಲು ಹೆಣೆದ ಕಟ್ಟುಕತೆ ಎಂದಾತ ಹೈಕೋರ್ಟಿಗೆ ಮನವರಿಕೆ ಮಾಡಿಬಿಟ್ಟ. ಈ ಸಾಕ್ಷಿಗಾರರೆಲ್ಲಾ ಪೋಲೀಸರಿಂದ ತರಬೆÉೀತಾದವರು. ಜ್ಯೂರಿಗಳಿಗೆ ನ್ಯಾಯಾಧೀಶರು ಸರಿಯಾದ ಮಾರ್ಗದರ್ಶನ ನೀಡದ ಕಾರಣ ನ್ಯಾಯ ಅನ್ಯಾಯವಾಗಿದೆ ಎಂದು ಯತಿರಾಜ್ ವಾದಿಸಿದಾಗ ಅದಕ್ಕೆ ಒಪ್ಪದೇ ಇರಲು ಹೈಕೋರ್ಟಿಗೆ ಸಾಧ್ಯವಾಗಲಿಲ್ಲ. 1947ರ ಭಾರತ ಸ್ವಾತಂತ್ರ್ಯ ಗಳಿಸುವ ಕೆಲವೇ ತಿಂಗಳ ಮುಂಚೆ ಹೈಕೋರ್ಟು ತನ್ನ ತೀರ್ಪು ಪ್ರಕಟಿಸಿತು. ಕೊಲೆ, ಪಿತೂರಿ ಆರೋಪಗಳಿಂದ ಅರೋಪಿಗಳನ್ನು ಮುಕ್ತಗೊಳಿಸಿತು. ಅವರು ನಿರ್ದೋಷಿಗಳೆಂದು ಘೋಷಿಸಿ ಅವರ ಬಿಡುಗಡೆಗೆ ಆದೇಶ ಮಾಡಿತು. ಆರೋಪಿಗಳ ಮುಖಗಳಲ್ಲಿ ಹರ್ಷದ ಹೊನಲು ಹರಿಯಿತು. ಅಷ್ಟರಲ್ಲಾಗಲೇ 30 ತಿಂಗಳ ಕಾಲ ಈ ಮಂದಿ ಜೈಲಿನಲ್ಲಿ ಕಳೆದಿದ್ದರು. ಇದೀಗ ಸ್ವಾತಂತ್ರ್ಯ ಪಡೆದು ಹೊರಬರುವಂತಾಯಿತು. ಸಂತಸದ ಭರದಲ್ಲಿ ತ್ಯಾಗರಾಜ ಭಾಗವತರ್ ತನ್ನಲ್ಲಿ ಉಳಿದಿದ್ದ ಒಂದೇ ಒಂದು ಬಂಗಾರದ ಬಟ್ಟಲನ್ನು ಬ್ಯಾರಿಸ್ಟರ್ ಯತಿರಾಜ್‍ಗೆ ಉಡುಗೊರೆಯಾಗಿ ನೀಡಿದ. ಅದರಲ್ಲೇ ದಿನ ಊಟ ಮಾಡಬೇಕೆಂದು ಬಿನ್ನವಿಸಿದ. ಯತಿರಾಜ್ ಕೂಡ ಅದನ್ನೊಪ್ಪಿ ಸಾಯುವ ತನಕವೂ ಬಂಗಾರದ ಬಟ್ಟಲಲ್ಲೇ ಊಟ ಮಾಡಿದರು.

ಉಪೋದ್ಘಾತ - ಬಿಡುಗಡೆಯ ನಂತರದ ಕಥೆ
       ಆದರೆ ಜಯಾನಂದಂ ಕಥೆ ಬೇರೆಯೇ. ಆತ ಮೇಲಿಂದ ಮೇಲೆ ನ್ಯಾಯಾಲಯವನ್ನು ತಪ್ಪುದಾರಿಗೆಳೆಯುತ್ತಾ, ಸುಳ್ಳು ಹೇಳುತ್ತಾ ಬಂದದ್ದಕ್ಕೆ ಆತನಿಗೆ ಕೆಲಕಾಲ ಜೈಲುಶಿಕ್ಷೆಯಾಯಿತು. ಅದನ್ನು ಮುಗಿಸಿ ಹೊರಬಂದ ಜಯಾನಂದಂ ಆತ್ಮಹತ್ಯೆ ಮಾಡಿಕೊಂಡ. ವಡಿವೇಲು ತಾನು ಮಾಡದ ತಪ್ಪಿಗೆ ತನಗೊದಗಿದ ಹಿಂಸೆಯಿಂದಾಗಿ ತೀವ್ರ ಆಘಾತಕ್ಕೊಳಗಾಗಿದ್ದ. ಬಿಡುಗೆಯ ನಂತರವೂ ಅದೇ ಅದೇ ಚಿಂತೆಯಲ್ಲಿ ನರಳಿ ನರಳಿ ಸತ್ತ. ನಾಗಲಿಂಗಂ ಬಿಡುಗಡೆಯ ಬಳಿಕ ಹೆಚ್ಚುಕಾಲ ಬದುಕಲಿಲ್ಲ. ಅವಮಾನ ತಡೆಯಲಾರದೇ ಆತ ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ. ರಾಜಬತ್ತಾರ್ ಮಾತ್ರ ಮುಂಚಿನಂತೆ ಪುರುಸವಾಕಂ ಮಾರ್ಕೆಟ್‍ನಲ್ಲಿ ಕಷ್ಟದಲ್ಲೂ ಮಾಂಸ ಮಾರಾಟ ಮಾಡುತ್ತಾ ಜೀವಿಸುತ್ತಿದ್ದ. ಚಲನಚಿತ್ರ ಇತಿಹಾಸಕಾರ ರ್ಯಾಂಡರ್‍ಗೈ ಇವನನ್ನು ಮಾತಾಡಿಸಲು ಹೋದರೆ ಆತ ಸಿಕ್ಕುತ್ತಲೇ ಇರಲಿಲ್ಲ - ಎಲ್ಲಿ ತನ್ನನ್ನು ಸಿಕ್ಕಿಸಿ ಹಾಕಿ ಜೈಲಿಗೆ ಕಳುಹಿಸುವರೋ ಎಂಬ ಭಯ ಅವನಿಗೆ. ಆರ್ಯವೀರ ಸೇನನ್ ಮಾತ್ರ ಏನೂ ಆಗದವನಂತೆ ಗಟ್ಟಿಮುಟ್ಟಾಗಿ ಉಳಿದು, ಬಾಳಿದ.

ಕೃಷ್ಣನ್‍ಗೆ ಹೊಸ ಹೆಂಡತಿ
       ಬಂಧ ಮುಕ್ತನಾದ ಎನ್.ಎಸ್.ಕೃಷ್ಣನ್ ಮತ್ತೆ ಚಿತ್ರರಂಗಕ್ಕೆ ಮರಳಿದ. ಬಿಡುಗಡೆಯ ನಂತರ ಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿದ. ಪಣಂ, ಮನಮಗಳ್, ಪೆಲ್ಲಿಕುತ್ತೂರು ಚಿತ್ರಗಳನ್ನು ನಿರ್ದೇಶಿಸಿದ. ಪತ್ನಿ ಮಧುರಂ ಜತೆ ಹಾಸ್ಯದಿಂದ ಜನರನ್ನು ರಂಜಿಸಿದ. 1948ರಲ್ಲಿ ಈ ದಂಪತಿಗೊಂದು ಹೆಣ್ಣು ಮಗು ಜನಿಸಿತು. ಅದಕ್ಕೆ ಕಲೈಸೆಲ್ವಿ ಎಂದು ಹೆಸರಿಟ್ಟ. ಆದರೆ ಅದು ಕೆಲವೇ ತಿಂಗಳಲ್ಲಿ ಕಣ್ಮುಚ್ಚಿತ್ತು. ಇನ್ನು ತನಗೆ ಮಕ್ಕಳಾಗದು ಎಂದರಿತ ಮಧುರಂ ತನ್ನ ತಂಗಿ ವೆಂಬುವನ್ನು ತನ್ನ ಗಂಡನಿಗೆ ಮದುವೆ ಮಾಡಿಸಿದಳು. ಅವಳ ಮಕ್ಕಳನ್ನೇ ಪ್ರೀತಿಯಿಂದ ತನ್ನ ಮಕ್ಕಳಂತೆ ಬೆಳೆಸಿದಳು. ವಾಸನ್ ಕೊಟ್ಟ ರೂ.25,000/- ಒಂದು ದಿನ ಕೃಷ್ಣನ್ ಆತನ ಮನೆಗೆ ಹೋಗಿ ಕೃತಜ್ಞತೆಯಿಂದ ಹಿಂದಿರುಗಿಸಿದ. ಆದರೆ ಮನೆಯ ಒಳಕ್ಕೆ ಹೋಗಿ ಬಂದ ವಾಸನ್ ರೂ.50,000/- ತಂದು ಕೃಷ್ಣನ್ ಕೈಯಲಿಟ್ಟ. ಚಕಿತನಾದ ಕೃಷ್ಣನ್ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದಂತೆಯೇ ವಾಸನ್ ಹೇಳಿದ, ‘ನೀನು ಜೈಲಿನಲ್ಲಿರುವಾಗ ನಾನು ನಿನ್ನದೇ ಕಥೆ ಉಪಯೋಗಿಸಿ ಒಂದು ಸಿನೆಮಾ ಮಾಡಿದ್ದೆ. ಅದರಿಂದ ಒಳ್ಳೆ ದುಡ್ಡು ಬಂದಿತ್ತು. ನಿನಗೆ ಸಲ್ಲಬೇಕಾದ ಸಂಭಾವನೆ ಕೊಡಲು ಬಾಕಿ ಇತ್ತು ತೆಗೆದುಕೊ’ ಎಂದ. ಕೃತಿಚೌರ್ಯ ಮಾಡಿ ಲೇಖಕರಿಗೆ ಸಂಭಾವನೆ ಕೊಡದೆ ವಂಚಿಸುವ ಈ ಕಾಲದಲ್ಲಿ ಇಂತಹ ಕಥೆಗಳು ಅಪರೂಪ. ತನ್ನ ಕೊನೆಯ ಚಿತ್ರ ‘ಅಂಬಿಕಾಪತಿ’ ಪೂರ್ತಿಯಾಗುವ ಮುನ್ನವೇ ಕೃಷ್ಣನ್ 49ನೇ ವಯಸ್ಸಿಗೆ 1957 ಆಗಸ್ಟ್ 30ರಂದು ಕಾಲವಶನಾದ. ಪತ್ನಿ ಮಧುರಂ 1974 ಮೇ 23ರಂದು ಕೊನೆಯುಸಿರೆಳೆದಳು. ಕೃಷ್ಣನ್ ನಟಿಸಿದ್ದ ‘ರಾಜಾದೇಸಿಂಗು’, ‘ತೋಳನ್’ ಚಿತ್ರಗಳು ಅವನ ಮರಣೋತ್ತರ ಬಿಡುಗಡೆಗೊಂಡುವು. ಕೃಷ್ಣನ್ ತಮಿಳು ಚಿತ್ರಂಗದ ಕಾಮಿಡಿಯನ್ ಕಿಂಗ್ ಆಗಿ ಅಮರನಾದ. ‘ನಿಮ್ಮ ಮೇಲೆ ಪ್ರಭಾವ ಬೀರಿದ ರಾಜಕೀಯೇತರ ಹೀರೋ ಯಾರು?’ ಎಂದು ಎಂ.ಕರುಣಾನಿಧಿಯವರನ್ನು ಕುಮುದಂ ಪತ್ರಿಕೆ ಕೇಳಿದಾಗ ಆತ ಅಂದದ್ದು, ‘ಕಲೈವನಾರ್ ಎನ್.ಎಸ್.ಕೃಷ್ಣನ್’ ಎಂದು. ತಮಿಳುನಾಡು ಸರಕಾರ 1979ರಲ್ಲಿ ಚೆನ್ನೈಯಲ್ಲಿ ಕೃಷ್ಣನ್ ಸ್ಮಾರಕವಾಗಿ ‘ಕಲೈವನಾರ್ ಕಲೈಅರಂಗಂ’ (ಕಲೈವನಾರ್ ಕಲಾಕೇಂದ್ರ) ಸ್ಥಾಪಿಸಿ ಕಲಾಚಟುವಟಿಕೆಗಳಿಗೆ ಶಾಶ್ವತ ನೆಲೆ ನಿರ್ಮಿಸಿ ಈ ಅಪರೂಪದ ಕಲಾವಿದನಿಗೆ ಗೌರವ ಸಲ್ಲಿಸಿತು.

ಅಂತರ್ಮುಖಿ ಎಂ.ಕೆ.ಟಿ.
      ಜೈಲಿನಿಂದ ಬಿಡುಗಡೆಯಾದ ಕೂಡಲೇ ಎಂ.ಕೆ.ತ್ಯಾಗರಾಜ ಭಾಗವತರ್ ಹೋಗಿದ್ದು ವಡಪಳನಿಯ ದೇವಾಲಯಕ್ಕೆ. ಅಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದ. ತೀರಾ ದೈವಭಕ್ತ ಆತ. ಎನ್.ಎಸ್.ಕೆ.ಗೆ ತದ್ವಿರುದ್ಧ ಎನ್.ಎಸ್.ಕೆ.ವಿಚಾರವಾದಿಯಾಗಿ ದ್ರಾವಿಡಕಳಗಂ ಸೇರಿದರೆ, ತ್ಯಾಗರಾಜ ಭಾಗವತರ್ ಅದಕ್ಕೆ ವಿಮುಖ. ಅವನಿಗೆ ನಾಸ್ತಿಕತೆ ಹಿಡಿಸುತ್ತಲೇ ಇರಲಿಲ್ಲ. ದೇವರು ಮತ್ತು ಸಂಗೀತ ಅವನ ಸರ್ವಸ್ವ. 30 ತಿಂಗಳ ಕಾಲ ಕಳೆದ ಜೈಲುವಾಸ ತ್ಯಾಗರಾಜ ಭಾಗವತರ್ ಬದುಕನ್ನೇ ಬದಲಿಸಿತ್ತು. ಆತ ಜೈಲಿನಿಂದ ಹೊರಬರುವಾಗ ತೀರಾ ವಿಭಿನ್ನ ವ್ಯಕ್ತಿಯಾಗಿದ್ದ. ಅವನಿಗೆ ಧನ-ಕನಕಗಳ ಮೇಲೆ ಮೋಹವೇ ಹೊರಟುಹೋಗಿತ್ತು. ತೀರಾ ಜನಪ್ರಿಯತೆ ಎಂಬುದು ಎಂತಹ ಅಪಾಯಕಾರಿ ವಸ್ತು ಎಂಬುದನ್ನು ಆತ ಅರಿತುಕೊಂಡಿದ್ದ. ಜೈಲಿನಲ್ಲಿ ಖಿನ್ನನಾಗಿದ್ದ ಆತ ಈಗ ಅಂತರ್ಮುಖಿಯಾಗಿದ್ದ. ಅಧ್ಯಾತ್ಮದತ್ತ ವಾಲಿದ್ದ. ಮುಂಚಿನ ಆತ್ಮವಿಶ್ವಾಸ, ನೆಮ್ಮದಿ ಎಲ್ಲವನ್ನೂ ಸೆರೆಮನೆವಾಸ ಕೆಡಿಸಿಬಿಟ್ಟಿತ್ತು.

ತತ್ವ - ಸಿದ್ಧಾಂತಕ್ಕೆ ಬದ್ಧ 
    ತ್ಯಾಗರಾಜ ಭಾಗವತರ್ ತನ್ನ ಹುಟ್ಟೂರಾದ ತಿರುಚಿರಪಳ್ಳಿಗೆ ಬಂದಾಗ ಆತನಿಗೆ ಪ್ರಚಂಡ ಸ್ವಾಗತ ನೀಡಿ ಬರಮಾಡಿಕೊಂಡರು ಜನ. ಚಿತ್ರ ನಿರ್ಮಾಪಕರು ಆತ ಕೇಳಿದಷ್ಟು ಹಣ ಕೊಟ್ಟು ಚಿತ್ರಗಳಿಗೆ ಸಹಿ ಹಾಕಿಕೊಳ್ಳಲು ಕ್ಯೂನಲ್ಲಿ ನಿಂತಿದ್ದರು. ಆದರೆ ಎಂ.ಕೆ.ಟಿ. ಅವನ್ನೆಲ್ಲಾ ನಿರಾಕರಿಸಿಬಿಟ್ಟ. ಚಿತ್ರರಂಗ ಬಿಟ್ಟು ಶಾಸ್ತ್ರೀಯಸಂಗೀತದಲ್ಲಿ ತೊಡಗಿರಬೇಕು ಎಂಬುದು ಒಂದು ಕಾರಣವಾದರೆ, ಈ ನಿರ್ಮಾಪಕರು ತಾನು ಜೈಲಿನಲ್ಲಿದ್ದಾಗ ತೋರಿದ ವರ್ತನೆ ಅವನಿಗೆ ಜಿಗುಪ್ಸೆ ತರಿಸಿತ್ತು. ಭ್ರಮನಿರಸನವಾಗಿತ್ತು. ಇನ್ನು ಈತ ಜೈಲಿನಿಂದ ಹೊರಬರುವುದೇ ಇಲ್ಲ ಎಂದೇ ಅವರೆಲ್ಲಾ ತೀರ್ಮಾನಿಸಿಕೊಂಡು ಆತನನ್ನು ಕೈಬಿಟ್ಟದ್ದು ಅವನಿಗೆ ನೋವು ತರಿಸಿತ್ತು.   ಪ್ರತಿಯಾಗಿ ಎಂ.ಕೆ.ಟಿ. ತನ್ನದೇ ‘ರಾಜಮುಕ್ತಿ’ ಚಿತ್ರ ನಿರ್ಮಿಸಿದ. ‘ಪುದುವಾಳ್ಪು’ ಹೊರತಂದ. ಅಮರಕವಿ, ಶ್ಯಾಮಲಾ, ಶಿವಕಾಮಿಗಳಲ್ಲಿ ಪಾತ್ರವಹಿಸಿದ. ಆದರೆ ಅಷ್ಟರಲ್ಲಿ ತಮಿಳು ಚಿತ್ರರಂಗ ಸಾಕಷ್ಟು ಸ್ಥಿತ್ಯಂತರ ಕಂಡಿತ್ತು. ಪೌರಾಣಿಕ, ಐತಿಹಾಸಿಕ ಚಿತ್ರಗಳು ಸಾಕಾಗಿ ಇದೀಗ ಸಾಮಾಜಿಕ ವಸ್ತುವುಳ್ಳ ಚಿತ್ರಗಳು ಬರತೊಡಗಿದ್ದುವು. ಅದಕ್ಕೆ ಹೊಂದಿಕೊಳ್ಳಲು ಭಾಗವತರ್‍ಗೆ ಕಷ್ಟವಾಗಿತ್ತು. ಹಾಡುಗಳು ಯಶಸ್ವಿಯಾದರೂ ಅವನ ಚಿತ್ರಗಳು ಅಷ್ಟು ಯಶಸ್ವಿಯಾಗಲಿಲ್ಲ. ಆದರೆ ಎಂ.ಕೆ.ಟಿ. ತನ್ನ ತತ್ವ, ಸಿದ್ಧಾಂತ ಬಿಟ್ಟು ರಾಜಿಮಾಡಿಕೊಳ್ಳಲಿಲ್ಲ. ‘ಸೊರ್ಗವಾಸಿ’ ಎಂಬ ನಾಸ್ತಿಕವಾದದ ಚಿತ್ರದಲ್ಲಿ ನಟಿಸಲು ಕರೆ ಬಂದಾಗ, ಕೈಯಲ್ಲಿ ಕಾಸಿಲ್ಲದಿದ್ದರೂ, ಒಂದು ಲಕ್ಷ ರೂಪಾಯಿ ಸಂಭಾವನೆ ಕೊಡಮಾಡಿದ್ದರೂ, ನಿರಾಕರಿಸಿದ. ಆತನಿಗೆ ರಾಜಾಜಿ, ಕಾಮರಾಜ್, ಅಣ್ಣಾದುರೈ, ಚಿನ್ನಅಣ್ಣಾಮಲೈ ಮತ್ತಿತರ ರಾಜಕೀಯ ಘಟಾನುಘಟಿಗಳ ಸ್ನೇಹವಿತ್ತು. ಕಾಂಗ್ರೆಸ್ ಟಿಕೇಟು ನೀಡಲು ಕಾಮರಾಜ್ ಮುಂದೆ ಬಂದರೂ, ಚುನಾವಣೆಯಲ್ಲಿ ಸ್ಪರ್ಧಿಸಲು ಆತ ಒಪ್ಪಲಿಲ್ಲ. ಶಿವಾಜಿ ಗಣೇಶನ್ ಅಭಿನಯದ ‘ಅಂಬಿಕಾಪತಿ’ ಚಿತ್ರದಲ್ಲಿ ಕಂಬಾರ ಪಾತ್ರ ವಹಿಸಿದರೆ, ಶಿವಾಜಿಗಿಂತ ಹತ್ತು ಸಾವಿರ ಜಾಸ್ತಿ ಸಂಭಾವನೆ ಎಂದರೂ ತಿರಸ್ಕರಿಸಿದ. ಕಾರಣ, ಈತನ ‘ಅಂಬಿಕಾಪತಿ’ ಮುಂಚೆ ದಿಗ್ವಿಜಯಗಳಿಸಿತ್ತು. ಶಿವಾಜಿಯ ‘ಅಂಬಿಕಾಪತಿ’ ನೆಲಕಚ್ಚಿತ್ತು. ‘ಅಂಬಿಕಾಪತಿ’ ಪಾತ್ರ ಎಂ.ಕೆ.ಟಿ.ಗೇ ಮೀಸಲು ಎಂದರು ಜನ.

ಸೇವಾ ಮನೋಭಾವ
      ಟಿ.ಆರ್.ಮಹಾಲಿಂಗಂ ತನ್ನ ಮಗನ ‘ಸುಕುಮಾರ ಭವನ’ ಉದ್ಘಾಟನೆಯಂದು ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿದ ಎಂ.ಕೆ.ಟಿ.ಕೆ.ಗೆ ಬೆಳ್ಳಿಯ ಹರಿವಾಣ, ಒಂದು ಸಾವಿರ ರೂಪಾಯಿ ಸಂಭಾವನೆ ನೀಡಿದರೆ, ಒಲ್ಲೆ ಎಂದ ಆತ ಅದರಮೇಲೊಂದು ರೂಪಾಯಿ ಹಾಕಿ ಆಶೀರ್ವಾದ ಸಹಿತ ಸುಕುಮಾರನಿಗೇ ಕೊಟ್ಟುಬಿಟ್ಟ. ಮಹಾಲಿಂಗಂಗೆ ಒಂದು ಚಿನ್ನದ ಪೆನ್ನು ನೀಡಿದ್ದ. ಶಾಲಾ ಸಹಾಯಾರ್ಥ ಕಛೇರಿ ನಂತರ ಸಂಭಾವನೆ ನೀಡಿದರೆ ಬೇಡ ಎಂದ. ಭಾರೀ ಸಭಾಂಗಣಗಳಲ್ಲಿ ಆತ ಕಚೇರಿ ನೀಡುತ್ತಿರಲಿಲ್ಲ. ಆದರೆ ದೇವಾಲಯ, ಶಾಲೆಗಳಲ್ಲಿ ನೀಡುತ್ತಿದ್ದ. ಸಂಭಾವನೆ ಬೇಡ ಎಂದ. ಆತನಿಗೆ ದಾರಿದ್ರ್ಯ ಕಾಡಿತ್ತೇ? ಇಲ್ಲವೇ ಇಲ್ಲ. ಕಾರಣ, ಆತನ ಅತ್ಯಂತ ಉತ್ಕಟ ಅಭಿಮಾನಿಯಾಗಿದ್ದ ಚೊಕ್ಕಾಲಾಲ್ ಬೀಡಿ ಮಾಲಿಕ ಹರಿರಾಮ್ ಸೇಠ್ ಎಂ.ಕೆ.ಟಿ.ಗೆ ಏನೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದ.

ಎಂ.ಕೆ.ಟಿ.ಕೊನೆಯ ದಿನಗಳು
    ದಿನಕಳೆದಂತೆ ಎಂ.ಕೆ.ಟಿ.ಗೆ ತೀರ್ಥಯಾತ್ರೆ ಮಾಡುವ ಹಂಬಲ ಬೆಳೆಯಿತು. ತೀರ್ಥಕ್ಷೇತ್ರ, ದೇಗುಲಗಳನ್ನು ಸಂದರ್ಶಿಸುತ್ತಲೇ ಹೋದ. ಹೋದಲ್ಲೆಲ್ಲಾ ದೇವರನ್ನು ಸ್ತುತಿಸಿ ಹಾಡಿದ. ದಿನಾ ಗೋಪೂಜೆ ಮಾಡುತ್ತಿದ್ದ. ಕಣ್ಣಿನ ದೃಷ್ಠಿಗೆ ತೊಂದರೆ ಬಂದಾಗಲೂ ಚಿಕಿತ್ಸೆ ನಡೆಸದೇ ದೇವರನ್ನೇ ಪ್ರಾರ್ಥಿಸುತ್ತಿದ್ದ. ತೀರ್ಥಕ್ಷೇತ್ರ ಒಂದರಲ್ಲಿ ಈತನನ್ನು ನೋಡಿದ ಕಲಾರಾಧಕರೊಬ್ಬರು ಜೀವನಮಾನದ ಸಾಧನೆಗಾಗಿ ‘ಸ್ವರ್ಣಾಭಿಷೇಕ’ ಮಾಡುವೆ ಎಂದಾಗ ಬೇಡ ಎಂದ ಎಂ.ಕೆ.ಟಿ. ಆತನನ್ನು ಮದುಮೇಹ ಕಾಡುತ್ತಿತ್ತು. ರಕ್ತದೊತ್ತಡದ ತೊಂದರೆ ಹೆಚ್ಚಾಗಿತ್ತು. ತಾನೇ ಇನ್ಸುಲಿನ್ ಚುಚ್ಚಿಕೊಳ್ಳುತ್ತಿದ್ದ. ಕೊನೆಗಾಲದ 10 ದಿನಗಳ ಮೊದಲು ಪೊಲ್ಲಾಚಿ ಎಂಬಲ್ಲಿ ಒಂದು ಅಮೋಘ ಕಛೇರಿ ನೀಡಿದ. ಆಗ ಅಭಿಮಾನಿಯೊಬ್ಬ ಮಧುಮೇಹಕ್ಕೆಂದು ಆರ್ಯುವೇದ ಟಾನಿಕ್ ಕೊಟ್ಟ. ಅದು ಕಾಯಿಲೆಯನ್ನು ಗುಣಪಡಿಸುವ ಬದಲು ಉಲ್ಬಣಗೊಳಿಸಿಬಿಟ್ಟಿತ್ತು. ಮದ್ರಾಸಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಲು ಹೊರಟ ಎಂ.ಕೆ.ಟಿ. ಆದರೆ ಪೊಲ್ಲಾಚಿ ರೈಲ್ವೆ ನಿಲ್ದಾಣಕ್ಕೆ ಬಂದಾಗ ಒಂದು ವಿಲಕ್ಷಣ ವಿದ್ಯಮಾನ ಘಟಿಸಿತು. ಆತ ಬರುತ್ತಲೇ ವಿದ್ಯುತ್ ಸಂಪರ್ಕ ಕಡಿದುಹೋಗಿ ಬೆಳಕು ಮಾಯವಾಗಿ ಕಗ್ಗತ್ತಲು ಕವಿಯಿತು. ಇದು ಅಪಶಕುನ ಎಂದರು ಅವನ ಮಿತ್ರರು. ಎಲ್ಲ ವಿಧಿಲೀಲೆ ಎಂದುಬಿಟ್ಟ ತ್ಯಾಗರಾಜಭಾಗವತರ್. ಅಲ್ಲಿಂದ ಪಯಣಿಸಿ 1959 ಅಕ್ಟೋಬರ್ 22ರಂದು ಮದ್ರಾಸ್ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ 01-11-1959ರ ಸಂಜೆ ಅಸುನೀಗಿದ ಈ ಅಮರ ಕಲಾವಿದ. ಇಡೀ ಚಿತ್ರರಂಗ ಮಾತ್ರವಲ್ಲ, ಕಲಾಭಿಮಾನಿಗಳನ್ನೆಲ್ಲರನ್ನೇ ಇದು ಶೋಕದಲ್ಲಿ ಕೆಡವಿತು. ಆತನ ಪಾರ್ಥಿವ ಶರೀರವನ್ನು ತಿರುಚಿರಾಪಳ್ಳಿಗೆ ಕರೆತಂದು ಸಂಗಿಲಯಾಂಡಪುರಂ ಎಂಬಲ್ಲಿ ಸಮಾಧಿ ಮಾಡಲಾಯಿತು. ಅಂತಿಮಯಾತ್ರೆ ಅವನ ಮನೆ ಇರುವ ಕಂಟೊನ್ಮೆಂಟಿನಿಂದ ಸಮಾಧಿ ಸ್ಥಳ ತಲುಪಲು 4 ತಾಸು ತೆಗೆದುಕೊಂಡಿತು. ಕಾರಣ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಮೆರವಣಿಗೆಯಲ್ಲಿದ್ದರು. ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ ಈ ಮಹಾನ್ ಕಲಾವಿದ ತನ್ನ ನೆನಪನ್ನು ಜನರ ಎದೆಯಲ್ಲಿ ಅಚ್ಚಳಿಯದಂತೆ ಉಳಿಸಿ ಅಮರನಾಗಿಬಿಟ್ಟ.

ನಿಗೂಢವಾಗಿಯೇ ಉಳಿದ ಕೊಲೆ ಕೇಸು
        ಕೊನೆಗೂ ಲಕ್ಷ್ಮೀಕಾಂತಂನ ನಿಜವಾದ ಕೊಲೆಗಾರರು ಯಾರು ಎಂಬುದು ಪತ್ತೆಯಾಗಲೇ ಇಲ್ಲ. ಪತ್ತೆಯಾಗದ ಇಂತಹ ಅನೇಕ ನಿಗೂಢ ಪ್ರಕರಣಗಳಲ್ಲಿ ಒಂದಾಗಿ ಲಕ್ಷ್ಮೀಕಾಂತಂ ಕೊಲೆ ಇತಿಹಾಸಕ್ಕೆ ಸೇರಿಹೋಯಿತು. ಇವರೆಲ್ಲರ ಮೇಲೆ ಸುಳ್ಳು ಕತೆ ಕಟ್ಟಿ ಅನ್ಯಾಯವಾಗಿ ಆರೋಪ ಹೊರಿಸಿ ಜೈಲಿಗೆ ತಳ್ಳಿದ ಪೋಲೀಸರಿಗೆ ಮಾತ್ರ ಏನೂ ಆಗಲಿಲ್ಲ. ಅವರೆಲ್ಲಾ ಸುಖವಾಗಿದ್ದರು. ಇಷ್ಟೆಲ್ಲದರ ಹಿಂದೆ ಇದ್ದ ಓರ್ವ ಸಂಗೀತಗಾರ್ತಿ - ನಟಿ ಮಾತ್ರ ಕುಹಕ ನಗೆಯಿಂದ ಸಂತೋಷಪಟ್ಟಿದ್ದಳು. ಆಕೆಯೇ ಈ ಎಲ್ಲದರ ಸೂತ್ರಧಾರಳು. ಯಾರವಳು? ಅದು ಲಕ್ಷ್ಮೀಕಾಂತಂಗೆ ಮಾತ್ರ ಗೊತ್ತಿದ್ದಿತ್ತು. ಆತನೊಂದಿಗೇ ಆ ಮಾಹಿತಿಯೂ ಮಣ್ಣಿಗೆ ಸೇರಿ ಹೋಯಿತು.

ನಿಮ್ಮ ಅನಿಸಿಕೆ ತಿಳಿಸಿ - ಇಮೇಲ್ editor@kundapra.com


ಹುಡುಗಿಯರ ರಕ್ಷಣೆಗಾಗಿ ಜೀವತೆತ್ತ ಹುಡುಗರು

ಮುಂಬೈಯಲ್ಲೊಂದು ಭಯಾನಕ ಘಟನೆ
    ಬಿರುಗಾಳಿ ಎದ್ದಿದೆ ಮುಂಬಯಿಯಲ್ಲಿ. ಹುಡುಗಿಯರನ್ನು ಅಶ್ಲೀಲವಾಗಿ ಕೆಣಕಿ, ಚುಡಾಯಿಸುತ್ತಿದ್ದ ದುಷ್ಕರ್ಮಿಗಳನ್ನು ಅಟ್ಟಿದ ಪರಾಕ್ರಮಕ್ಕಾಗಿ ಧೀರ ಯುವಕರಿಬ್ಬರನ್ನು ಮತ್ತೆ ಬಂದ ದುಷ್ಟಕೂಟ ಚಚ್ಚುತ್ತಿದ್ದರೂ, ಸುತ್ತ ಇದ್ದ ಜನ ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತ ಬಗ್ಗೆ ! ಜತೆಗಿದ್ದ ಹುಡುಗಿಯರು ಸಹಾಯಕ್ಕೆ ಬೇಡಿಕೊಂಡರೂ ನಿಂತ ಜನ ಕದಲಲಿಲ್ಲ. ಹೋಗುತ್ತಿದ್ದ, ಬರುತ್ತಿದ್ದ ರಿಕ್ಷಾ, ಟ್ಯಾಕ್ಸಿಗಳೂ ನಿಲ್ಲಲಿಲ್ಲ. ಪೋಲೀಸ್ 'ಸಹಾಯವಾಣಿ' ತಕ್ಷಣ ಸ್ಪಂದಿಸಲೇ ಇಲ್ಲ. ಜಿಲ್ಲಾ ಮೆಜೆಸ್ಟ್ರೇಟರ ಬಂಗಲೆಯ ಕಬ್ಬಿಣದ ಗೇಟು ತಟ್ಟಿದರೂ ತೆರೆಯಲಿಲ್ಲ.  ಹೋಟೇಲಿನ ಸಿಬ್ಬಂದಿ, ಹೊರಗಿನ ಜನಸ್ತೋಮ ಕಾಣಕಾಣುತ್ತಿರುವಂತೆಯೇ ಇಬ್ಬರು ಶೂರ ಯುವಕರು ರಕ್ತದ ಮಡುವಿನಲ್ಲಿ ಬಿದ್ದು ಅಸುನೀಗಿದರು ! ಹಾಗಾದರೆ ನಾಗರಿಕ ಪ್ರಜ್ಞೆ ಎಲ್ಲಿದೆ ? ಸಾಮಾಜಿಕ ಜವಾಬ್ದಾರಿ ಎಲ್ಲಿದೆ? ಮುಂಬಯಿಯಲ್ಲೆಲ್ಲಾ ಈಗ ಇದೇ ಪ್ರಶ್ನೆ, ಚರ್ಚೆ , ಬಿಸಿ ಬಿಸಿ ಬಿರುಗಾಳಿ. ನಡೆದ ಭೀಕರ ಘಟನಾವಳಿ ವಿವಿಧ ಮೂಲಗಳು ಸಂಗ್ರಹಿಸಿ ಹೇಳಿದಂತೆ ಹೀಗಿದೆ.

ಗಮ್ಮತ್ತು ತಂದ ಆಪತ್ತು
       2011 ಅಕ್ಟೋಬರ್ 20ರ ರಾತ್ರಿ. ಸ್ನೇಹಿತರ ಗುಂಪೊಂದು ಮುಂಬಯಿಯ ಅಂಧೇರಿಯ ಪರಿಚಿತ ಹೋಟೇಲು 'ಅಂಬೋಲಿ ಕಿಚನ್ ಆ್ಯಂಡ್ ಬಾರ್'ಗೆ ಡಿನ್ನರ್ಗೆ ತೆರಳಿದ್ದರು. ಅಂದು ಭಾರತ - ಇಂಗ್ಲೆಂಡ್ ಏಕದಿನ ಕ್ರಿಕೆಟ್ ಪಂದ್ಯಾಟ ನಡೆಯುತ್ತಿತ್ತು. ಆ ಹೋಟೇಲಿನಲ್ಲಿ ಅಳವಡಿಸಿದ ಭಾರೀ ಪರದೆಯ ಮೇಲೆ ಕ್ರಿಕೆಟ್ ಪಂದ್ಯಾಟ ನೋಡುತ್ತಾ, ಭೋಜನಕೂಟ ಸವಿಯಲು ಸಜ್ಜಾಗಿ ಹೋಗಿತ್ತು ಗೆಳೆಯ, ಗೆಳತಿಯರ ಈ ತಂಡ. ಅದರಲ್ಲಿದ್ದವರು ಕೀನನ್ ಸಾಂತೋಸ್, ರೂಬೆನ್ ಫೆರ್ನಾಂಡೀಸ್, ಅವಿನಾಶ್ ಬಾಲಿ, ಬೆಂಜಮಿನ್ ಫೆರ್ನಾಂಡೀಸ್ ಪ್ರಿಯಾಂಕಾ ಫೆರ್ನಾಂಡೀಸ್, ಶೋಭಿತಾ ಮತ್ತೋರ್ವಳು. 
       ರಾತ್ರಿಯ ಊಟ ಮುಗಿಸಿ ಹೋಟೇಲಿನಿಂದ ಹೊರಬರುವಾಗ 10.30 ಯಾ 11 ಆಗಿತ್ತು. ರಸ್ತೆಯಲ್ಲಿನ್ನೂ ಜನಸಂಚಾರ ಬಹಳವಿತ್ತು. ಹತ್ತಿರದಲ್ಲಿ ಹೋಟೇಲುಗಳು ತೆರೆದುಕೊಂಡಿದ್ದುವು. ರಾಜಕೀಯ ಪಕ್ಷವೊಂದರ ಕಛೇರಿ ಸಹಾ ಪಕ್ಕದಲ್ಲಿ ಬಾಗಿಲು ತೆರೆದುಕೊಂಡಿತ್ತು. ವಾಹನಗಳ ಓಡಾಟ ಸಾಗಿತ್ತು. ಡಿನ್ನರ್ ಮುಗಿಸಿ ಬಂದ ಗೆಳೆಯ ಗೆಳತಿಯರು ಹೋಟೇಲ್ ಬಾಗಿಲಿನಲ್ಲಿದ್ದ ಪಾನ್ಶಾಪ್ನಲ್ಲಿ ಬೀಡಾ ತಿನ್ನಲು ನಿಂತರು. ಆದರೆ ಆಗಲೇ ಅಲ್ಲಿ ಬೇರೆ ನಾಲ್ವರಿದ್ದರು. ಪಾನಮತ್ತರ ದುಷ್ಟಕೂಟ ! ಇವರಿಗೆ ಪಾನ್ ಕೊಳ್ಳಲು ಬಿಡದೇ ಅಡ್ಡ ನಿಂತಿತ್ತು ಈ ಕೂಟ. ಜಾಗ ಬಿಡಿ ಎಂದಾಗ ಗುಂಪಿನಲ್ಲಿದ್ದ ಹುಡುಗಿಯರನ್ನು ಕಂಡು ದುಷ್ಟ ಕೂಟಕ್ಕೆ ಏನಾಯಿತೋ, ಅಶ್ಲೀಲವಾಗಿ ಕೆಣಕತೊಡಗಿದರು, ಚುಡಾಯಿಸತೊಡಗಿದರು, ಮೈಮೇಲೆ ಬೀಳಬಂದರು. ಜತೆಗಿದ್ದ ಗೆಳೆಯರಿಗೆ ಹೇಗಾಗಬೇಡ?  ಕಪಾಳಕ್ಕೆ ಬಾರಿಸಿಬಿಟ್ಟರು ಈ ಧೀರ ಯುವಕರು. ಕುಪಿತರಾದ ದುಷ್ಟ ಕೂಟ ಅಲ್ಲಿಂದ ಕಾಲ್ತೆಗೆಯಿತು. ನಿರ್ಗಮಿಸುತ್ತಿದ್ದಾಗ ದುಷ್ಟಕೂಟದ ಒಬ್ಬ 'ಮಾರ್ದೂಂಗಾ ತುಮ್ ಲೋಗೋಂಕೋ' (ನಿಮ್ಮನ್ನೆಲ್ಲಾ ಕೊಂದು ಬಿಡುತ್ತೇನೆ)' ಎಂದದ್ದು ಅವಿನಾಶ್ಗೆ ಕೇಳಿಸಿತು. ಆದರೆ ಅದನ್ನು ದೊಡ್ಡದಾಗಿ ಪರಿಗಣಿಸದೇ ಗೆಳೆಯ ಗೆಳತಿಯರ ತಂಡ ಅಲ್ಲೇ ನಿಂತಿತ್ತು.

ನಡುರಾತ್ರಿಯಲ್ಲಿ ರಕ್ತಪಾತ
       ಮುಂದೆ ನಡೆದದ್ದೇ ಭಯಾನಕ. ದುಷ್ಟಕೂಟದಲ್ಲಿದ್ದ ನಾಲ್ವರು ಜಿತೇಂದ್ರ ರಾಣಾ, ಸತೀಶ್ ದುಲ್ಹಜ್, ದೀಪಕ್ ಪಿಸ್ವಾಲ್ ಮತ್ತು ಸುನೀಲ್ ಬೋದ್. ಅವರು ಅಲ್ಲಿಂದ ನೇರ ವಾಲ್ಮೀಕಿ ನಗರಕ್ಕೆ ತೆರಳಿ ಅಲ್ಲಿ ಒಂದು ಹುಟ್ಟುಹಬ್ಬದ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ತಮ್ಮ ಸ್ನೇಹಿತರ ಹತ್ತಿರ ಬೊಬ್ಬಿಟ್ಟರು. 'ನಮಗೆಲ್ಲ ಕೆಲವು ಹುಡುಗರು ಹೊಡೆದುಬಿಟ್ಟರು, ಬನ್ನಿ' ಎಂದರು. ಇಷ್ಟು ಕೇಳಿದ್ದೇ ಕೇಳಿದ್ದು, ವಾಲ್ಮೀಕಿ ನಗರದ ಗೆಳೆಯರ ಗುಂಪು ಕೆಂಡಾಮಂಡಲವಾಗಿಬಿಟ್ಟಿತ್ತು. ಯಾಕೆ, ಏನು ಎಂದು ಸಹಾ ವಿಚಾರಿಸಿದ ದುಷ್ಟ ಕೂಟದ ಹತ್ತಾರು ಗೆಳೆಯರು ತಕ್ಷಣ ಕೈಗೆ ಸಿಕ್ಕಿದ ಆಯುಧ - ಕ್ರಿಕೆಟ್, ಹಾಕಿಸ್ಟಿಕ್, ಲಾಠಿ ಹಿಡಿದುಕೊಂಡು ಅಂಬೋಲಿ ಕಿಚನ್ ಆ್ಯಂಡ್ ಬಾರ್ನತ್ತ ಧಾವಿಸಿ ಬಂದರು ರಿಕ್ಷಾದಲ್ಲಿ. ರಿಕ್ಷಾ ನಿಲ್ಲಿಸಿ ಇಳಿಯುವಾಗ, ಎಳನೀರು ಮಾರಾಟಗಾರನೊಬ್ಬ ವ್ಯಾಪಾರ ಮುಗಿಸಿ ಮನೆಗೆ ಹೋಗಲು ಸಜ್ಜಾಗುತ್ತಿದ್ದ. ಅವನಲ್ಲಿದ್ದ ಎರಡು ಭಾರೀ ಚೂರಿಗಳು ತಂಡದ ವಶವಾಯಿತು. ಹೇಗೆ ಚೂರಿ ಇರಿದು ಕೊಲ್ಲಬೇಕೆಂದು ರಾಣಾ ಹೇಳಿಕೊಟ್ಟ. ಕೊಲ್ಲಲೆಂದೇ ಬಂದ ದುಷ್ಕರ್ಮಿಗಳು ಪಾನ್ಶಾಪ್  ಎದುರು ನಿಂತ ಕೀನಾನ್ ಸಾಂತೋಸ್ ಮತ್ತು ಗೆಳೆಯ ಗೆಳತಿಯರ ಗುಂಪಿನ ಮೇಲೆ ಹಿಂದಿನಿಂದ ಬಂದು ಬಿದ್ದುಬಿಟ್ಟಿತು. ಅಷ್ಟೊಂದು ಜನ ಬಂದು ಹೊಡೆದು, ಇರಿದರೂ ಕೀನನ್ ಸಾಂತೋಸ್ ಗಾಯವಾಗಿದ್ದು ಗೊತ್ತಾಗಿಯೋ, ಗೊತ್ತಿಲ್ಲದೆಯೋ ತನ್ನ ಸ್ನೇಹಿತೆ ಪ್ರಿಯಾಂಕಾ ಫೆರ್ನಾಂಡೀಸಳನ್ನು ರೆಸ್ಟೊರೆಂಟ್ ಒಳಕ್ಕೆ ತಳ್ಳಿಬಿಟ್ಟ. ಗಾಯದಿಂದ ರಕ್ತ ಸುರಿಯುತ್ತಿದ್ದರೂ, ಮೈಮೇಲೆರಗಿದ ದುಷ್ಕರ್ಮಿಗಳೊಂದಿಗೆ ಹೋರಾಡಿದ. ಆದರೆ ನಾಲ್ಕಾರು ಮಂದಿ ಕೀನನ್ ಸಾಂತೋಸ್ನನ್ನು ನಾಲ್ಕು ಕಡೆಗಳಿಂದಲೂ ಹಿಡಿದು ಬಿಟ್ಟಿದ್ದರು. ಅವನಿಗೆ ಅಲುಗಾಡಲೂ ಆಸ್ಪದೆ ಕೊಡದೇ ನೆಲಕ್ಕೆ ಕೆಡವಿ ಒತ್ತಿ ಹಿಡಿದಿದ್ದರು. ಆಗಲೇ ಅವನಿಗೆ ಮಾರಣಾಂತಿಕವಾಗಿ ಹೊಟ್ಟಗೆ ಚೂರಿಯಿಂದ ಇರಿದುಬಿಟ್ಟರು. ರಕ್ತದೋಕುಳಿ ಹರಿದುಬಿಟ್ಟಿತು. ರೂಬೆನ್ಗೆ ಕೂಡಾ ನಾಲ್ಕಾರು ಜನ ಸುತ್ತುಗಟ್ಟಿದ್ದರು. ಅವನನ್ನು ಬಡಿದರು, ಹೊಟ್ಟೆಗೂ, ಎದೆಗೂ ಚೂರಿಯಿಂದ ಇರಿದು ಇರಿದು ಗಾಯಮಾಡಿದಾಗ ರಕ್ತ ಸುರಿಸುತ್ತಾ ಆತ ಬಿದ್ದ. ಹುಡುಗಿಯರು ಆರ್ತನಾದ ಮಾಡುತ್ತಿದ್ದರು. 'ಸಹಾಯಮಾಡಿ, ಬನ್ನಿ' ಎಂದು ಸುತ್ತಲಿದ್ದವರ ಹತ್ತಿರ, ಹೋಟೇಲಿನ ಸಿಬ್ಬಂದಿಬಳಿ ಸಹಾ ಅಂಗಲಾಚುತ್ತಿದ್ದರು. ಯಾರೊಬ್ಬರೂ ಮಿಸುಕಾಡಲಿಲ್ಲ. ಸುತ್ತಲಿದ್ದ ಜನ ಮೂಕಪ್ರೇಕ್ಷಕರಾಗಿ ನಿಂತಿದ್ದರು. 'ತಮಾಷೆ' ಕಾಣುತ್ತಲಿದ್ದರು ಹೊರತು, ಮುಂದೆ ಬಂದು ತಡೆಯುವ, ರಕ್ಷಿಸುವ, ಸಹಾಯ ಮಾಡುವ ಸಾಹಸ ಮಾಡಲೇ ಇಲ್ಲ.
ಅವಿನಾಶ್ ಗೈದ ಸಾಹಸ
      ಗೆಳೆಯರ ತಂಡದಲ್ಲಿದ್ದ ಅವಿನಾಶ್ ಸಾಹಸಿ ಅವನ ಕಣ್ಣಿಗೆ ಹೋಟೇಲ್ನ ಒಂದು ಗ್ಲಾಸ್ ಕಂಡಿತು. ಆ ಗ್ಲಾಸನ್ನೇ ಎತ್ತಿ ರಾಣಾನಿಗೆ ಬಡಿದುಬಿಟ್ಟ. ರಾಣಾನ ಹಣೆಯ ಮೇಲೆ ಗಾಯ ಆಗಿ ಬಿಟ್ಟಿತು. (ಇದೇ ಮುಂದಕ್ಕೆ ಆರೋಪಿ ರಾಣಾನನ್ನು ಪತ್ತೆ ಹಚ್ಚಿ ಬಂಧಿಸಲು ಸಹಾಯಕವಾಯಿತು) ಇತರ ದುಷ್ಕರ್ಮಿಗಳ ಕೈಯಲ್ಲಿ ಲಾಠಿ, ಕ್ರಿಕೆಟ್, ಹಾಕಿಸ್ಟಿಕ್ ಇತ್ತಲ್ಲ, ಅದರಿಂದಲೇ ಗೆಳೆಯರ ತಂಡದ ಉಳಿದವರನ್ನು ಬಡಿದರು. ಅವರಿಗೆಲ್ಲಾ ಪೆಟ್ಟಾಯಿತು. ಹಲ್ಲೆಯಲ್ಲಿ ಒಬ್ಬ ಹುಡುಗಿಯ ಉಡುಗೆ ಹರಿಯಿತು. ಅವಿನಾಶ್ಗೆ ಕೀನನ್ ಮತ್ತು ರೂಬೆನ್ರನ್ನು ಹೇಗೆ ರಕ್ಷಿಸುವುದೆಂದೇ ತಿಳಿಯದಾದಾಗ ಅವನ ಕಣ್ಣಿಗೆ ಹೋಟೇಲಿನ ಪಕ್ಕ ನಿಲ್ಲಿಸಿಟ್ಟ ಒಂದು ಏಣಿ ಕಂಡಿತು. ಸಿನೆಮಾ ಶೈಲಿಯಲ್ಲಿ ಆ ಏಣಿಯನ್ನೇ ಎತ್ತಿ ದುಷ್ಕರ್ಮಿಗಳತ್ತ ಬೀಸಿ ಒಗೆದುಬಿಟ್ಟ ಈ ಧೀರ. ಆ ಪೆಟ್ಟಿಗೆ ನಾಲ್ವರು ದುಷ್ಕರ್ಮಿಗಳು ತತ್ತರಿಸಿ ಉರುಳಿದರು. ಆಗ ಅವಿನಾಶ್ ಕೀನನ್ ಮತ್ತು ರೂಬೆನ್ರನ್ನು ಎಳೆದು ರೆಸ್ಟೋರೆಂಟ್ ಒಳಕ್ಕೆ ಸೇರಿಸಿದ. ಒಬ್ಬನೇ ಒಬ್ಬ ವೈಟರ್ ಸಹಾಯಕ್ಕೆ ಬಂದ.

ಪೋಲೀಸ್ ಅಸಹಾಯವಾಣಿ !
       ತಮ್ಮ ಗೆಳೆಯರನ್ನು ಚಚ್ಚುತ್ತಿದ್ದ ದುಷ್ಕರ್ಮಿಗಳಿಂದ ರಕ್ಷಣೆಗೆ ಬೊಬ್ಬಿಡುತ್ತಲೇ ಇದ್ದರು ಹುಡುಗಿಯರು. ರಿಕ್ಷಾ, ಟ್ಯಾಕ್ಸಿಗಳು ಓಡುತ್ತಲೇ ಹೋದುವು, ನಿಲ್ಲಲಿಲ್ಲ. ಪೋಲೀಸ್ ಸಹಾಯವಾಣಿ ನಂಬರ್ 100ಕ್ಕೆ ಮೇಲಿಂದ ಮೇಲೆ ಫೋನ್ ಮಾಡಿದರು. 'ನೀವು ಸಾಲಿನಲ್ಲಿದ್ದೀರಿ - ಸ್ವಲ್ಪ ಕಾಯಿರಿ' ಎಂದೇ ಸಂದೇಶ ಬರುತ್ತಿತ್ತು ಹೊರತು ತುರ್ತು ಸಹಾಯ ಬರಲೇ ಇಲ್ಲ - ನಂಬರ್ 100 ಸ್ಪಂದಿಸಲೇ ಇಲ್ಲ. ಇದು ಮುಂಬಯಿಯಲ್ಲಿ ಮಾಮೂಲು ಎನ್ನುತ್ತಾರೆ ಅಲ್ಲಿಯ ಜನ. ಆ ಜಾಗದಿಂದ ಬರೇ ನೂರು ಮೀಟರ್ ದೂರದಲ್ಲಿ ಜಿಲ್ಲಾ ಮೆಜೆಸ್ಟ್ರೇಟರ ಬಂಗಲೆ ಇತ್ತು. ಓರ್ವಳು ಓಡಿ ಹೋಗಿ ಬಂಗಲೆಯ ಭಾರೀ ಕಬ್ಬಿಣದ ಗೇಟು ಅಲುಗಾಡಿಸಿದಳು, ಕೂಗಿದಳು. ಗೇಟೂ ತೆರೆಯಲಿಲ್ಲ - ಯಾರೊಬ್ಬರೂ ಬರಲಿಲ್ಲ. ಪ್ರಿಯಾಂಕ ಕೊನೆಗೆ ಫೋನ್ ಮಾಡಿದ್ದು ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೀನನ್ನ ತಂದೆ ವೆಲೆರಿಯನ್ ಸಾಂತೋಸ್ಗೆ.

ಬಲಿಯಾದ ಕೀನನ್
       ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಪ್ರತಿಭಟಿಸಿದ ಯುವಕರಿಗೆ ಬುದ್ಧಿ ಕಲಿಸಿದ ತೃಪ್ತಿಯಲ್ಲಿ ದುಷ್ಕರ್ಮಿಗಳು ಪಲಾಯನ ಮಾಡಿದರು. ಕೀನನ್ ಪ್ರಜ್ಞೆ ಕಳೆದುಕೊಂಡಿದ್ದ. ರೂಬೆನ್ ತೀವ್ರ ಗಾಯದಿಂದ ಬಳಲುತ್ತಿದ್ದ. ಆದರೂ ಸುತ್ತಲಿದ್ದ ಜನಕ್ಕೆ, ಹೋಟೇಲಿನ 25-30 ಸಿಬ್ಬಂದಿಗೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬುದ್ಧಿ, ಮನಸ್ಸು, ಧೈರ್ಯ ಬರಲೇ ಇಲ್ಲ. ಗೆಳೆಯರೇ ರಿಕ್ಷಾ ಹಿಡಿದು ಕೀನನ್ ಮತ್ತು ರೂಬೆನ್ರನ್ನು ಕೊಕಿಲಬೆನ್ ಆಸ್ಪತ್ರೆಗೆ ಸಾಗಿಸಿದರು. ರೂಬೆನ್ನ ಹೊಟ್ಟೆಗೆ, ಎದೆಗೆ ಇರಿತದ ಗಾಯಗಳಾಗಿದ್ದುವು. ಹೊಟ್ಟೆಯ ಗಾಯ ಎಷ್ಟು ಬಲವಾಗಿತ್ತೆಂದರೆ ಕರುಳು ಹೊರಗೆ ಬಂದು ಕೆಳಕ್ಕೆ ಬೀಳುವುದರಲ್ಲಿತ್ತು. ಅದು ಬೀಳದಂತೆ ಗೆಳೆಯರು ಹೊಟ್ಟೆಗೆ ಕ್ಲಿಪ್ ಹಾಕಬೇಕಾಯಿತು. ರೂಬೆನ್ ಉದ್ಯೋಗ ಅರಸುತ್ತಿದ್ದ, ಭವಿಷ್ಯದ ಕನಸು ಕಾಣುತ್ತಿದ್ದ ಹುಡುಗ. ಕೀನನ್ ಹೋಟೇಲ್ ಒಂದರಲ್ಲಿ 'ಚೆಫ್' (ಬಾಣಸಿಗ)ನಾಗಿದ್ದವ. ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಕೀನನ್ ತಂದೆ ಓಡಿ ಬಂದರು. ಅವರು ಆಸ್ಪತ್ರೆಗೆ ಬಂದ 20 ನಿಮಿಷಗಳಲ್ಲಿ ತೀವ್ರ ರಕ್ತಸ್ರಾವದಿಂದ ಅವರ ಧೀರಪುತ್ರ ಕೀನನ್ ಕೊನೆಯುಸಿರೆಳೆದ. 

ಅಸು ನೀಗಿದ ರೂಬೆನ್
       ರೂಬೆನ್ ಸಾವು ಬದುಕಿನ ನಡುವೆ ಹೋರಾಡುತ್ತಾ ತೀವ್ರ ನಿಗಾ ವಿಭಾಗದಲ್ಲಿದ್ದ. ಅವನನ್ನು ರಕ್ಷಿಸಲು ವೈದ್ಯರು ಹರಸಾಹಸ ಮಾಡಿದರು. ಅವನಿಗೆ ಮೂರು ಶಸ್ತ್ರಚಿಕಿತ್ಸೆ ನಡೆಸಿದರು. ದೇಹದ ಒಳಗಿನ ರಕ್ತಸ್ರಾವ ವಿಪರೀತವಾಗಿತ್ತು - ಅದನ್ನು ತಡೆಯುವ ಯತ್ನ ನಡೆಸಿದ್ದರು ವೈದ್ಯರು. ರೂಬೆನ್ನ ಸ್ಥಿತಿ ತೀರಾ ಅಪಾಯಕಾರಿಯಾಗಿತ್ತು. ಆತ ಬದುಕುಳಿಯಲು ಇಡೀ ಕುಟುಂಬ, ಸ್ನೇಹಿತರು ದೇವರೊಂದಿಗೆ ಪ್ರಾರ್ಥಿಸುತ್ತಲೇ ಇದ್ದರು. ಇಷ್ಟೆಲ್ಲಾ ಇರುವಾಗ, ಒಂದು ರಾತ್ರಿ 1.30ರ ಹೊತ್ತಿಗೆ ಪೋಲೀಸರು ಯಾರಿಗೂ ತಿಳಿಯದಂತೆ ಕಳ್ಳ ಹೆಜ್ಜೆ ಇಟ್ಟು ಅವರಿಗೆ ಪ್ರವೇಶ ಇಲ್ಲದ ಈ ತೀವ್ರ ನಿಗಾ ವಿಭಾಗಕ್ಕೆ ನುಗ್ಗಿದ್ದರು. ಮಲಗಿ ನಿದ್ರಿಸುತ್ತಿದ್ದ ಗಾಯಾಳು ರೂಬೆನ್ನನ್ನು ತಟ್ಟಿ ಎಬ್ಬಿಸಿದರು. ಆತ ತೀರಾ ಬಳಲಿದ್ದ. ಆದರೆ ಪೋಲೀಸರಿಗೆ ಅದರ ಲಕ್ಷ್ಯವಿಲ್ಲ. ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಲಾರಂಭಿಸಿದರು. ರೂಬೆನ್ಗೆ ಇನ್ನೂ ಕೀನನ್ ಸತ್ತದ್ದು ಗೊತ್ತಿರಲಿಲ್ಲ. ಕುಟುಂಬಿಕರು, ಗೆಳೆಯರು ಬೇಕೆಂದೇ ಈ ವಿಚಾರ ಆತನಿಗೆ ತಿಳಿಸಿರಲಿಲ್ಲ. ಆತ ಕೇಳಿದ್ದು ಒಂದೇ - ಕೀನನ್ ಎಲ್ಲಿ, ಹೇಗಿದ್ದಾನೆ? ಪೋಲೀಸರು ಪ್ರಶ್ನಿಸುತ್ತಲೇ ಇದ್ದರು. ರೂಬೆನ್ನ ನಿದ್ದೆಗೆಡಿಸಿದ್ದರು. ಆತ ಸುಸ್ತಾಗಿಬಿಟ್ಟ, ಆತನ ಆರೋಗ್ಯ ವಿಷಮಿಸಿಬಿಟ್ಟಿತು. ಪೋಲೀಸರು ಅಲ್ಲಿಂದ ಮೆಲ್ಲಗೆ ಹೊರಬರುವಾಗ ಬೆಂಜಮಿನ್ ನೋಡಿಬಿಟ್ಟ. ಕೆಂಡಾಮಂಡಲವಾದ. ಇದೆಂತಹ ಆಸ್ಪತ್ರೆ - ತೀವ್ರ ನಿಗಾವಿಭಾಗದಲ್ಲಿದ್ದ, ಆರೋಗ್ಯ ತೀರಾ ಹದಗೆಟ್ಟ ರೋಗಿಯೊಬ್ಬನನ್ನು ಅವೇಳೆಯಲ್ಲಿ ಕಾಣಲು ಪೋಲೀಸರು ಹೀಗೆ ನುಗ್ಗುವುದೆಂದರೆ? ಇಲ್ಲಿ ಭದ್ರತೆ ಇಲ್ಲವೇ ಎಂದುಕೊಂಡ. ಆಸ್ಪತ್ರೆಯ ಅಲಕ್ಷ್ಯ ತೀವ್ರ ಟೀಕೆಗೆ ತುತ್ತಾಯಿತು. ರೂಬೆನ್ನ ಆರೋಗ್ಯ ಕ್ಷಿಣಿಸಿದ್ದು ಕಂಡು ಹೌಹಾರಿದ ವೈದ್ಯರು ಇನ್ನೊಂದು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು. ಆದಿತ್ಯವಾರ ಅ.30 - ಅಂದು ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ, ರಕ್ತದ ಅಭಾವ. ಒಬ್ಬ ಯುವಕ ಸಾಯುವ ಸ್ಥಿತಿಯಲ್ಲಿದ್ದರೂ ಆಸ್ಪತ್ರೆಗೆ 'ರಜೆ'ಯೇ? ಜೀವಕ್ಕಾಗಿ ಒದ್ದಾಡಿ ಒದ್ದಾಡಿ ರೂಬೆನ್ ಅಕ್ಟೋಬರ್ 31ರ ರಾತ್ರಿ ಅಸುನೀಗಿದ. ಹುಡುಗಿಯರನ್ನು ಚುಡಾಯಿಸುವುದರ ವಿರುದ್ಧ ಪ್ರತಿಭಟಿಸಿದ ಧೀರ ಕಾರ್ಯಕ್ಕಾಗಿ ಇಬ್ಬರು ಯುವಕರು ವೀರಮರಣವನ್ನಪ್ಪಿದಂತಾಯಿತು. ಹುಡುಗಿಯರಿಗೆ ಕೀಟಲೆ ಮಾಡಲು ಕಂಟಕವಾಗಿದ್ದ ಇಬ್ಬರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿಬಿಟ್ಟಂತಾಯಿತು. 

ಪೋಲೀಸರ ಉತ್ತರಕ್ರಿಯೆ
         ಪೋಲೀಸರು ಹಲ್ಲೆ ನಡೆದ ಜಾಗಕ್ಕೆ ಬಂದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಆಗಿತ್ತು. ಸುತ್ತಲಿದ್ದವರ ಹೇಳಿಕೆ, ಗೆಳೆಯ ಗೆಳತಿಯರ ಪ್ರತ್ಯಕ್ಷದರ್ಶಿ ವಿವರ ಪಡೆದ ಪೋಲೀಸರ ಪಡೆ ಆರೋಪಿಗಳನ್ನು ಹಡೆಮುರಿಕಟ್ಟಿ ತರಲು ವಾಲ್ಮೀಕಿ ನಗರಕ್ಕೆ ಮುತ್ತಿಗೆ ಹಾಕಿತು. ಆದರೆ ದುಷ್ಕಮರ್ಿಗಳ ಕುಟುಂಬಿಕರು, ಸಂಗಾತಿಗಳು ಪೋಲೀಸರ ಮೇಲೇ ಎರಗಿ ಘರ್ಷಣೆ ನಡೆಸಿಬಿಟ್ಟರು. ಹಾಗಾಗಿ ದೊಂಬಿ ಆರೋಪದಲ್ಲಿ ಪೋಲೀಸರು ವಾಲ್ಮೀಕಿ ನಗರದ 17 ಜನರನ್ನು ಬಂಧಿಸಿ ಅವರ ಮೇಲೆ ಕೇಸು ಹಾಕಿಬಿಟ್ಟರು. ಹಣೆಯ ಮೇಲಾಗಿದ್ದ ಗಾಯದಿಂದಾಗಿ ಜಿತೇಂದ್ರ ರಾಣಾನನ್ನು ಪೋಲೀಸರು ಹೆಚ್ಚು ಶ್ರಮವಿಲ್ಲದೇ ಹುಡುಕಿ ಅಂದೇ ರಾತ್ರಿ ಬಂಧಿಸಿಬಿಟ್ಟರು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಡಿಎನ್ ನಗರ ಪೋಲೀಸರು ಸತೀಶ್ ದುಲ್ಹಜ್ ಮತ್ತು ಸುನೀಲ್ ಬೋದ್ರನ್ನು ಹಿಡಿದು ತಂದರು. ಜೀತೇಂದ್ರ ರಾಣಾ ಪೋಲೀಸರ ಬಳಿ ತಪ್ಪೊಪ್ಪಿಕೊಂಡ. ಒಂದು ದಿನದ ಮೇಲೆ ದೀಪಕ್ ಪಿಸ್ವಾಲ್ ಸಹಾ ಪೋಲೀಸರ ಬಲೆಗೆ ಬಿದ್ದ. ಅವರೆಲ್ಲರ ಮೇಲೆ ಕೊಲೆ, ಹಲ್ಲೆ ಇತ್ಯಾದಿ ಆರೋಪ ಹೊರಿಸಿ ಪೋಲೀಸರು ಅಂಧೇರಿ ಮೇಟ್ರೋಪಾಲಿಟನ್ ಕೋಟರ್ಿಗೆ ಹಾಜರುಪಡಿಸಿದಾಗ ಅವರನ್ನೆಲ್ಲಾ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದರು. ದೊಂಬಿ ನಡೆಸಿದ ಇತರ 17 ಮಂದಿಗೂ ಇದೇ ಗತಿಯಾಯಿತು. ಇವರನ್ನೆಲ್ಲಾ ಕ್ಷಿಪ್ರ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮುಂಬಯಿಯಾದ್ಯಂತ ಕೂಗೆದ್ದಿದೆ.

ಧೀರಪುತ್ರನ ಧೀರ ತಂದೆ
ತನ್ನ ಪುತ್ರ ಮರಣಿಸಿದರೂ ತಂದೆ ವೆಲೆರಿಯನ್ಗೆ ಅವನ ಬಗ್ಗೆ ಹೆಮ್ಮೆ, ಅಭಿಮಾನ. 'ನನಗೆ ಇನ್ನೂ ಇಬ್ಬರು ಹುಡುಗರಿದ್ದಾರೆ, ಅವರಿಗೂ ಹೇಳಿದ್ದೇನೆ, ಇಂತಹ ಸಂದರ್ಭದಲ್ಲಿ ಓಡಿ ಹೋಗಬಾರದು - ಜೀವ ಹೋದರೂ ಚಿಂತಿಲ್ಲ - ಪ್ರತಿಭಟಿಸಿ, ಎದ್ದು ನಿಲ್ಲಿ' ಎಂದ ಅವರು ಇದೇ ದೈರ್ಯ ತೋರಲು ಭಾರತದ ಯುವಜನಕ್ಕೆ ಕರೆ ನೀಡಿದ್ದಾರೆ. ಆರೋಪಿಗಳಿಗೆ ಶೀಘ್ರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋರಿದ್ದಾರೆ. ಕೀನನ್, ರೂಬೆನ್ ಗೆಳೆಯರಿಗೆ ಒಂದೇ ಚಿಂತೆ. ಸುತ್ತಲಿದ್ದ ಜನ ಮುಂದೆ ಬರುತ್ತಿದ್ದರೆ, ಪರಿಚಿತ ಹೋಟೇಲಿನ ಸಿಬ್ಬಂದಿ ಧೈರ್ಯ ಮಾಡಿದ್ದರೆ, ಕೀನನ್, ರೂಬೆನ್ ಬದುಕುತ್ತಿದ್ದರು. ಯಾಕೆ ಈ ಜನ ಹೀಗೆ? ಎಂದು. ಗೆಳೆಯರೆಲ್ಲಾ ಸೇರಿ ಈ ಕುರಿತು ಜನಜಾಗೃತಿಗಾಗಿ, ನ್ಯಾಯಕ್ಕಾಗಿ ಒಂದು ವೆಬ್ಸೈಟ್ ತೆರೆದಿದ್ದಾರೆ. ಟ್ವಿಟ್ಟರ್ನಲ್ಲಿ ಸಂದೇಶ ನೀಡುತ್ತಿದ್ದಾರೆ. ಜನ ಅಭೂತಪೂರ್ವವಾಗಿ ಇದಕ್ಕೆ ಸ್ಪಂದಿಸಿದೆ. ಚುಡಾಯಿಸುವಿಕೆ ನಿಯಂತ್ರಣಕ್ಕೆ ವಿಶೇಷ ಪೋಲೀಸ್ ಪಡೆ ರಚಿಸಲು ಸರಕಾರ ಮನಸ್ಸು ಮಾಡುತ್ತಿದೆ. ಹೋಟೇಲ್ನಲ್ಲಿ ಸಿಸಿಟಿವಿ ಇದ್ದಿತ್ತು. ಆದರೆ ಸಾಪ್ಟ್ವೇರ್ ಸಮಸ್ಯೆಯಿಂದ ಅದು ಕಾರ್ಯವೆಸಗುತ್ತಿರಲಿಲ್ಲ ! ಗಲಭೆ ನಡೆದದ್ದು ಹೋಟೇಲ್ ಸಿಬ್ಬಂದಿಗೆ ಗೊತ್ತೇ ಇರಲಿಲ್ಲ - ಗೊತ್ತಾಗುವಷ್ಟರಲ್ಲಿ ಎಲ್ಲಾ ಮುಗಿದಿತ್ತು ಎನ್ನುತ್ತಾರೆ ಹೋಟೇಲಿನ ಜನರಲ್ ಮ್ಯಾನೇಜರ್ !

ಕಣ್ಣಲ್ಲಿ ರಕ್ತ ಇಲ್ಲದ ಮಂದಿ
       ಆರೋಪಿಗಳಲ್ಲಿ ಪ್ರಮುಖನಾದ ಜೀತೇಂದ್ರ ರಾಣಾ(25) ವೃತ್ತಿಯಲ್ಲಿ ಕ್ಷೌರಿಕ. ಉಳಿದವರೂ ಯುವಕರು - ಕಸಗುಡಿಸುವವರು. ಆರ್ಥರ್ ರೋಡ್ ಜೈಲಿನಲ್ಲಿ 19 ಜನರ ಮಧ್ಯೆ ಇವರನ್ನು ನಿಲ್ಲಿಸಿ ಗುರುತು ಹಿಡಿಯಲು ಹೇಳಿದಾಗ 12 ಮಂದಿ ಸಾಕ್ಷಿಗಾರರು ಗುರುತು ಹಿಡಿದರು. ಆದರೆ ಆರೋಪಿಗಳ ಕಣ್ಣಲ್ಲಿ ಒಂದಿನಿತೂ ಪಶ್ಚಾತ್ತಾಪ ಇರಲಿಲ್ಲ ಎಂದು ಪ್ರಿಯಾಂಕಾ ವಿಷಾದಿಸುತ್ತಾಳೆ. ಗುರುತು ಹಿಡಿದಾಗ ಜಿತೇಂದ್ರ ರಾಣಾ ನಕ್ಕುಬಿಟ್ಟನಂತೆ ! 'ಫಿರ್ ಮಿಲೆಂಗೇ' ಎಂದು ಅವಿನಾಶ್ಗೆ ಹೇಳಿದನಂತೆ. ಆತ ಬಿಡಲಿಲ್ಲ - 'ಆಯಿತು, ನಾನೂ ಸಿಕ್ಕುವೆ' ಎಂದು ಉತ್ತರ ಕೊಟ್ಟ. ಇದೆಲ್ಲದರ ಮಧ್ಯೆ ಅಲ್ಲಿನ ಶಾಸಕರೊಬ್ಬರು ಕೀನನ್ ಅಂತಿಮ ಕ್ರಿಯೆಯಲ್ಲಿ ಇಗರ್ಜಿಯಲ್ಲಿ ಭಾಗವಹಿಸಿದ ಸುದ್ದಿ ಹೊತ್ತ ಪತ್ರಿಕೆಗಳನ್ನು ಅವನ ಹಿಂಬಾಲಕರು ಉಚಿತವಾಗಿ ಜನರಿಗೆ ಹಂಚಿ ಈ ಸಂದರ್ಭದಲ್ಲೂ ಪ್ರಚಾರ ಗಿಟ್ಟಿಸಲು ಯತ್ನಿಸಿದ್ದು ಛೀಮಾರಿಗೆ ಗುರಿಯಾಗಿತ್ತು. ಇಷ್ಟೆಲ್ಲಾ ಆದರೂ ಕ್ರಿಕೆಟ್ ದಿಗ್ಗಜರಾಗಲೀ, ಬಾಲಿವುಡ್ ನಟರಾಗಲೀ, ಶಿವಸೇನಾ ಪ್ರಮುಖರಾಗಲೀ ಈ ಬಗ್ಗೆ ತಲೆಕೆಡಿಸಿಕೊಳ್ಳದೇ, ಜಾಗೃತಿ ಆಂದೋಲನದಲ್ಲಿ ಸಹಾ ಯಾವ ರೀತಿಯಲ್ಲೂ ಪಾಲ್ಗೊಳ್ಳದೇ ಇದ್ದದ್ದು ಜನರ ಟೀಕೆಗೆ ತುತ್ತಾಗಿದೆ. ಸುರಕ್ಷಿತ ಎನ್ನಿಸಿದ್ದ ಮುಂಬೈ ಅಸುರಕ್ಷಿತ ಎನ್ನಿಸಿದೆ. ಜನ ಮನಸ್ಸು ಮಾಡಿದರೆ ದುಷ್ಕರ್ಮಿಗಳ ಕಾಟ ಕೊನೆಗಾಣಿಲು ಸಾಧ್ಯ ಎನ್ನುತ್ತಾರೆ ಧೀರ ಪುತ್ರನ  ಧೀರ ತಂದೆ ವೆಲೇರಿಯನ್.


ಒಂದು ವಿಲಕ್ಷಣ ಸಾವಿನ ವಿಚಿತ್ರ ಕಥೆ: ಇದು ಕೊಲೆಯೋ - ಆತ್ಮಹತ್ಯೆಯೋ?


     ಇಂತಹ  ಒಂದು ಕಥೆಯನ್ನು ನೀವೆಂದೂ ಕೇಳಿರಲಾರಿರಿ, ಓದಿರಲಾರಿರಿ, ಊಹಿಸಿರಲಾರಿರಿ. ಕಥೆಯ ಕೊನೆಯ ತನಕವೂ ನಿಮ್ಮನ್ನು ನವಿರೇಳಿಸಿ, ಕುತೂಹಲ ಕೆರಳಿಸಿ, ಕೊನೆಗೂ ರೋಮಾಂಚನಗೊಳಿಸುವ ಅಂತ್ಯ ಈ ಕಥೆಯಲ್ಲಿದೆ. ನಿಜಕ್ಕೆಂದರೆ ಇದೊಂದು ಕಥೆಯೇ ಅಲ್ಲ - ನಿಜವಾಗಿ ನಡೆದ ಘಟನೆ. ಇದನ್ನು ಹೊರಹಾಕಿದವರು ಸಾಮಾನ್ಯರಲ್ಲ - ಅಪರಾಧ ವಿಜ್ಞಾನದ ಅಖಿಲ ಅಮೇರಿಕಾ ಸಂಘದ ಅಧ್ಯಕ್ಷರು. ಸಂದರ್ಭ - ಅಪರಾಧ ವಿಜ್ಞಾನಕ್ಕಾಗಿ ನೀಡಲಾಗುವ ವಾಷರ್ಿಕ ಪ್ರಶಸ್ತಿ ಹಾಗೂ ಸತ್ಕಾರಕೂಟ. ಅದು 1994ರಲ್ಲಿ. ಈ ವಿಲಕ್ಷಣ ವಿದ್ಯಮಾನ, ಅವರು ಬಣ್ಣಿಸಿದಂತೆ, ನಡೆದದ್ದು ಹೀಗೆ -

       ರೋನಾಲ್ಡ್ ಓಪಸ್ ಎಂಬ ಯುವಕ 1994ರ ಮಾರ್ಚ್ 23ರಂದು ಒಂದು ಕಟ್ಟಡದ ಹತ್ತನೇ ಅಂತಸ್ತಿನಿಂದ ಕೆಳಕ್ಕೆ ಹಾರಿದ - ಸತ್ತೇ ಹೋದ. ರೋನಾಲ್ಡ್ ಓಪಸ್ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಹತ್ತನೇ ಅಂತಸ್ತಿನಿಂದ ಕೆಳಕ್ಕೆ ಜಿಗಿದಿದ್ದ. ತಾನು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ ಚೀಟಿ ಸಹಾ ಬರೆದಿಟ್ಟಿದ್ದ. ಹಾಗಾಗಿ ಬದುಕಿನಲ್ಲಿ ಜಿಗುಪ್ಸೆಗೊಂಡವನೊಬ್ಬ ಹತ್ತನೇ ಅಂತಸ್ತಿನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ - ಅದೂ ಅವನೇ ಚೀಟಿ ಬರೆದಿಟ್ಟುವಾಗ. 

     ಆದರೆ ರೋನಾಲ್ಡ್ ಓಪಸ್ನ ಮೃತ ದೇಹದ ಪರೀಕ್ಷೆ ನಡೆಸಿದ ವೈದ್ಯಕೀಯ ತಜ್ಞರ ತೀರ್ಮಾನವೇ ಬೇರೆಯಾಗಿತ್ತು. ಆತ ಅಷ್ಟೆತ್ತರದಿಂದ ಕೆಳಕ್ಕೆ ಹಾರಿದ ಕಾರಣ ಸತ್ತದ್ದಲ್ಲ ಎಂದ ಅವರು ಆತ ಮೃತಪಟ್ಟದ್ದಕ್ಕೆ ಅಚ್ಚರಿಯ ಒಂದು ಕಾರಣ ಕೊಟ್ಟಿದ್ದರು. ಶಾಟ್ಗನ್ನಿಂದ ಹಾರಿಸಿದ ಒಂದು ಗುಂಡು ರೋನಾಲ್ಡ್ ಓಪಸ್ನ ತಲೆಗೆ ಬಡಿದ ಕಾರಣ, ಗುಂಡೇಟಿಗೆ ಗುರಿಯಾಗಿ ಆತ ತಕ್ಷಣ ಸತ್ತಿದ್ದ ಎಂದರವರು ! ಅದು ಹೇಗಾಯಿತು ?

    ವಾಸ್ತವವಾಗಿ ರೋನಾಲ್ಡ್ ಓಪಸ್ ಯೋಜಿಸಿದ ಪ್ರಕಾರ ಆತ ಸಾಯಲು ಸಾಧ್ಯವೇ ಇರಲಿಲ್ಲ. ಕಾರಣ, ಅವನಿಗೂ ಗೊತ್ತಿಲ್ಲದಂತೆ, ಆ ಕಟ್ಟಡದ 8ನೇ ಅಂತಸ್ತಿನ ಕೆಳಗೆ ಯಾರೂ ಬೀಳದಂತೆ ಒಂದು ಭದ್ರತಾ ಬಲೆ ನಿಮರ್ಿಸಲಾಗಿತ್ತು. ಕಟ್ಟಡದ ಕೆಲಸಗಾರರ ಸುರಕ್ಷತೆಯ ದೃಷ್ಟಿಯಿಂದ ಈ ಭದ್ರತಾ ಬಲೆ ನಿರ್ಮಿಸಿ ಹಾಕಲಾಗಿತ್ತು. ಸಾಧಾರಣವಾಗಿ ರೋನಾಲ್ಡ್ ಓಪಸ್ನ ಆತ್ಮಹತ್ಯಾ ಯತ್ನ ಈ ಬಲೆಯ ಕಾರಣ ವಿಫಲವಾಗುತ್ತಿತ್ತು. ಆತ ಯೋಜಿಸಿದ ಪ್ರಕಾರ ಆತ ಖಂಡಿತ ಸಾವನ್ನಪ್ಪುತ್ತಿರಲಿಲ್ಲ !

     ತನಿಖೆ ನಡೆಸಿದಾಗ, ಈ ರೋನಾಲ್ಡ್ ಓಪಸ್ 10ನೇ ಮಹಡಿಯಿಂದ ಹಾರಿ ಕೆಳಕ್ಕೆ ಬೀಳುತ್ತಿರಬೇಕಾದರೆ 9ನೇ ಮಹಡಿ ಎದುರು ದಾಟುತ್ತಿರುವಾಗ ಈ ಶಾಟ್ಗನ್ನ ಗುಂಡು ಬಂದು ಬಡಿದಿತ್ತು. 9ನೇ ಮಹಡಿಯ ಕಿಟಕಿಯಿಂದ ಈ ಗುಂಡು ಹೊರಹಾರಿತ್ತು. ಅದೇ ಸಮಯಕ್ಕೆ ಸರಿಯಾಗಿ ಕೆಳಬೀಳುತ್ತಲೇ ಇದ್ದ ರೋನಾಲ್ಡ್ ಓಪಸ್ನ ತಲೆಗೆ ಈ ಗುಂಡು ಹೊಕ್ಕಿತ್ತು. ತಕ್ಷಣ ಅವನ ಸಾವಿಗೆ ಕಾರಣವಾಗಿತ್ತು. ಗುಂಡು ಹಾರಿಸಿದವರಿಗೆ ರೋನಾಲ್ಡ್ ಓಪಸ್ ಕೆಳ ಧುಮುಕಿದ್ದು ತಿಳಿದಿರಲಿಲ್ಲ - ಕೆಳಗೆ ರಕ್ಷಣಾ ಬಲೆ ನಿಮರ್ಿಸಿದ್ದೂ ಗೊತ್ತಿರಲಿಲ್ಲ. ಅಂದ ಮೇಲೆ ಈ ಗುಂಡು ಹಾರಾಟ ಹೇಗೆ ನಡೆಯಿತು?

       ಆ ಕಟ್ಟಡದ 9ನೇ ಅಂತಸ್ತಿನ ಆ ಕೋಣೆಯಲ್ಲಿ ವಾಸವಿದ್ದವರು ಓರ್ವ ವೃದ್ಧ ಮತ್ತು ವೃದ್ಧೆ - ದಂಪತಿ. ಅಂದು ಅವರಿಬ್ಬರಲ್ಲಿ ಯಾವುದೋ ವಿಷಯಕ್ಕೆ ತೀವ್ರ ವಾಗ್ವಾದ ಆಗಿತ್ತು. ಮಾತಿಗೆ ಮಾತು ಬೆಳೆದು ವಾತಾವರಣ ಬಿಸಿಯೇರಿದಂತೆ ಆ ವೃದ್ಧ ಗಂಡ ಕೋಪಾವಿಷ್ಟನಾಗಿ ಹೆಂಡತಿಯನ್ನು ಬೆದರಿಸಲೆಂದು ಶಾಟ್ಗನ್ ತೆಗೆದು ಆಕೆಗೆ ಗುರಿ ಇಟ್ಟಿದ್ದ. ಶಾಟ್ಗನ್ನ ಟ್ರಿಗ್ಗರ್ ಅದುಮಿಬಿಟ್ಟಿದ್ದ. ಆಗ ಹಟಾತ್ ಗುಂಡು ಹಾರಿಬಿಟ್ಟಿತ್ತು. ವೃದ್ಧ ತೀರಾ ಗಾಬರಿಗೊಂಡು ಬಿಟ್ಟ. ಆದರೆ ಅವನ ಗುರಿ ತಪ್ಪಿಬಿಟ್ಟಿತ್ತು. ಹೆಂಡತಿಗೆ ತಾಗದೇ ಗುರಿ ತಪ್ಪಿ ಹಾರಿಹೋದ ಗುಂಡು ಕಿಟಕಿಯ ಮೂಲಕ ಹೊರ ಹಾರಿ 10ನೇ ಮಹಡಿಯಿಂದ ಆತ್ಮಹತ್ಯೆಗಾಗಿ ಕೆಳ ಹಾರಿ ಬೀಳುತ್ತಿದ್ದ ರೋನಾಲ್ಡ್ ಓಪಸ್ನ ತಲೆಗೆ ಹೋಗಿ ಬಡಿದಿತ್ತು ! 

      ರೋನಾಲ್ಡ್ ಓಪಸ್ ಆಕಸ್ಮಿಕ ಗುಂಡು ಹಾರಾಟಕ್ಕೆ ಬಲಿಯಾಗಿ ತಕ್ಷಣ ಸತ್ತಿದ್ದ. ಆದರೆ ಕಾನೂನಿನ ಪ್ರಕಾರ ಒಬ್ಬರನ್ನು ಕೊಲ್ಲಲ್ಲೆಂದು ಉದ್ದೇಶಿಸಿ ಹಾರಿಸಿದ ಗುಂಡು ಆ ಒಬ್ಬರ ಬದಲಿಗೆ ಇನ್ನೊಬ್ಬರಿಗೆ ತಾಗಿ ಆ ಇನ್ನೊಬ್ಬ ಸತ್ತರೂ ಸಹಾ ಅದು ಕೊಲೆ ಅಪರಾಧವೇ ಆಗುತ್ತದೆ. ಹಾಗಾಗಿ ಕೋಣೆಯಲ್ಲಿದ್ದ ವೃದ್ಧ ಸಿಟ್ಟಿನ ಭರದಲ್ಲಿ ಹೆಂಡತಿಯನ್ನು ಹೆದರಿಸಲು ಗುಂಡು ಹಾರಿಸಿದ್ದರೂ, ಇನ್ನೊಬ್ಬರ ಕೊಲೆಗೆ ಕಾರಣವಾಗಿ ಅಪರಾಧಿಯಾಗಿದ್ದ !

       ಪಾಪ, ಮುದುಕ ಕೊಲೆ ಆರೋಪ ಎದುರಿಸಿದ್ದ. ಅವನ ಮೇಲೆ ಹಠಾತ್ ಈ ಆರೋಪ ಬಂದಾಗ  ಗಂಡ - ಹೆಂಡತಿ ಇಬ್ಬರೂ ಕಂಗಾಲು ! ಅವರಿಬ್ಬರೂ ಒಂದೇ ಮಾತು ಗಟ್ಟಿಯಾಗಿ ಹೇಳಿದ್ದರು. ಶಾಟ್ಗನ್ನಲ್ಲಿ ಗುಂಡು ಇರಲೇ ಇಲ್ಲ ಎಂದು ಖಚಿತವಾಗಿ ತಿಳಿದೇ ಟ್ರಿಗ್ಗರ್ ಅದುಮಿದ್ದು ಎಂತ. ಹೀಗೆ ಅನ್ಲೋಡೆಡ್ ಗನ್ನಿಂದ ಈ ಮುದುಕ ತನ್ನ ಹೆಂಡತಿಗೆ ಗುರಿ ಮಾಡಿ ಹೆದರಿಸುವುದು ತೀರಾ ಮಾಮೂಲು ಎಂದು ಇಬ್ಬರೂ ಹೇಳಿದರು. ತನಗೆ ಅವಳನ್ನು ಕೊಲ್ಲುವ ಉದ್ದೇಶವೇ ಇರಲಿಲ್ಲ ಎಂದ ಆತ. ಹಾಗಿದ್ದರೆ ರೋನಾಲ್ಡ್ ಓಪಸ್ ಸತ್ತದ್ದು ಆಕಸ್ಮಿಕವಾಗಿ - ಅದೂ, ಶಾಟ್ಗನ್ ಆಕಸ್ಮಿಕವಾಗಿ ವೃದ್ಧನಿಗೆ ತಿಳಿಯದೇ ಲೋಡ್ ಆಗಿತ್ತೆಂದುಕೊಂಡರೂ ! 

        ತನಿಖೆ ಮುಂದರಿದಂತೆ ಈ ವೃದ್ಧ ದಂಪತಿಯ ಮಗನೇ ವೃದ್ಧನ ಶಾಟ್ಗನ್ಗೆ ಗುಂಡು ತುಂಬಿಸುತ್ತಿದ್ದುದನ್ನು ಕಂಡಿದ್ದೆ ಎಂದ ಒಬ್ಬ ಪ್ರತ್ಯಕ್ಷದರ್ಶಿ ಸಾಕ್ಷಿಗಾರ. ಅದು ಈ ಘಟನೆ ನಡೆಯುವ ಆರು ವಾರಗಳ ಮುಂಚೆ. ಕಾರಣ - ಈ ಮುದಿ ತಾಯಿ ತನ್ನ ಈ ಮಗನಿಗೆ ಮಾಮೂಲಿನಂತೆ ಕೊಡುವ ಖಚರ್ಿನ ಹಣ ಕೊಡುವುದನ್ನು ನಿಲ್ಲಿಸಿದ್ದಳು. ಮಗನಿಗೆ ಇದರಿಂದಾಗಿ ಅಮ್ಮನ ಮೇಲೆ ವಿಪರೀತ ಸಿಟ್ಟು, ದ್ವೇಷ ಉಂಟಾಗಿತ್ತು. ಅಪ್ಪ ಆಗಿಂದಾಗ್ಗೆ ಶಾಟ್ಗನ್ ಹಿಡಿದು ಅಮ್ಮನನ್ನು ಬೆದರಿಸುತ್ತಲಿರುವುದನ್ನು ಈ ಮಗ ಕಂಡಿದ್ದ. ಅಪ್ಪನ ಕೈಯಲ್ಲಿ ಅಮ್ಮ ಸತ್ತುಬಿಡಲಿ ಎಂದೇ ಆತ ಶಾಟ್ಗನ್ಗೆ ಗುಂಡು ತುಂಬಿಸಿಟ್ಟಿದ್ದ, ಯಾರಿಗೂ ತಿಳಿಯದಂತೆ. ಅಪ್ಪನೇ ಅಮ್ಮನನ್ನು ಕೊಂದ ಹಾಗಾಗುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿತ್ತು. 

        ಹೀಗಾಗಿ ನಿಜವಾದ ಅಪರಾಧಿ ಯಾರು? ಶಾಟ್ಗನ್ಗೆ ಗುಂಡು ತುಂಬಿಸಿದ ಮಗನಿಗೆ ಅದು ಕೊಲ್ಲಲಿಕ್ಕಾಗಿ ಎಂಬುದು ತಿಳಿದಿದ್ದ ಕಾರಣ ವಾಸ್ತವವಾಗಿ ಆತ ಸ್ವತಃ ಗುಂಡು ಹಾರಿಸದಿದ್ದರೂ ಕೊಲೆಗೆ ಆತನೇ ಕಾರಣನಾಗಿಬಿಟ್ಟ. ಅವನೇ ಅಪರಾಧಿಯಾಗಿಬಿಟ್ಟ. ಹಾಗಾಗಿ ಈಗ ರೋನಾಲ್ಡ್ ಓಪಸ್ನ ಕೊಲೆಗೆ ಕಾರಣ ಆ ವೃದ್ಧನಲ್ಲ - ಆ ವೃದ್ಧ ದಂಪತಿಯ ಮಗನೇ ಎಂಬುದು ನಿರ್ವಿವಾದವಾಗಿ ಕಂಡುಬಂತು. ವೃದ್ಧ ದಂಪತಿ ಕೊಲೆ ಆರೋಪದಿಂದ ಬಚಾವಾದರು ! 
-
ಆದರೆ ಅಚ್ಚರಿ ಇರುವುದು ಮುಂದಿನ ಕಥೆಯಲ್ಲಿ
ತನಿಖೆ ಮುಂದರಿದಾಗ - ಈಗ ಮೃತನಾದ ರೋನಾಲ್ಡ್ ಓಪಸ್ನೇ ಈ ವೃದ್ಧ ದಂಪತಿಯ ಮಗ ಎಂಬ ಸಂಗತಿ ಗೊತ್ತಾಯಿತು. ತನ್ನ ಅಮ್ಮನನ್ನು ಸಾಯಿಸುವ ತನ್ನ ಯತ್ನ ಇನ್ನೂ ಫಲಿಸಲಿಲ್ಲವಲ್ಲ ಎಂಬ ಕಾರಣಕ್ಕೆ ದಿನೇ ದಿನೇ ಹತಾಶಭಾವ ತಾಳಿದ್ದ ಈ ಮಗ. ಹಾಗಾಗಿ ಇದೇ ಹತಾಶೆ ಖಿನ್ನತೆಗೆ ತಿರುಗಿ ಮಾಚರ್್ 23ರಂದು ಆತ್ಮಹತ್ಯೆಗೆ ಪ್ರೇರೇಪಿಸಿದಾಗ, ಈ ಮಗ 10ನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ  ಎಳಸಿದ್ದ. ಅವನೇ 9ನೇ ಅಂತಸ್ತು ದಾಟಿ ಬರುತ್ತಿದ್ದಾಗ ಕಿಟಕಿಯಿಂದ ತೂರಿ ಬಂದ ಗುಂಡಿಗೆ ಬಲಿಯಾಗಿದ್ದ. ಹಾಗಾಗಿ ಈ ಮಗ - ರೋನಾಲ್ಡ್ ಓಪಸ್ - ತನ್ನನ್ನು ತಾನೇ ಕೊಲೆ ಮಾಡಿಕೊಂಡು ಬಿಟ್ಟಿದ್ದ ! ಅಂತೂ ಕೊನೆಗೆ ವೈದ್ಯಕೀಯ ಪರೀಕ್ಷಕರು ಈ ಪ್ರಕರಣವನ್ನು 'ಆತ್ಮಹತ್ಯೆ' ಎಂದು ತೀಮರ್ಾನಿಸಿ ಮುಗಿಸಿಬಿಟ್ಟರು !

ಅಸೋಸಿಯೇಟೆಡ್ ಪ್ರೆಸ್ ಪ್ರಸರಿಸಿದ ನೈಜ ಘಟನೆಯ ಸುದ್ದಿ ಇದು.


ಥಾಲಾಂಡ್ ಪ್ರವಾಸಕಥನ: ಚಪಲ ತೀರಿಸಿಕೊಳ್ಳಲು ಕುಪ್ರಸಿದ್ಧ ಪಟ್ಟಾಯದ ವಾಕಿಂಗ್ ಸ್ಟ್ರೀಟ್


'ಪಟ್ಟಾಯಕ್ಕೆ ಹೋದವರು ವಾಕಿಂಗ್ ಸ್ಟ್ರೀಟ್ಗೆ ಹೋಗಲು ಮರೆಯಬೇಡಿ, ಅಲ್ಲಿ ಬಾರೀ ಗಮ್ಮತ್ ಇತ್ ಕಾಣಿ' ಎಂದಿದ್ದರು ಮಿತ್ರ ಭಾಸ್ಕರ ಭಟ್ಟರು.
           'ಏನಿದೆ ಅಂಥಾದ್ದು - ಅಲ್ಲಿ, ವಾಕಿಂಗ್ ಸ್ಟ್ರೀಟ್ನಲ್ಲಿ?' ಎಂದು ದಾರಾಳನ್ನು ಕೇಳಿದಾಗ, 
               'ಏನಿದೆ ಎಂತ ಕೇಳುವ ಬದಲು ಏನಿಲ್ಲ ಎಂತ ಕೇಳಿ' ಎಂದಳು ತುಂಟತನದಿಂದ.
 'ನಿಮಗೆ, ಪ್ರವಾಸಿಗಳಿಗೆ ಬೇಕಾದದ್ದೆಲ್ಲಾ ಅಲ್ಲೇ ಇದೆ. ಗಮ್ಮತ್ತು ಮಾಡಲು ಬರುವವರಿಗೆ ವಾಕಿಂಗ್ ಸ್ಟ್ರೀಟ್ ಸ್ವರ್ಗ ಇದ್ದಂತೆ' ಅಂದಳು.
'ಹಾಗೆಂದರೆ ?' ಎಂದಾಗ, 'ಹಾಗೆಂದರೆ ವಾಕಿಂಗ್ ಸ್ಟ್ರೀಟ್ನಲ್ಲಿ ನೀವು ಬಟ್ಟೆ ಬಿಚ್ಚಿಹಾಕಿ ಬತ್ತಲೆಯಾಗಿ ನಡೆದರೂ ಕೇಳುವವರಿಲ್ಲ' ಎಂದಳಾಕೆ ಮತ್ತಷ್ಟು ತುಂಟತನದಿಂದ.
'ಅದಕ್ಕೆ ಏಕೆ ವಾಕಿಂಗ್ ಸ್ಟ್ರೀಟ್ ಎಂತ ಹೆಸರು?' ಎಂದು ಕೇಳಿದರೆ 'ಅದು ರಾತ್ರಿ ಮಾತ್ರ ವಾಕಿಂಗ್ ಸ್ಟ್ರೀಟ್' ಎಂದಳು.

ವಾಹನಗಳಿಲ್ಲದ ದಾರಿ 
'ಹಗಲೆಲ್ಲಾ ಆ ದಾರಿಯಲ್ಲಿ ವಾಹನಗಳ ಸಂಚಾರ ಇದೆ. ಆದರೆ ರಾತ್ರಿ 7ರ ನಂತರ ಬೆಳಗ್ಗಿನ ಜಾವ 3ರ ವರೆಗೆ ವಾಹನ ಸಂಚಾರ ನಿಷಿದ್ಧ. ಯಾರು ಬೇಕಾದರೂ ವಾಹನಗಳ ಭಯವಿಲ್ಲದೇ ನಡೆದಾಡಬಹುದು, ಆಚೀಚೆ ನೋಡುತ್ತಾ. ಅದಕ್ಕಾಗಿ ಆ ಹೆಸರು - ವಾಕಿಂಗ್ ಸ್ಟ್ರೀಟ್. ಯಾಕೆಂದರೆ ರಾತ್ರಿಯಾಗುತ್ತಲೇ ಇಲ್ಲಿನ ನೈಟ್ಲೈಫ್ ತೆರೆದುಕೊಳ್ಳುತ್ತದೆ. ವಾಕಿಂಗ್ ಸ್ಟ್ರೀಟ್ನಲ್ಲಿ ದಾರಿಬದಿಯ ಎಲ್ಲಾ ಅಂಗಡಿಗಳು, ಬಾರ್ಗಳು, ಡಿಸ್ಕೋಗಳು, ಗೋಗೋಬಾರ್ಗಳು, ಕ್ಯಾಬರೆ ಶೋಗಳು, ಮಜಾನೀಡುವ ಮಂದಿರಗಳು, ಮದ್ಯಪಾನ ಮಂದಿರಗಳು, ಮಜ್ಜನ ಮಂದಿರಗಳು ಮತ್ತು ನಿಮಗೆ ಇನ್ನೂ ಏನೆಲ್ಲ ಬೇಕೋ ಅವೆಲ್ಲಾ ಝಗಝಗಿಸುತ್ತಿರುತ್ತವೆ. ಜತೆಗೆ ಹಾದಿಬದಿಯಲ್ಲಿ ಅರೆಬರೆ ಬಟ್ಟೆ ಧರಿಸಿದ ಮಾದಕ ನವ ಯುವತಿ(ಕ)ರು ಕೈಬೀಸಿ ನಮ್ಮಲ್ಲಿಗೆ ಬನ್ನಿ, ನಮ್ಮಲ್ಲಿಗೆ ಬನ್ನಿ ಎನ್ನುತ್ತಾ ವೈಯಾರದಿಂದ ಕರೆಯುತ್ತಿರುತ್ತಾರೆ. ಬೋಡರ್ುಗಳನ್ನು ಹಿಡಿದುಕೊಂಡಿರುತ್ತಾರೆ. ಅವುಗಳಲ್ಲಿ ರೇಟುಗಳೂ ಸಹಾ ಇರುತ್ತವೆ. ಅವು ಯಾವ ರೇಟುಗಳು ಎಂದು ಮಾತ್ರ ಕೇಳಬೇಡಿ. ನೃತ್ಯ ಮಂದಿರಗಳ ಗಾಜಿನ ಬಾಗಿಲುಗಳ ಹಿಂದಿನಿಂದಲೂ ಅರೆಬತ್ತಲೆ ನರ್ತಕಿಯರು ಉನ್ಮಾದದಿಂದ ಕುಣಿಯುತ್ತಾ ದಾರಿಹೋಕರನ್ನು ಸೆಳೆಯುತ್ತಿರುತ್ತಾರೆ. ವಾಹನಗಳ ನಡುವೆ ಇವನ್ನೆಲ್ಲಾ ನೋಡುತ್ತಾ ಸಾಗಿದರೆ ಪ್ರವಾಸಿಗಳು ಅಪಘಾತಕ್ಕೆ ತುತ್ತಾಗಿ ಪ್ರಾಣಕ್ಕೇ ಸಂಚಕಾರ ಉಂಟಾಗುವ ಭಯ ಇರುವುದರಿಂದ ರಾತ್ರಿ 7ರ ನಂತರ ಬೆಳಗ್ಗಿನ ಜಾವ 3ರ ವರೆಗೆ ಈ ರಸ್ತೆ ಬರೇ ನಡೆದಾಟಕ್ಕೇ ಸೀಮಿತ - ವಾಹನಗಳಿಲ್ಲ' ಎಂದು ವಿವರಿಸಿದಳು ದಾರಾ.

ಎಲ್ಲಾ ತೋರಿಸುವ ಕ್ಯಾಬರೆ ಶೋ
'ಕ್ಯಾಬರೆ ಶೋದಲ್ಲಿ ಎಲ್ಲಾ ತೋರಿಸುತ್ತಾರಾ?' ಎಂದು ನಮ್ಮಲ್ಲೊಬ್ಬರು ಕುತೂಹಲ ತಡೆಯಲಾರದೆ ಕೇಳಿದ್ದಕ್ಕೆ ದಾರಾ ನಕ್ಕುಬಿಟ್ಟಳು. 'ನಾನು ಹೇಳಿಯಾಯಿತು, ಗಮ್ಮತ್ತು ಮಾಡುವವರಿಗೆ ಹೇಳಿಸಿದ ಜಾಗ. ನಿಮಗೆ ಬೇಕಾದ್ದೆಲ್ಲಾ ಅಲ್ಲಿ ಸಿಗುತ್ತದೆ. ಬೇಕಾದರೆ ನೀವೇ ಹೋಗಿ ನೋಡಿ' ಎಂದು ಹೇಳುತ್ತಾ, 'ಪಟ್ಟಾಯದಲ್ಲಿ ಸುಂದರ ಬೀಚ್ ಕೂಡಾ ಇದೆ, ಅದರ ಸಂಗತಿ ಕೇಳಿ' ಎಂದರೆ ಯಾರಿಗೂ ವಾಕಿಂಗ್ ಸ್ಟ್ರೀಟ್ ಬಿಟ್ಟು ಬೀಚ್ ಬಗ್ಗೆ ಪ್ರಶ್ನೆ ಕೇಳುವ ಆಸಕ್ತಿಯೇ ಉಳಿದಿರಲಿಲ್ಲ.

ಪಟ್ಟಾಯದ ವಿಲಾಸಕೇರಿ !
ಹೀಗೆ ಆಮೋದ ಪ್ರಮೋದಗಳ ಪ್ರದೇಶ ಈ ವಾಕಿಂಗ್ ಸ್ಟ್ರೀಟ್. ಕಾಮಕ್ರೀಡೆಗಳಿಗೆ ಕುಪ್ರಸಿದ್ಧ. ನಮ್ಮಲ್ಲಾದರೆ 'ವಿಲಾಸಕೇರಿ' ಎಂದು ನಾಮಕರಣ ಮಾಡುತ್ತಿದ್ದರೇನೋ. ಎಲ್ಲಿಯವರೆಗೆ ಎಂದರೆ ಕ್ಯಾಬರೆ ಶೋ ನೆಪದಲ್ಲಿ ನರ್ತಕಿಯರು ಒಂದೊಂದೇ ಬಟ್ಟೆ ಕಳಚಿ ಪೂರಾ ನಗ್ನರಾಗುತ್ತಾ, ಅದನ್ನೇ ಕಾಣಲೆಂದು ಹಣತೆತ್ತು ಹಾತೊರೆದು ಒಳಬಂದು ಮದಿರೆಯ ಅಮಲಲ್ಲಿರುವ ಪ್ರವಾಸಿಗರಿಗೆ ರೋಮಾಂಚನ ಉಂಟುಮಾಡುತ್ತಾರೆ. ಅಷ್ಟು ಹೊತ್ತಿಗೆ ವೇದಿಕೆಯ ಪಕ್ಕದಿಂದ ನರ್ತಕನೊಬ್ಬ ಧಾವಿಸಿ ಬರುತ್ತಾನೆ. ಆತನೂ ಪೂರಾ ಹುಟ್ಟುಡುಗೆಯಲ್ಲೇ ಇರುತ್ತಾನೆ. ತೀರಾ ಉದ್ರಿಕ್ತನಾದವನಂತೆ ಕಾಣಿಸಿಕೊಳ್ಳುತ್ತಾನೆ. ಇವೆಲ್ಲ ನಿಜವೋ, ಕೃತಕವೋ ಎಂದು ಗೊತ್ತಾಗುವುದರೊಳಗಾಗಿ ಆತ ಬೆತ್ತಲಾದ ತರುಣಿಯನ್ನು ಸೇರಿಕೊಂಡಿರುತ್ತಾನೆ. ಎಲ್ಲರೆದುರಿಗೇ ಈ ಅಶ್ಲೀಲವಾದರೂ ನೃತ್ಯ ಸ್ವರೂಪದ ಮೈಥುನಕ್ರಿಯೆ ಸಾಗುತ್ತಿರುತ್ತದೆ.

ಪಲ್ಲಂಗಶೂರರ ಪರಾಕ್ರಮ 
ಒಮ್ಮೊಮ್ಮೆ ಈ ನೃತ್ಯವೆಂಬ ಕೊಳಕು ಕಾರ್ಯಕ್ರಮ ಎಷ್ಟು ಕೆಟ್ಟದಾಗಿರುತ್ತದೆಂದರೆ ಅವರಿಬ್ಬರೂ ಉರುಳುತ್ತಾ ಬಂದು ಪ್ರೇಕ್ಷಕರ ಮೈಮೇಲೇ ಬೀಳುತ್ತಾರೆ. ಹೀಗೆ ತಮ್ಮ ಪ್ರಚಂಡ ಕಾಮಸ್ವರೂಪವನ್ನು, ಲೈಂಗಿಕ 'ಶಕ್ತಿ'ಯನ್ನು ಬಹಿರಂಗವಾಗಿ ವಿಜೃಂಭಿಸುತ್ತಾರೆ. ಅದು ಸಾಲದೆಂಬಂತೆ ಪ್ರೇಕ್ಷಕರಿಗೂ ಪಂಥಾಹ್ವಾನ ನೀಡುತ್ತಾರೆ. ನಾವು ಮಾಡಿದ್ದನ್ನು ನೀವು ಮಾಡಬಲ್ಲಿರಾ? ಎಂತ ಇದು ಅವರ ಮಾಮೂಲಿ ಟ್ರಿಕ್ಕು. ಜನಕ್ಕೆ ಕಿಕ್ ಕೊಡಲು, ಥ್ರಿಲ್ ಉಂಟುಮಾಡಲು ಹೀಗೆಲ್ಲಾ ಮಾಡುತ್ತಾರೆ. ಅದು ಗೊತ್ತಾಗದೇ, ಅಮಲಿನಲ್ಲಿರುವ ಕೆಲವು ಉತ್ಸಾಹಿ ತರುಣ ಪ್ರವಾಸಿಗಳು ಆಕರ್ಷಣೆಗೆ ಬಲಿಬಿದ್ದು ತಮ್ಮ ಪ್ರತಾಪ ತೋರಲು ವೇದಿಕೆ ಹತ್ತುತ್ತಾರೆ. ಅಲ್ಲಿ ಆತನನ್ನು ಸಂಪೂರ್ಣ ವಿವಸ್ತ್ರಗೊಳಿಸಲಾಗುತ್ತದೆ. ಆತನನ್ನು ಹುಸಿ ಕಾಮಕ್ರೀಡೆಯಲ್ಲಿ ತೊಡಗಿಸಿದಂತೆ ಮಾಡಿ ಹಿಗ್ಗಾಮುಗ್ಗಾ ಬೀಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿ ಆತ ಯಾತಕ್ಕೂ ಆಗದವ, ತಮ್ಮದೇ ಪರಾಕ್ರಮ ಎಂತ ಘೋಷಿಸಿ, ತಾವೇ ಪಲ್ಲಂಗಶೂರರು ಎಂದು ಬಿಂಬಿಸಿ, ವಿಜೃಂಭಿಸಿ ಚಪ್ಪಾಳೆ ಗಿಟ್ಟಿಸುತ್ತಾರೆ. ಪಾಪ, ಆ ಬಡಪಾಯಿ ಪ್ರವಾಸಿಗ ಅವನತ ಮುಖ ಹಾಕಿಕೊಂಡು, ಬಟ್ಟೆಬರೆ ಸಂಗ್ರಹಿಸಿಕೊಂಡು, ಕೆಳಕ್ಕಿಳಿದು ಬರುವ ದೃಶ್ಯ ತೀರಾ ಯಾತನಾಮಯ. ಇವೆಲ್ಲಾ ಪ್ರವಾಸಿ ಮಹಿಳೆಯರು - ಮಹನೀಯರ ಸಮ್ಮುಖವೇ ನಡೆಯುತ್ತವೆ. ಮತ್ತೆ ಮತ್ತೆ ಇದನ್ನೇ ನೋಡಿ ಆನಂದಿಸಲು ಹೋಗುವ ವಿಕೃತ ಮನಸ್ಸಿನ ಜನರಿರುತ್ತಾರೆ.

ಚಪಲ ತೀರಿಸಲು ವಾಕಿಂಗ್ ಸ್ಟ್ರೀಟ್ 
ಒಟ್ಟಿನಲ್ಲಿ ಬದುಕು ಸಪ್ಪೆ ಎನ್ನಿಸಿದವರಿಗೆಲ್ಲಾ, ಸ್ವಲ್ಪ ಖಾರ, ಮಸಾಲೆ ಬೇಕೆನಿಸಿದಾಗ ಪಟ್ಟಾಯಕ್ಕೆ ಬರುತ್ತಾರೆ, ವಾಕಿಂಗ್ ಸ್ಟ್ರೀಟ್ಗೆ ಹೋಗುತ್ತಾರೆ, ಚಟ ತೀರಿಸಿಕೊಂಡು, ಚಪಲ ಕಡಿಮೆಯಾದಾಗ, ದುಡ್ಡೂ ಕರಗಿಸಿಕೊಂಡು ಅದೇನೋ ಗಮ್ಮತ್ತು ಮಾಡಿದೆವೆಂಬ ಭ್ರಮೆಯಿಂದ ವಾಪಾಸಾಗುತ್ತಾರೆ. ಇದು ಪಟ್ಟಾಯದ ವಾಕಿಂಗ್ ಸ್ಟ್ರೀಟ್ನ ಸೂಕ್ಷ್ಮ ಕಥೆ.


 
© Copyright 2013-14 ಕುಂದಾಪ್ರ ಡಾಟ್ ಕಾಂ | ಅನುಭವದ ಆಳದಿಂದ All Rights Reserved.
Template Design by Herdiansyah Hamzah | Published by Kundapra Dot Com