ಥಾಲ್ಯಾಂಡ್ನಲ್ಲಿನ ಏಳು/ಹನ್ನೊಂದುಗಳು

         'ನಿಮ್ಮ ದೇಶದಲ್ಲಿ 7/11 (ಸೆವೆನ್ ಇಲೆವನ್) ಉಂಟಾ?' ಎಂದು ಬಸ್ಸಿನಲ್ಲಿದ್ದ ನಮ್ಮನ್ನೆಲ್ಲ ಕೇಳಿದಳು, ಪ್ರವಾಸಿ ಸಖಿ ದಾರಾ. ನಾವೆಲ್ಲ ಪಟ್ಟಾಯ (ಥಾಲ್ಯಾಂಡ್) ದಲ್ಲಿನ ಭಾರತೀಯ ಹೋಟೇಲ್ಗೆ ರಾತ್ರಿ ಊಟಕ್ಕೆ ತೆರಳುತ್ತಿದ್ದೆವು.
       'ಸೆವೆನ್ ಇಲೆವನ್ - ಹಾಗೆಂದರೆ?' ಎಂದು ಕೇಳಿದೆವು. 'ಏಳು,ಹನ್ನೊಂದು ಗೊತ್ತಿಲ್ಲವಾ ಮಾರಾಯ್ರೆ, ಎಂತದಾದ್ರೂ ಎಡವಟ್ಟು ಮಾಡ್ಕಂಡ್ರೆ, ಅಧ್ವಾನ ಆದ್ರೆ ಹೇಳ್ತ್ರಲ್ಲ - ಏಳು, ಹನ್ನೊಂದಾಯ್ತು ಅಂತ. ಅದನ್ನೇ ಅವಳು ಇಂಗ್ಲೀಷ್ನಲ್ಲಿ ಸೆವೆನ್/ಇಲೆವನ್ ಅಂತ್ಲು' ಎಂದು ನಮ್ಮ ತಂಡದವರೊಬ್ಬರು ಜೋಕು ಮಾಡಿದಾಗ ಎಲ್ಲರೂ ನಕ್ಕುಬಿಟ್ಟರು. ಅವಳಿಗೆ ಅದಾವುದೂ ಅರ್ಥ ಆಗದೇ ಬಸ್ಸಿನಲ್ಲಿ ಇಣುಕಿ ಹೊರಕ್ಕೆ ತೋರಿಸಿದಳು. 'ನೋಡುತ್ತಾ ಇರಿ. ಒಂದೊಂದು ರಸ್ತೆಯಲ್ಲಿ ಎಷ್ಟು ಸೆವೆನ್/ಇಲೆವನ್ಗಳು ಇದ್ದಾವೆ ಎಂತ !' ಆಗಲೂ ನಮಗದು ಅರ್ಥವಾಗಲಿಲ್ಲ. 'ಓ - ಅಲ್ಲಿ ನೋಡಿ. ಓ ಆ ಅಂಗಡಿ ! ಅದರ ಬೋಡರ್ು ನೋಡಿ. ಏನು ಬರೆದಿದೆ ? ಓದಿ' ಎಂದಳು. ನಾವೆಲ್ಲ ಕಿಟಕಿಯಿಂದ ಇಣುಕಿ ನೋಡಿ ಒಕ್ಕೊರಲಿನಿಂದ ಕೂಗಿದೆವು 'ಸೆವೆನ್/ಇಲೆವನ್ !'

ರಾತ್ರಿ - ಹಗಲಿನ ಅಂಗಡಿ
         'ಏನದು ಹಾಗೆಂದರೆ ?' ಎಂದು ಅವಳನ್ನೇ ಕೇಳಿದೆವು. ಹಾಗೆ ನೋಡುತ್ತಾ ಹೋದಂತೆ ಒಂದೇ ರಸ್ತೆಯಲ್ಲಿ ಅದೇ ಸೆವೆನ್/ಇಲೆವನ್ ಹೆಸರಿನ ಬೋಡರ್್ ಇದ್ದ ಹತ್ತಾರು ಅಂಗಡಿಗಳನ್ನು ಹಾದು ಹೋದೆವು. 7 ಎಂಬುದನ್ನು ಕೇಸರಿ ಬಣ್ಣದಲ್ಲಿ ಅಂಕೆಯಲ್ಲಿ ಬರೆದಿದ್ದರೆ, ಆ 7 ಅಂಕೆಯ ಮೇಲೆ ಅಡ್ಡವಾಗಿ ಇಂಗ್ಲೀಷಿನಲ್ಲಿ ಹಸಿರು ಬಣ್ಣದಲ್ಲಿ 'ಇಲೆವನ್' ಎಂದು ಬರೆದಿರುತ್ತಿತ್ತು. ಇದೇನೋ ನಿಗೂಢವಿರಬೇಕು ಎನ್ನಿಸಿತು. ಅವಳೇ ವಿವರಿಸಿದಳು. 'ಥಾಲ್ಯಾಂಡಿನಲ್ಲಿ ನೀವು ಎಲ್ಲೇ ಹೋಗಿ, ಸೆವೆನ್/ಇಲೆವನ್ ಅಂಗಡಿಗಳಿಲ್ಲದ ಊರಿಲ್ಲ - ರಸ್ತೆಯಿಲ್ಲ. ಅವೆಲ್ಲ ಅಷ್ಟು ಜನಪ್ರಿಯ. ಎಷ್ಟೆಂದರೆ ಸೆವೆನ್/ಇಲೆವನ್ ನಮ್ಮ ಬದುಕಿನ ಒಂದು ಭಾಗವಾಗಿಬಿಟ್ಟಿದೆ' ಎಂದಾಕೆ ಹೇಳಿ, 'ಸೆವೆನ್/ಇಲೆವನ್ ಒಂದು ಥರಾ ಎ ಟು ಝಡ್ ಸಾಮಾನು ಸಿಗುವ ಅಂಗಡಿ ಇದ್ದ ಹಾಗೆ' ಎಂದಳು. 'ಅಂದರೆ ? ಜೀನಸಿನ ಅಂಗಡಿಯಾ ? ಕಟ್ಲೇರಿ ಅಂಗಡಿಯಾ ? ಮದ್ದಿನಂಗಡಿಯಾ ?' ಎಂತ ತಲೆಗೊಬ್ಬರು ಪ್ರಶ್ನೆ ಹಾಕಿದರು. 'ಅವೆಲ್ಲವೂ ಒಂದೇ ಅಂಗಡಿಯಲ್ಲಿ ಸಿಕ್ಕುವುದಕ್ಕೆ ಸೆವೆನ್/ಇಲೆವನ್ ಎನ್ನುತ್ತಾರೆ. ನಿಮಗೆ ಹಾಲು, ಬ್ರೆಡ್ಡು, ಮೊಟ್ಟೆ ಬೇಕಾ, ಬಿಸ್ಕೀಟ್ ಬೇಕಾ, ಚಾಕ್ಲೇಟ್ ಬೇಕಾ, ಬೀರು, ವೈನು ಬೇಕಾ, ಔಷಧಿ ಬೇಕಾ, ಬ್ಲೇಡು, ಸೋಪು, ಟವಲು, ತಿಂಡಿ, ಊಟ, ತರಕಾರಿ, ಹಣ್ಣು, ಕೊಡೆ, ಪೆನ್ನು, ಪೆನ್ಸಿಲು ಏನು ಬೇಕೋ ಹೇಳಿ - ಅದೆಲ್ಲಾ ಈ ಅಂಗಡಿಯಲ್ಲಿ ಸಿಕ್ತದೆ' ಎಂದಾಕೆ ಹೇಳಿದಾಗ 'ನಮ್ಮಲ್ಲಿ ಬಿಗ್ಬಝಾರ್ ಇದ್ದ ಹಾಗೆ' ಎಂದೊಬ್ಬರು ದನಿಗೂಡಿಸಿದರು. 'ರಾತ್ರಿ ಎಷ್ಟು ಹೊತ್ತಿನ ವರೆಗೆ ಈ ಅಂಗಡಿ ತೆರೆದಿರುತ್ತದೆ? ಎಂದೊಬ್ಬರು ಕೇಳಿದರು. ಅದಕ್ಕವಳು ನಕ್ಕು ಹೇಳಿದಳು - 'ಅದೇ ಸೆವೆನ್/ಇಲೆವನ್ಗಳ ಸ್ಪೆಶಾಲಿಟಿ. ಈ ಅಂಗಡಿಗಳು ಮುಚ್ಚುವುದೆಂಬುದೇ ಇಲ್ಲ. ಹಗಲೂ - ರಾತ್ರಿ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ತೆರೆದುಕೊಂಡೇ ಇರುತ್ತವೆ. ಮಧ್ಯ ರಾತ್ರಿಯಲ್ಲಿ ಸಹಾ ನಿಮಗೇನಾದರೂ ಬೇಕಾದರೆ ಯಾವ ಬೀದಿಗೇ ಹೋಗಿ ಅಲ್ಲಿ ಸೆವೆನ್/ಇಲೆವನ್ಗಳು ತೆರೆದೇ ಇರುವುದನ್ನು ಕಾಣಬಹುದು. ಬೇಕಾದ್ದನ್ನು ಕೊಳ್ಳಬಹುದು' ಎಂದಾಗ ನಮ್ಮವರಿಗೆಲ್ಲಾ ವಿಸ್ಮಯದ ಜತೆಗೆ ಕುತೂಹಲವೂ ತೆರೆದುಕೊಂಡಿತು. 'ರಾತ್ರಿಯಿಡೀ ತೆರೆದಿರ್ತದಾ ?' ಎಂತ ನಾವೆಲ್ಲಾ ಒಟ್ಟಿಗೇ ಕೇಳಿದಾಗ 'ಖಂಡಿತವಾಗಿ' ಎಂದು ಹೇಳಿದ ಅವಳು ತುಂಟತನದಿಂದ 'ರಾತ್ರಿ ಎರಡು ಗಂಟೆಗೆ ನಿಮಗೊಂದು ಕಾಂಡೋಮ್ ಬೇಕೆಂತಾದರೆ, ತಕ್ಷಣ ಹೋಟೇಲಿಂದ ಹೊರಬನ್ನಿ, ಅಲ್ಲೇ ಹತ್ತಿರದ ಸೆವೆನ್/ಇಲೆವನ್ನಲ್ಲಿ ಕೇಳಿ, ಕೊಡುತ್ತಾರೆ' ಎಂದು ಚಟಾಕಿ ಹಾರಿಸಿದಾಗ, ಬೆಪ್ಪಾಗಿ ನಗುವ ಸರದಿ ನಮ್ಮದಾಗಿತ್ತು.

ಆಪದ್ಬಾಂಧವಗಳು
        'ಒಮ್ಮೆ ನಮ್ಮ ಮನೆಗೆ ರಾತ್ರಿ ಹನ್ನೊಂದಕ್ಕೆ ನೆಂಟ್ರು ಬಂದ್ರು. ಮನೆಯಲ್ಲಿ ಊಟ ಬಡಿಸಲು ಏನೂ ಇರಲಿಲ್ಲ. ತಕ್ಷಣ ಸೆವೆನ್/ಇಲೆವನ್ಗೆ ಓಡಿದೆ. ಅತಿಥಿಗಳು ಬಂದಿದ್ದಾರೆ, ಬಿಸಿ ಬಿಸಿ ಊಟ ಪ್ಯಾಕ್ ಮಾಡಿ ಕೊಡ್ತೀರಾ ಎಂದು ಕೇಳಿದೆ. ಏನೂ ಬೇಜಾರಿಲ್ಲದೇ ಶೈತ್ಯಾಗಾರದಲ್ಲಿಟ್ಟಿದ್ದ ರುಚಿ ರುಚಿಯಾದ ಖಾದ್ಯಗಳನ್ನು, ಅನ್ನ ಸಹಿತ ಮೈಕ್ರೋವೇವ್ನಲ್ಲಿ ಬಿಸಿ ಮಾಡಿದ. ಪದಾರ್ಥಗಳ ಮೇಲೆಲ್ಲಾ ಒಂದಿಷ್ಟು ಹಸಿಮೆಣಸು, ಕೊತ್ತಂಬರಿಸೊಪ್ಪು ಕತ್ತರಿಸಿ ಹರಡಿಟ್ಟ. ಎರಡು ಲಿಂಬೆ ಹಣ್ಣು ಕತ್ತರಿಸಿ ರಸ ಹಿಂಡಿಬಿಟ್ಟ. ಘಮ ಘಮ ರುಚಿರುಚಿ ಔತಣ ತಯಾರು. ನಮ್ಮ ನೆಂಟರಿಗೆ ಖುಷಿಯೋ ಖುಷಿ. ಅಂದಿನ ದಿನವನ್ನು ನಾನು ಮರೆಯುವುದೇ ಇಲ್ಲ. ರಾತ್ರಿ ಎಷ್ಟೇ ಹೊತ್ತಾದರೂ ಇದೇ ರೀತಿಯ ನಗುಮೊಗದ ಸೇವೆ ಈ ಜನಗಳದ್ದು. ಅವರ ಮನೆಗೇ ನೆಂಟರು ಬಂದ ಹಾಗೆ ಸಂಭ್ರಮದಿಂದ ಎಲ್ಲ ರೆಡಿ ಮಾಡಿ ಕೊಡ್ತಾರೆ. ಅಂಥಾ ದುಬಾರಿ ಸಹಾ ಅಲ್ಲ. ನಮ್ಮಂತಹವರಿಗೆ ಕೈಕೆಟಕುವ ದರ. ಸ್ಟ್ಯಾಂಡಡರ್್ ಮಾತ್ರ ಉತ್ಕೃಷ್ಟ' ಎಂದುಸೆವೆನ್/ಇಲೆವನ್ಗಳನ್ನು ಹೊಗಳಿ ಹೊಗಳಿ ಇಟ್ಟಳು ದಾರಾ.

ಒಂದೊಂದು ರಸ್ತೆಯಲ್ಲಿ ಏಳೆಂಟು
       ಅದಾದ ನಂತರವೇ ನಮಗೆ ಹೋದಲ್ಲೆಲ್ಲಾ ಈ ಸೆವೆನ್/ಇಲೆವನ್ಗಳು ಕಣ್ಣಿಗೆ ಬೀಳತೊಡಗಿದ್ದು. ಆಶ್ಚರ್ಯ ಆಗುವ ರೀತಿಯಲ್ಲಿ ಒಂದೊಂದು ರಸ್ತೆಯಲ್ಲೂ ಐದಾರು, ಏಳೆಂಟು ಸೆವೆನ್/ಇಲೆವನ್ ಅಂಗಡಿಗಳು ! ಎಲ್ಲ ಒಂದೇ ನಮೂನೆಯವುಗಳು. ಕೆಲವೆಡೆ ಒಂದಕ್ಕೆ ತಾಗಿ ಒಂದು ಸಹಾ. ರಾತ್ರಿ ಇಡೀ ಝಗಮಗಿಸುವ ಲೈಟು ಹಾಕಿಕೊಂಡು ತೆರೆದೇ ಇರುವ ಅಂಗಡಿಗಳು. ಹಾಗಾಗಿ ಯಾವ ರಸ್ತೆಯಲ್ಲೂ, ಎಷ್ಟು ರಾತ್ರಿಯಲ್ಲೂ ನಿರ್ಭಯವಾಗಿ ಹೋಗಿ ಯಾರೂ ವ್ಯಾಪಾರ ಮಾಡಬಹುದು.

ಆರು ಸಾವಿರಕ್ಕೂ ಹೆಚ್ಚು ಅಂಗಡಿಗಳು
       'ನಿಮಗೆ ಆಶ್ಚರ್ಯ ಆಗಬಹುದು. ನಮ್ಮ ಥಾಲ್ಯಾಂಡ್ ದೇಶದಲ್ಲಿ ಸೆವೆನ್/ಇಲೆವನ್ ಅಂಗಡಿಗಳು ಎಷ್ಟಿವೆ ಗೊತ್ತಾ ?' ಎಂದು ಕೇಳಿದ ದಾರಾ, ನಾವು ಆಲಿಸುತ್ತಾ ಇರುವುದನ್ನು ಕಂಡು ಹೇಳಿದಳು. 'ಆರು ಸಾವಿರಕ್ಕೂ ಹೆಚ್ಚು !' ನಾವೆಲ್ಲಾ ಸ್ತಂಭೀಭೂತರಾಗಿ 'ಹಾಂ ! ಎಂದದ್ದೇ. 'ಈ ವರ್ಷ ಇನ್ನಷ್ಟು ಅಂಗಡಿಗಳು ಓಪನ್ ಆಗ್ತವಂತೆ. ಹತ್ತಿರ ಹತ್ತಿರ ಏಳು ಸಾವಿರ ಸಂಖ್ಯೆ ಮುಟ್ಟುವುದರಲ್ಲಿದ್ದಾರೆ 2013ರೊಳಗೆ' ಎಂದು ಅವಳು ಅಂಕೆ ಸಂಖ್ಯೆ ಪಠಿಸಿದಾಗ ನಾವೆಲ್ಲ ಮೂಕವಿಸ್ಮಿತರಾಗಿದ್ದೆವು. 'ಛೆ ! ರಾತ್ರಿಯಿಡೀ ಓಪನ್ ಇರುವ ಇಂಥಾ ಅಪದ್ಭಾಂಧವ ಸೆವೆನ್/ಇಲೆವನ್ಗಳು ನಮ್ಮ ದೇಶದಲ್ಲಾದರೂ ಇರಬಾರದಿತ್ತೇ ?' ಎಂದುಕೊಂಡೆವು.

ಹೊಕ್ಕೇಬಿಟ್ಟೆ ಸೆವೆನ್/ಇಲೆವನ್
         ಊಟಕ್ಕೆಂದು ಹೋದ, ಭಾರತೀಯ ಹೋಟೇಲ್ ಇದ್ದ ರಸ್ತೆಯಲ್ಲೇ ಒಂದೆರಡು ಸೆವೆನ್/ಇಲೆವನ್ಗಳು ರಾರಾಜಿಸುತ್ತಿದ್ದುವು. ರಾತ್ರಿ ಹತ್ತಾಗಿತ್ತು. ಊರಿನಿಂದ ನನ್ನ ಮೊಮ್ಮಗಳು ಮನೀಷಾ ಫೋನ್ ಮಾಡಿ 'ಅಜ್ಜಾ, ನನಗೊಂದು ಬಾಬರ್ಿಡಾಲ್ ಬೇಕು. ಅದು 'ಫ್ಯಾಶನ್, ಡಿಸಾನ್ ಡಾಲ್'. ಬರುತ್ತಾ ತರಬೇಕು, ಮರೆಯಬೇಡಿ ಮತ್ತೆ' ಎಂದು ಆಜ್ಞಾಪಿಸಿದ್ದಳು. ಪ್ರವಾಸಿ ತಾಣ ನೋಡುವ ಗಡಿಬಿಡಿಯಲ್ಲಿ ಈ ಗೊಂಬೆಯ ಸಂಗತಿ ಮರೆತೇ ಹೋಗಿತ್ತು. ಪುರಸೊತ್ತೂ ಆಗಿರಲಿಲ್ಲ. 'ಊಟ ಮುಗಿಯಲಿ, ನೋಡುವಾ' ಎಂದುಕೊಂಡು ಬೇಗ ಊಟ ಮುಗಿಸಿ ಒಂದು ಸೆವೆನ್/ಇಲೆವನ್ ಅಂಗಡಿ ಹೊಕ್ಕೇಬಿಟ್ಟೆ. ಆದರದಿಂದ ಬರಮಾಡಿಕೊಳ್ಳುವ ಹುಡುಗರು - ಚಂದಿರವದನೆಯರು. 'ವೇಲ್ಕಮ್ಮೂ' ಎಂತ ರಾಗವಾಗಿ ಹೇಳುತ್ತಾ ಕೈ ಮುಗಿದಾಗ, 'ಡಾಲ್ - ಡಾಲ್' ಎಂದೆ. ಅವರಿಗೆ ಅರ್ಥ ಆಗಲಿಲ್ಲ. ನಾನೇ ಒಂದೊಂದೇ ವಿಭಾಗ ಪರಿಶೀಲಿಸುತ್ತಾ ಹೋಗಿ ಮಕ್ಕಳ ಆಟಿಕೆ ವಿಭಾಗಕ್ಕೆ ಹೋದೆ. ಆದರೆ ಅಲ್ಲಿ ಅವಳು ಹೇಳಿದ ಬಾಬರ್ಿಡಾಲ್ ಇರಲಿಲ್ಲ. ಆಕೆ ಟಿವಿಯಲ್ಲಿ ನೋಡಿದ ಅತ್ಯಾಧುನಿಕ ಬಾಬರ್ಿಡಾಲ್ ಅದು. ಅಷ್ಟು ಬೇಗ ಥಾಲ್ಯಾಂಡ್ ತಲುಪುವ ಸಾಧ್ಯತೆ ಇರಲಿಲ್ಲ. ಬಸ್ಸಿನವರು ಎಲ್ಲಿ ನನ್ನನ್ನು ಬಿಟ್ಟು ಹೊರಟುಹೋಗುತ್ತಾರೋ ಎಂಬ ಭಯದಿಂದ ಲಗುಬಗೆಯಿಂದ ವಾಪಾಸು ಬಂದೆ. ಥಾಲ್ಯಾಂಡಿಗೆ ಬಂದೂ ಸೆವೆನ್/ಇಲೆವನ್ನಂತಹ ಒಂದು ಅಂಗಡಿ ನೋಡದಿದ್ದರೆ ದಂಡ ಅನ್ನಿಸಿದ್ದ ಕಾರಣ, ಒಮ್ಮೆ ಅಂಗಡಿ ನೋಡಿದ ಮೇಲೆ ಸಮಾಧಾನ ಆಗಿತ್ತು. (ಅವಳು ಹೇಳಿದ ಬೊಂಬೆ ಆ ನಂತರ ಬ್ಯಾಂಕಾಕಿನ ಮಾಲ್ ಒಂದರಲ್ಲಿ ಸಿಕ್ಕಿಯೇ ಬಿಟ್ಟಿತ್ತು, ಅದು ಬೇರೆ ಸಂಗತಿ)

ಬದುಕಿನ ಒಂದು ಭಾಗ
        'ನಾನು ನಿಮ್ಮ ಸೆವೆನ್/ಇಲೆವನ್ಗೆ ಹೋಗಿ ಬಂದೆ' ಎಂದು ಬರುತ್ತಾ ಬಸ್ಸಿನಲ್ಲಿ ದಾರಾಗೆ ಹೇಳಿದೆ. ಗೊಂಬೆ ಸಿಗಲಿಲ್ಲ ಎಂದೆ. 'ಹಾಗಲ್ಲ. ಈ ಅಂಗಡಿಗಳವರು ಜನಸಾಮಾನ್ಯರ ಆಸಕ್ತಿ ಗಮನಿಸುತ್ತಾರೆ. ದೈನಂದಿನ ಬದುಕಿಗೆ ಸುತ್ತಲ ಜನಕ್ಕೆ ಏನೆಲ್ಲಾ ಬೇಕಾಗುತ್ತದೆಂಬ ಸಮೀಕ್ಷೆ ಮಾಡುತ್ತಾರೆ. ಪಟ್ಟಿ ಮಾಡುತ್ತಾರೆ. ಅವನ್ನೆಲ್ಲಾ ತರಿಸಿ ಇಟ್ಟುಕೊಂಡಿರುತ್ತಾರೆ. ಥಾಯೀ ಸಂಸ್ಕೃತಿಯ ಜನಕ್ಕೆ ಥಾಯೀ ಸಂಸ್ಕೃತಿಯ ವಸ್ತುಗಳು ಸಿಗುತ್ತವೆ. ನೀವು ಹೇಳಿದ ಗೊಂಬೆ ಸಾಮಾನ್ಯರು ಕೊಳ್ಳುವಂತಾದ್ದಲ್ಲ. ಬೇಕಿದ್ದರೆ, ತಿಳಿಸಿದರೆ ತರಿಸಿಕೊಡುತ್ತಾರೆ' ಎಂದಳು. ಸೆವೆನ್/ಇಲೆವನ್ನಲ್ಲಿ ಎಟಿಎಮ್ ಮೇಶಿನ್ಗಳೂ ಇದ್ದುವು. ಇಲೆಕ್ಟ್ರಾನಿಕ್ ವಸ್ತುಗಳೂ ಇದ್ದುವು. ಸೆಲ್ಫೋನ್ ಮಾರಾಟ, ಅವುಗಳಿಗೆ ಕರೆನ್ಸಿ ಹಾಕುವ ಕಾಯಕ ಸಹಾ ಇತ್ತು. ಅವರದ್ದೇ ಸ್ವಂತ ಲಘು ಪಾನೀಯ ಉತ್ಪಾದಿಸಿ ಮಾರುತ್ತಾರೆ. ಮೊಸರು, ಮಜ್ಜಿಗೆ ಸದಾ ಕಾಲ ಲಭ್ಯ. ಶಾಲಾ ಮಕ್ಕಳೂ ಸಹಾ ತಿನ್ನಲು, ಕುಡಿಯಲು ಸೆವೆನ್/ಇಲೆವನ್ಗೇ ಮುತ್ತಿಗೆ ಹಾಕುತ್ತಾರೆ. ಹೀಗೆ ಥಾಲ್ಯಾಂಡ್ನಲ್ಲಿ ಕಿತ್ತಳೆೆ/ಹಸಿರು ಬಣ್ಣದ ಸೆವೆನ್/ಇಲೆವನ್ ಬೋಡರ್ಿನ ಅಂಗಡಿಗಳು ಅವರ ಜೀವನದ ಅವಿಭಾಜ್ಯ ಅಂಗವಾಗಿವೆ.

ಸೆವೆನ್/ಇಲೆವೆನ್ ಕಥೆ
         ಈ ಸೆವೆನ್/ಇಲೆವನ್ ಹೆಸರು ಯಾಕೆ ಹಾಗೆ ? ಅವು ಹುಟ್ಟಿದ್ದಾದರೂ ಎಲ್ಲಿಂದ ? ಎಂತ ಹುಡುಕ ಹೊರಟರೆ ಸ್ವಾರಸ್ಯಕರ ಘಟನಾವಳಿ ತೆರೆದುಕೊಳ್ಳುತ್ತದೆ. ಈ ಅಂಗಡಿಯ ಮೂಲ ಅಮೇರಿಕಾ. ಟೆಕ್ಸಾಸ್ ಪ್ರಾಂತ್ಯದ ಡಲ್ಲಾಸ್ನಲ್ಲಿ ಸೌತ್ಲ್ಯಾಂಡ್ ಐಸ್ ಕಂಪೆನಿಯ ಉದ್ಯೋಗಿಯಾಗಿದ್ದ ಜೋ.ಸಿ. ಥಾಂಪ್ಸನ್ ಎಂಬಾತ 1922ರಲ್ಲಿ ಐಸ್ ಮಾರಾಟದ ಅಂಗಡಿಯೊಂದರಿಂದ ಹಾಲು, ಮೊಟ್ಟೆ, ಬ್ರೆಡ್ಡು ಮಾರಾಟ ಆರಂಭಿಸಿದ. ಹತ್ತಿರ ಬೇರೆ ದಿನಸಿ ಅಂಗಡಿಗಳು ಇದ್ದರೂ ಆತನಲ್ಲಿ ಐಸ್ನಲ್ಲಿಟ್ಟು ಸಂರಕ್ಷಿಸುವ ಸೌಲಭ್ಯ ಇದ್ದ ಕಾರಣ ಜನ ಆತನ ಅಂಗಡಿಗೇ ಬರಲಾರಂಭಿಸಿದರು. ಇದರಿಂದ ಉತ್ತೇಜಿತನಾದ ಥಾಂಪ್ಸನ್ ಕ್ರಮೇಣ ಸೌತ್ಲ್ಯಾಂಡ್ ಕಂಪೆನಿಯನ್ನು ಖರೀದಿಸಿ 'ಸೌತ್ಲ್ಯಾಂಡ್ ಕಾಪರ್ೋರೇಶನ್' ಹೆಸರಿಟ್ಟು ಡಲ್ಲಾಸ್ನ ಸುತ್ತಮುತ್ತ  ಸರಣಿ ಅಂಗಡಿಗಳನ್ನು ತೆರೆದ. ಅಂಗಡಿಗಳು ಬೆಳಿಗ್ಗೆ 7ರಿಂದ ರಾತ್ರಿ 11ರ ತನಕ ದೀಘರ್ಾವಧಿ ತೆರೆದಿರುತ್ತಿತ್ತು. ಆದ ಕಾರಣ ಜನ ಈ ಅಂಗಡಿಗಳನ್ನು 'ಸೆವೆನ್/ಇಲೆವನ್' ಎಂದು ಕರೆದರು. 1946ರಲ್ಲಿ  ಕಂಪೆನಿ ಈ ಅಂಗಡಿಗಳಿಗೆ ಅದೇ ಹೆಸರಿಡಲಾರಂಭಿಸಿತು.

ವಿಶ್ವವ್ಯಾಪಿ 
         1952ರಲ್ಲಿ ಅಂಗಡಿಗಳ ಸಂಖ್ಯೆ 100 ಮುಟ್ಟಿತು. 1962ರಲ್ಲಿ ಅಂಗಡಿಗಳನ್ನು 24 ಗಂಟೆ ಕಾಲ ತೆರೆದಿಡುವ ಪ್ರಯೋಗ ಯಶಸ್ವಿಯಾಯಿತು. 1980ರಲ್ಲಿ ಆಥರ್ಿಕ ಮುಗ್ಗಟ್ಟು ಬಂದು ಮಂಜುಗಡ್ಡೆವಿಭಾಗ ಮಾರಿದರೂ ದಿವಾಳಿತನ ತಪ್ಪಿಸಲಾಗದೇ ತಂದೆ ಸ್ಥಾಪಿಸಿದ ಕಂಪೆನಿಯನ್ನು ಮಗ ಥಾಂಪ್ಸನ್ ಜಪಾನಿನ ಇಟೋಯೊಕಾಡೋ ಕಂಪೆನಿಯ ನಿಯಂತ್ರಣಕ್ಕೆ ಒಪ್ಪಿಸಿದ. ಅವರು ಸೆವೆನ್ ಆ್ಯಂಡ್ ಒನ್ ಹೋಲ್ಡಿಂಗ್ ಕಂಪೆನಿ ಸ್ಥಾಪಿಸಿ ಜಗತ್ತಿನಾದ್ಯಂತ ಈ ಅಂಗಡಿಗಳನ್ನು ವಿಸ್ತರಿಸಿದರು. ಅಮೇರಿಕಾದ 'ವೈಟ್ಹೆನ್' ಕಂಪೆನಿ ಖರೀದಿಸಿ ಅವರ ಅಂಗಡಿಗಳಿಗೂ ಸೆವೆನ್/ಇಲೆವನ್ ಹೆಸರಿಟ್ಟರು. ವಿಶ್ವದಲ್ಲೇ ಅತೀ ದೊಡ್ಡ ಅಂಗಡಿಗಳ ಗುಚ್ಛ ಇವರದು. 39153 ಅಂಗಡಿಗಳಲ್ಲಿ ಜಪಾನ್ನದು ಸಿಂಹಪಾಲು 12925. ಬರೇ ಟೋಕಿಯೋ ಒಂದರಲ್ಲೇ 1713 ಅಂಗಡಿಗಳಿವೆ. ಥಾಲ್ಯಾಂಡ್ನಲ್ಲಿ ಸಿಪಿಆಲ್ ಪಬ್ಲಿಕ್ ಕಂಪೆನಿ ಲಿಮಿಟೆಡ್ನಡಿ ಅಂಗಡಿಗಳನ್ನು ವಿತರಿಸಲಾಗುತ್ತಿದೆ. ಅಮೇರಿಕಾದಲ್ಲೇ 6500 ಅಂಗಡಿಗಳಿವೆ. ಥಾಲ್ಯಾಂಡಿಗೆ ಮೂರನೇ ಸ್ಥಾನ. ಕೆನಡಾ, ಆಸ್ಟ್ರೇಲಿಯಾ, ಪಿಲಿಪ್ಪೀನ್ಸ್, ಹಾಂಗ್ಕಾಂಗ್, ಸಿಂಗಾಪುರ, ಚೀನಾ, ದ.ಕೊರಿಯಾ, ಇಂಡೋನೇಶ್ಯಾ, ಮಲೇಶ್ಯಾ, ಥೈವಾನ್, ಮಕಾವ್ ಹೀಗೆ 16 ರಾಷ್ಟ್ರಗಳಲ್ಲಿ ಈ ಅಂಗಡಿಗಳ ಸಮೂಹಗಳಿವೆ.

ಬಹುಮುಖ ಸೇವೆ
        ಬರೇ ಆವಶ್ಯಕ ಸಾಮಾಗ್ರಿ ಮಾರಾಟ ಮಾತ್ರವಲ್ಲ - ವಿದ್ಯುತ್ ಬಿಲ್, ಫೋನ್ ಬಿಲ್ ಪಾವತಿಯನ್ನೂ ಇಲ್ಲಿ ಮಾಡಬಹುದು. ವಿಮಾನದ ಟಿಕೇಟು ಆನ್ಲೈನ್ನಲ್ಲಿ ಬುಕ್ ಮಾಡಿ ಅವರು ಕೊಡುವ ಕೋಡ್ ನಂಬರ್ ಹಿಡಿದುಕೊಂಡು ಸೆವೆನ್/ಇಲೆವನ್ಗೆ ಬಂದರೆ ಟಿಕೇಟ್ ಹಣ ಸಹಾ ಇಲ್ಲೇ ಪಾವತಿಸಬಹುದು. ಹೀಗೆ ಬಹುಮುಖ ಸೇವೆ ಈ ಸೆವೆನ್/ಇಲೆವನ್ಗಳದು. ಚೊಕ್ಕಟವಾದ ಅಂಗಡಿ, ನಗುಮೊಗದ ಕ್ಷಿಪ್ರ ಸೇವೆ ಅವರ ಯಶಸ್ಸಿನ ಗುಟ್ಟು. ಥಾಲ್ಯಾಂಡ್ನಲ್ಲಿ ಪ್ರವಾಹ ಪ್ರಕೋಪ ಉಂಟಾದಾಗ ದೇಣಿಗೆಗಳನ್ನೂ ಸಹಾ ಇಲ್ಲೇ ಸಂಗ್ರಹಿಸಿ ಸರಕಾರಕ್ಕೆ ಕೊಡುವ ಕೆಲಸ ಮಾಡಿದ ಸೆವೆನ್/ಇಲೆವನ್ ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿತ್ತು. ಈಗ ಸ್ಮಾಟರ್್ ಕಾಡರ್್ ವಿತರಿಸಿ ಸುಲಭದಲ್ಲಿ ಖರೀದಿಗೆ ಸೌಲಭ್ಯ ಮಾಡಿಕೊಟ್ಟಿದೆ. ಪರ್ಸನಲ್ಲಿ ಸ್ಮಾರ್ಟಕಾರ್ಡ ಇಟ್ಟುಕೊಂಡು ತೆರಳಿದರೆ, ಪರ್ಸ ತಟ್ಟಿದರೆ ಸಾಕು, ಸೆನ್ಸರ್ಗಳು ಅದನ್ನು ಗ್ರಹಿಸಿ ಬಿಲ್ ತನ್ನಿಂತಾನೇ ಪಾವತಿ ಆಗುವ ವ್ಯವಸ್ಥೆ ಇದೆ. ಪರ್ಸ ತೆರೆಯಬೇಕಾಗಿಯೇ ಇಲ್ಲ, ಚಿಲ್ಲರೆಗಾಗಿ ತಡಕಾಡಬೇಕಾಗಿಯೂ ಇಲ್ಲ.

ಭಾರತಕ್ಕೂ ಬಂದೀತು
       ಹೀಗೆ ಜನರ ಆಸೆ, ಹಂಬಲಗಳಿಗೆ ಸ್ಪಂದಿಸುವ ರೀತಿಯ ವ್ಯಾಪಾರ ಮಾಡುತ್ತಾ, ಜನಪ್ರಿಯಗೊಳ್ಳುತ್ತಾ ಇರುವ ಸೆವೆನ್/ಇಲೆವನ್ ಜಗತ್ತನ್ನೇ ಗೆಲ್ಲುವ ಮಹತ್ವಾಕಾಂಕ್ಷೆಯ ದಾಪುಗಾಲು ಹಾಕುತ್ತಾ ಬರುತ್ತಲಿದೆ. ಭಾರತಕ್ಕೂ ಒಂದು ದಿನ ಸೆವೆನ್/ಇಲೆವನ್ ಕಾಲಿಟ್ಟೀತು. ಆಗ ದಾರಾ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾಗದೇ 'ಹೌದು, ನಮ್ಮ ದೇಶದಲ್ಲೂ ಸೆವೆನ್/ಇಲೆವನ್ ಇದೆ. ರಾತ್ರಿ ಹನ್ನೆರಡಾದರೂ ಅತಿಥಿಗಳು ಬಂದರೆ ನಾವು ಊಟ ಹಾಕುವ ವ್ಯವಸ್ಥೆ ಇದೆ' ಎಂದು ಸಂತೋಷದಿಂದ ಉತ್ತರಿಸುವ ದಿನ ಬಂದೀತು.

                     

                                           ಕುಂದಾಪ್ರ ಡಾಟ್ ಕಾಂ

                   

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅನುಭವದ ಆಳದಿಂದ All Rights Reserved.
Template Design by Herdiansyah Hamzah | Published by Kundapra Dot Com